ಕಲಬುರಗಿ: ಕೊರೊನಾ ಸೋಂಕಿನಿಂದಾಗಿ ಮಾಜಿ ಸಚಿವ, ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ ಕೊನೆಯುಸಿರೆಳೆದಿದ್ದಾರೆ. 82 ವರ್ಷದ ಕೆ.ಬಿ. ಶಾಣಪ್ಪ ಅವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು.ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಅವರನ್ನ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಜೆ.ಹೆಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕೆ.ಬಿ. ಶಾಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಕೆ. ಬಿ. ಶಾಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು..  ಅವರು ಕಾರ್ಮಿಕ ನಾಯಕರಾಗಿ, ಶಹಾಬಾದ್ ಶಾಸಕರಾಗಿ, ಜೆ ಎಚ್. ಪಟೇಲ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಗೆ ಸೇರ್ಪಡೆಯಾದ ನಂತರ ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಶಾಣಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದ  ಪ್ರಭಾವಿ ದಲಿತ ನಾಯಕರಾಗಿದ್ದರು. ಸದನದಲ್ಲಿ ಸದಾ ನೊಂದ ಜನರ ದನಿಯಾಗಿದ್ದರು. ಅವರ ನಿಧನದಿಂದ ಒಬ್ಬ ನೇರ ನಿಷ್ಠುರ ನಡವಳಿಕೆಯ ನಾಯಕನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ  ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ  ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಸಂತಾಪ

ಮಾಜಿ ಸಚಿವರು, ಮಾಜಿ ರಾಜ್ಯಸಭಾ ಸದಸ್ಯರು ಆಗಿದ್ದ  ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ. ಬಿ. ಶಾಣಪ್ಪನವರು ಕೊರೊನಾ ಸೋಂಕಿನಿಂದ ನಿಧನರಾದ ಸುದ್ದಿ ಮನಸ್ಸಿಗೆ ಅತೀವ ದುಃಖವನ್ನುಂಟು ಮಾಡಿದೆ . ಅಭಿಮಾನಿಗಳು ಮತ್ತು ಕುಟುಂಬವರ್ಗಕ್ಕೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

 

ಪ್ರಭಾವಿ ದಲಿತ ಮುಖಂಡರು ,ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಸಜ್ಜನ ರಾಜಕಾರಣಿ ಕೆ.ಬಿ.ಶಾಣಪ್ಪ ಅವರ ನಿಧನಕ್ಕೆ ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ತೀವ್ರ ಕಂಬನಿ ಮಿಡಿದಿದ್ದಾರೆ. ಮೂಲತಃ ಜನತಾ ಪರಿವಾರದವರಾಗಿದ್ದ ಶಾಣಪ್ಪ ಅವರು ಬಳಿಕ ಆರ್ ಎಸ್ ಎಸ್ ಸಿದ್ದಾಂತದ ಕಡೆ ಆಕರ್ಷಿತರಾಗಿ ಬಿಜೆಪಿಗೆ ಸೇರ್ಪಡೆಯಾಗಿ ರಾಜ್ಯದಲ್ಲಿ ಪಕ್ಷ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.

ವಿಶೇಷವಾಗಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸುವಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಪಕ್ಷ ನಿಷ್ಟೆಗೆ ಹೆಸರುವಾಸಿಯಾಗಿದ್ದ ಅವರು ನಂಬಿಕೆ ಸಿದ್ದಾಂತಕ್ಕೆ ಎಂದೂ ಕೈ ಬಿಟ್ಟವರಲ್ಲ. ಅಧಿಕಾರ ಇರಲಿ,‌ ಅಥವಾ ಇಲ್ಲದಿರಲಿ, ಪಕ್ಷ ನಿಷ್ಟೆ ಮಾತ್ರ ಅಚಲವಾಗಿತ್ತು.

ಅವರ ವ್ಯಕ್ತಿತ್ವವನ್ನು  ಗುರುತಿಸಿದ್ದ ಬಿಜೆಪಿ ನಾಯಕರು ಅತ್ಯಂತ ಹಿರಿಯ ಸದನ ಎನಿಸಿದ ರಾಜ್ಯಸಭೆ ಹಾಗೂ ವಿಧಾನಪರಿಷತ್ ಗೂ ಆಯ್ಕೆ ಮಾಡಿದ್ದರು. ಕಾರ್ಮಿಕ ದುರೀಣರಾಗಿ,‌ಮೊದಲು ಕಮ್ಯುನಿಸ್ಟ್ ಪಕ್ಷದಿಂದ ಶಾಸಕರಾಗಿ  ಆಯ್ಕೆಯಾದರು. ಸದಸ್ಯರಾಗಿ, ಸಚಿವರಾಗಿ , ಜನಸೇವೆ ಮಾಡಿದ ಧೀಮಂತ ನಾಯಕರಾಗಿದ್ದಾರೆ. ಸಂಘಟನಾ ಚತುರರಾಗಿದ್ದರು. ವಾಗ್ಮಿಗಳಾಗಿದ್ದರು.  ಅವರ ಅಗಲಿಕೆಯಿಂದ ದುಡಿಯುವ ವರ್ಗಕ್ಕೆ, ರಾಜಕೀಯ ಕ್ಷೇತ್ರಕ್ಕೆ, ಈ ಪ್ರದೇಶಕ್ಕೆ  ಅಪಾರ ನಷ್ಟ ಉಂಟಾಗಿದೆ.  ಅವರ ಕುಟುಂಬ ವರ್ಗದವರು, ಅನುಯಾಯಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಕುಟುಂಬ ವರ್ಗದವರಿಗೆ ಹಾಗೂ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಇಂತಹ ಒಬ್ಬ ಸಜ್ಜನ ರಾಜಕಾರಣಿ ಕೊರೊನಾಕ್ಕೆ ಬಲಿಯಾಗಿದ್ದು ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಕ್ಕು, ಅವರ ಕುಟುಂಬದವರಿಗೆ ಭಗವಂತನು ದುಃಖವನ್ನು ಭರಿಸುವ ಶಕ್ತಿ ನೀಡಲಿ.

ಸಚಿವ ಮುರುಗೇಶ್ ನಿರಾಣಿ

The post ಕೊರೊನಾ ಸೋಂಕಿನಿಂದಾಗಿ ಮಾಜಿ ಸಚಿವ ಕೆ.ಬಿ. ಶಾಣಪ್ಪ ವಿಧಿವಶ appeared first on News First Kannada.

Source: newsfirstlive.com

Source link