ಕೊರೊನಾ 3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು: ಆರೋಗ್ಯ ಸಚಿವ ಸುಧಾಕರ | Coronavirus 3rd Wave Karnataka May Witness Upto 1 lakh cases at Peak Says Health Minister Dr K Sudhakara


ಕೊರೊನಾ 3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು: ಆರೋಗ್ಯ ಸಚಿವ ಸುಧಾಕರ

ಆರೋಗ್ಯ ಸಚಿವ ಡಾ.ಕೆ.ಸುಧಾಕರ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ 3ನೇ ಅಲೆಯು ಉತ್ತುಂಗಕ್ಕೆ ಹೋದಾಗ ಪ್ರತಿದಿನ ಸರಾಸರಿ 80 ಸಾವಿರದಿಂದ 1.20 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು. ಈ ವಿಷಯವನ್ನು ತಜ್ಞರ‌ ವರದಿ ತಿಳಿಸಿದೆ. ವರದಿಯಲ್ಲಿ ಉಲ್ಲೇಖಿಸಿರುವಂತೆಯೇ ಪ್ರಸ್ತುತ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಏರಿದಷ್ಟೇ ವೇಗವಾಗಿ ಸೋಂಕು ಪ್ರಕರಣಗಳು ಇಳಿಯಬಹುದು. ಫೆಬ್ರುವರಿ 2 ಅಥವಾ 3ನೇ ವಾರದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ಟೆಸ್ಟ್​ ಮಾಡಲಾಗುತ್ತಿದೆ. ಪ್ರತಿದಿನ 2ರಿಂದ 2.50 ಲಕ್ಷ ಟೆಸ್ಟ್ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊವಿಡ್ ಕೇಸ್ ಹೆಚ್ಚಾಗುತ್ತಿದೆ. ಇಂದು ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದ್ದು, ಸಾವಿನ ಪ್ರಮಾಣ ಕಡಿಮೆಯಾಗಿದೆ. ವೀಕೆಂಡ್​ ಕರ್ಫ್ಯೂ ಬಗ್ಗೆ ಶುಕ್ರವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದು ಮುಂದಿನ ಕ್ರಮಗಳ ಬಗ್ಗೆ ತೀರ್ಮಾಣ ತೆಗೆದುಕೊಳ್ಳುತ್ತೇವೆ ಎಂದು ಅವರು ವಿವರಿಸಿದರು. ಮಾಸ್ಕ್ ಬೇಡ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಅವರೇ ಮತ್ತೆ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ ಎಂದರು.

ಕೊವಿಡ್​ ಕೇರ್​ ಸೆಂಟರ್​ ಸ್ಥಾಪನೆ ಹಾಗೂ ನಿರ್ವಹಣೆ ಕುರಿತು 18 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿದ್ದಾರೆ. ಒಂದೆರಡು ವಾರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದರೂ ಅದನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಬೂಸ್ಟರ್​ ಡೋಸ್​ ಪಡೆಯಬೇಕು. ಫ್ರಂಟ್​ಲೈನ್ ವಾರಿಯರ್ಸ್​​ ಇರುವುದರಿಂದ ಲಸಿಕೆ ಪಡೆಯಿರಿ ಎಂದು ಅವರು ಸೂಚಿಸಿದರು. 15-17 ವರ್ಷದ ಶೇ 60ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಲಸಿಕಾರಣವನ್ನು ಪೂರ್ಣಗೊಳಿಸಲಾಗುವುದು ಎಂದರು.

ಬೆಂಗಳೂರು ನಗರದಲ್ಲಿ ಇಂದು 25,595 ಕೊರೊನಾ ಪ್ರಕರಣ​ ಪತ್ತೆಯಾಗಿವೆ. ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ 16 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ಜನರು ಕೊರೊನಾ ನಿಯಮಗಳನ್ನು ಪಾಲಿಸಿಬೇಕು. ರಾಜ್ಯದಲ್ಲಿ ಇಂದು ಒಟ್ಟು 41,457 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ 22.03ರಷ್ಟಿದೆ. ಲಸಿಕೆ ಪಡೆಯದವರ ಮೇಲೆ ಈ ಬಾರಿ ವೈರಸ್​ ಪ್ರಭಾವ ಹೆಚ್ಚು ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (Indian Council of Medical Research – ICMR) ರೂಪಿಸಿರುವ ಮಾರ್ಗಸೂಚಿಗೆ ಅನುಗುಣವಾಗಿ ಕೊವಿಡ್ ತಪಾಸಣೆಗಳಿಗೆ ವೇಗ ನೀಡಲು ಸಲಹೆ ಮಾಡಲಾಗಿದೆ. ರಾಜ್ಯದ ಪ್ರತಿಜಿಲ್ಲೆಯಲ್ಲಿಯೂ, ಪ್ರತಿ ಗ್ರಾಮದಲ್ಲಿಯೂ ಕೊರೊನಾ ವಾರ್​ರೂಂ ಸ್ಥಾಪನೆಯಾಗಬೇಕಿದೆ. ಇದರಿಂದ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆ‌ ಆಗುತ್ತದೆ. ಹೋಂ ಐಸೋಲೇಷನ್ ಇದ್ದವರಿಗೆ ಕಿಟ್ ವ್ಯವಸ್ಥೆಗೆ ಸೂಚಿಸಿದ್ದೇವೆ. ಪಾಸಿಟಿವ್ ಬಂದಿರುವ ವ್ಯಕ್ತಿಯ ಮನೆಗೆ ಕಿಟ್​ ತಲುಪಿಸುವ ವ್ಯವಸ್ಥೆಯನ್ನು ನಗರ ಮತ್ತು ಗ್ರಾಮ ಮಟ್ಟದಲ್ಲಿ ಜಾರಿಗೊಳಿಸಲಾಗಿದೆ. ಉದ್ದೇಶಿತ 264 ಆಕ್ಸಿಜನ್ ಪ್ಲಾಂಟ್​ಗಳ ಪೈಕಿ 222ಕ್ಕೆ ಚಾಲನೆ ನೀಡಲಾಗಿದೆ ಎಂದರು.

60 ವರ್ಷ ದಾಟಿದವರಿಗೆ ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳಲು ಪ್ರಚಾರ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಈ ವಯೋಮಾನದ ಶೇ 39ರಷ್ಟು ಜನರು 3ನೇ ಲಸಿಕೆ ಪಡೆದುಕೊಂಡಿದ್ದಾರೆ. ಮುಂದಿನ ವಾರ ಈ ಕುರಿತು ಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತೇವೆ ಎಂದು ತಿಳಿಸಿದರು.

TV9 Kannada


Leave a Reply

Your email address will not be published. Required fields are marked *