ಗಾಂಧಿನಗರ: ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕಾರಿಯಾ ಅವರ ತಂದೆ ಕಾಂಜಿಭಾಯ್ ಸಕಾರಿಯಾ ಅವರು ಕೊರೊನಾ ಸೋಂಕಿನಿಂದಾಗಿ ಇಂದು ಗುಜಾರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

ಕೊರೊನಾದಿಂದಾಗಿ ಐಪಿಎಲ್ ಅರ್ಧದಲ್ಲೇ ಸ್ಥಗಿತಗೊಂಡ ಬಳಿಕ ಚೇತನ್ ಸಕಾರಿಯಾ ಮನೆಗೆ ಬಂದಿದ್ದರು. ಈ ವೇಳೆ ಅವರ ತಂದೆ ಕಾಂಜಿಭಾಯ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಗುಜಾರಾತ್‍ನ ಖಾಸಗಿ ಆಸ್ಪತ್ರೆಯೊಂರಲ್ಲಿ ಸೇರಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಟ್ವಿಟ್ಟರ್‍ ನಲ್ಲಿ ತಿಳಿಸಿರುವ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ, ಕೊರೊನಾದಿಂದಾಗಿ ಚೇತನ್ ಸಕಾರಿಯಾ ಅವರ ತಂದೆ ಮೃತಪಟ್ಟಿದ್ದಾರೆ ಇದು ದುಂಬಾ ದುಃಖ ತರಿಸಿದೆ. ನಮ್ಮಿಂದ ಸಾಧ್ಯವಾಗುವಷ್ಟು ಚೇತನ್ ಮತ್ತು ಅವರ ಕುಟುಂಬಕ್ಕೆ ಸಹಾಯ ಮಡಲು ಪ್ರಯತ್ನಿಸುತ್ತೇವೆ ಎಂದು ಬರೆದುಕೊಂಡಿದೆ.

ಕೆಲದಿನಗಳ ಹಿಂದೆ ಚೇತನ ಸಕಾರಿಯಾ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿ ನಾನು ತುಂಬಾ ಅದೃಷ್ಟಶಾಲಿ ಯಾಕೆಂದರೆ ಐಪಿಎಲ್‍ನಲ್ಲಿ ಆಡಿದ್ದಕ್ಕಾಗಿ ರಾಜಸ್ಥಾನ ಫ್ರಾಂಚೈಸಿ ನನಗೆ ಹಣ ಕೊಟ್ಟಿದೆ. ಆ ಹಣವನ್ನು ನಾನು ನನ್ನ ಕುಟುಂಬದ ಕಷ್ಟ ಕಾಲದ ನೆರವಿಗಾಗಿ ಬಳಸುತ್ತಿದ್ದೇನೆ. ರಾಜಸ್ಥಾನ ತಂಡ ನೀಡಿದ ಹಣದಿಂದಾಗಿ ಇದೀಗ ನನ್ನ ತಂದೆಗೆ ಗುಜಾರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊರೊನಾ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದಿದ್ದರು.

23 ವರ್ಷದ ಎಡಗೈ ವೇಗಿ ಚೇತನ್ ಸಕಾರಿಯಾ ಅವರನ್ನು 1.2 ಕೋಟಿ ರೂಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ತಂಡ ಖರೀದಿ ಮಾಡಿತ್ತು. 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಸಕಾರಿಯಾ ಒಟ್ಟು 7 ಪಂದ್ಯಗಳಿಂದ 7 ವಿಕೆಟ್ ಪಡೆದು ಭರವಸೆ ಮೂಡಿಸಿದ್ದರು.

The post ಕೊರೊನಾ ಸೋಂಕಿನಿಂದ ತಂದೆಯನ್ನು ಕಳೆದುಕೊಂಡ ಚೇತನ್ ಸಕಾರಿಯಾ appeared first on Public TV.

Source: publictv.in

Source link