ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ, ಅಲ್ಲದೆ ಭಾರತದಲ್ಲಿರುವ ಅಮೆರಿಕ ಪ್ರಜೆಗಳು ಆದಷ್ಟು ಬೇಗ ತೊರೆಯಿರಿ ಎಂದು ತನ್ನ ಪ್ರಜೆಗಳಿಗೆ ಅಮೆರಿಕ ಸಲಹೆ ನೀಡಿದೆ.

ಅಮೆರಿಕ ಭಾರತವನ್ನು ಲೆವೆಲ್ 4 ಟ್ರಾಲೆವ್ ಅಡ್ವೈಸರಿಯಲ್ಲಿರಿಸಿದ್ದು, ಭಾರತದಲ್ಲಿ ವೈದ್ಯಕೀಯ ಆರೈಕೆ ತುಂಬಾ ಸೀಮಿತವಾಗಿದೆ, ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ, ಭಾರತದಲ್ಲಿನ ಅಮೆರಿಕನ್ನರು ಸಹ ತಾಯ್ನಾಡಿಗೆ ಮರಳಿ ಎಂದು ಅಮೆರಿಕ ತಿಳಿಸಿದೆ.

ಭಾರತದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಕಾರಣ ವೈದ್ಯಕೀಯ ಆರೈಕೆ ತುಂಬಾ ಸೀಮಿತವಾಗಿದೆ. ಹೀಗಾಗಿ ಅಮೆರಿಕ ಪ್ರಜೆಗಳು ಆದಷ್ಟು ಬೇಗ ಮರಳಲು ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಿ. ದಿನ ನಿತ್ಯ ಅಮೆರಿಕಕ್ಕೆ ವಿಮಾನಗಳಿದ್ದು, ಪ್ಯಾರಿಸ್ ಹಾಗೂ ಫ್ರಾಂಕ್‍ಫರ್ಟ್ ಮಾರ್ಗವಾಗಿ ಸಂಚರಿಸಲಿವೆ ಎಂದು ಟ್ರಾವೆಲ್ ಸ್ಟೇಟ್ ಡಿಪಾರ್ಟ್‍ಮೆಂಟ್ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದೆ.

ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಸಹ ಈ ಕುರಿತು ಟ್ವೀಟ್ ಮಾಡಿದ್ದು, ಅಮೆರಿಕ ನಾಗರಿಕರು ಸ್ಟೆಪ್(ಸ್ಮಾರ್ಟ್ ಟ್ರಾವೆಲರ್ ಎನ್ರೋಲ್‍ಮೆಂಟ್ ಪ್ರೊಗ್ರಾಮ್) ನಲ್ಲಿ ನೋಂದಾಯಿಸಿಕೊಳ್ಳಬಹುದು. step.state.gov ವೆಬ್‍ಸೈಟ್‍ನಲ್ಲಿ ಭಾರತದಲ್ಲಿ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ರಾಯಭಾರ ಕಚೇರಿಯಿಂದ ಮಾಹಿತಿ ಪಡೆಯವಹುದು ಎಂದು ತಿಳಿಸಿದೆ.

ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಮತ್ತು ಮೃತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 3,645 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಮರಣ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಎರಡನೇ ಅಲೆಯ ಆತಂಕ ಜನರಲ್ಲಿ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 3,79,257 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದೆ.

The post ಕೊರೊನಾ ಸಂಕಷ್ಟ- ಆದಷ್ಟು ಬೇಗ ಭಾರತ ತೊರೆಯಿರಿ, ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ appeared first on Public TV.

Source: publictv.in

Source link