ಬಾಗಲಕೋಟೆ: ಕೊರೊನಾ ಮೂರನೇ ಅಲೆ ಬರುತ್ತೆ. ನಾವು-ನೀವು ಎಲ್ಲರೂ ಉಳಿಯಬೇಕು. ಆದರೆ ನೀವು ಉಳಿತಿರೋ ಇಲ್ವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಇಂದು ಬನಹಟ್ಟಿ ನಗರದಲ್ಲಿ ಕೋವಿಡ್ ಸೋಂಕಿನ ತಡೆಯುವ ವಿಚಾರವಾಗಿ ಅಧಿಕಾರಿಗಳು ಮತ್ತು ವೈದ್ಯರ ಸಭೆ ನಡೆಯಿತು. ಈ ವೇಳೆ ಸ್ಥಳೀಯರಿಂದ ಜಿಲ್ಲಾಡಳಿತಕ್ಕೆ ಒಂದು ಆಕ್ಸಿಜನ್ ಕಾನ್ಸಂಟ್ರೇಟರ್ ದೇಣಿಗೆ ನೀಡುವುದು ಹಾಗೂ ಇಂತಹ ಮಿಷನ್​ಗಳನ್ನು ಸರ್ಕಾರದಿಂದ ಹೆಚ್ಚೆಚ್ಚು ಒದಗಿಸುವಂತೆ ಸಭೆಯಲ್ಲಿ ಸಲಹೆ ನೀಡಿದ್ದರು.

ಆದರೆ ಸಲಹೆಯನ್ನ ಸ್ವೀಕರಿಸಲು ಸಿದ್ಧವಾಗಿರದ ಸಚಿವ ಉಮೇಶ್​ ಕತ್ತಿ ಅವರು, ಮೂರನೇ ಅಲೆಗೆ ನೋಡೋಣ ಎಂದರು. ಹಾಗೆಯೇ ಮೂರನೇ ಅಲೆ ಬರುತ್ತೆ ನಾವು-ನೀವು ಉಳಿಯಬೇಕು ಎನ್ನುವ ವಿಚಾರ ಹೇಳಿದರು. ಇದಕ್ಕೆ ಸಭೆಯಲ್ಲಿದ್ದವರು ನಾವು ಉಳಿಬೇಕು ಅಲ್ವಾ ಸರ್ ಎಂದು ಮರು ಪ್ರಶ್ನಿಸಿದ್ದರು, ಇದಕ್ಕೆ ನಗುತ್ತಾ ಉತ್ತರಿಸಿದ ಸಚಿವರು ನೀವು ಉಳಿತಿರೋ ಇಲ್ವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಸಂಸದ ಪಿ.ಸಿ ಗದ್ದಿಗೌಡರ ಅವರು ಸಚಿವರ ಮಾತಿಗೆ ಹಣೆ ಚಚ್ಚಿಕೊಂಡರು.

ಇದಕ್ಕೂ ಮುನ್ನ ಬನಹಟ್ಟಿ ಕೋವಿಡ್ ಸೆಂಟರ್​​ಗೆ ಭೇಟಿ ನೀಡಿದ್ದ ಸಚಿವ ಉಮೇಶ್ ಕತ್ತಿ ಅವರು, ಇತರೆ ಸೋಂಕಿತರಿಗೆ ಬೆಡ್​ಗಳ ಅವಕಾಶ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

The post ಕೊರೊನಾ 3ನೇ ಅಲೆಯಲ್ಲಿ ನೀವು​ ಉಳಿಯದೇ ಹೋದ್ರೂ.. ನಾನು ಉಳಿಯಬೇಕು- ಉಮೇಶ್​ ಕತ್ತಿ appeared first on News First Kannada.

Source: newsfirstlive.com

Source link