ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ನೈಟ್ ಕರ್ಪ್ಯೂ ಜಾರಿಯಾಗಿದೆ. ಇದರಿಂದ ರಾತ್ರಿ 10 ಗಂಟೆಯ ಬಳಿಕ ಸುಖಾ ಸುಮ್ಮನೆ ಅಡ್ಡಾದಿಡ್ಡಿ ಓಡಾಟಕ್ಕೆ ಬ್ರೇಕ್ ಬೀಳಲಿದೆ.

ಈ ಕೊರೋನಾ ಕರ್ಪ್ಯೂ ಸಿನಿಮಾ ರಂಗದ ಮೇಲೂ ಪರಿಣಾಮ ಬೀರಲಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಅರ್ಧದಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿದ್ದು, ಕರ್ಪ್ಯೂ ಕಾರಣದಿಂದಾಗಿ ರಾತ್ರಿ 10ರೊಳಗೆ ಚಿತ್ರ ಪ್ರದರ್ಶನಗಳು ಮುಗಿಯಬೇಕಿದೆ.

ಬೆಂಗಳೂರಿನ ಪೂರ್ಣಿಮಾ ಥಿಯೇಟರ್ ನಲ್ಲಿ ಇಷ್ಟು ವರ್ಷಗಳ ಕಾಲ ನಡೆಯುತ್ತಿದ್ದ ರಾತ್ರಿ 10 ಗಂಟೆಯ ಬಳಿಕ ಶೋ ರದ್ದುಗೊಳ್ಳಲಿದೆ. 7.30ರ ಪ್ರದರ್ಶನ ಸಹ ರದ್ದುಗೊಳಿಸಲು ಕೆಲ ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.

ಮೊದಲ ಅಲೆಯ ಕೊರೋನಾ ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಚಿತ್ರ ಮಂದಿರದಲ್ಲಿ ಅರ್ಧದಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿತ್ತು. ಆದರೆ ಆ ಬಳಿಕ ಒತ್ತಾಯದ ಮೇರೆಗೆ ಶೇಕಡ 100ರಷ್ಟು ಆಸನಕ್ಕೆ ಅನುಮತಿ ದೊರಕಿತ್ತು. ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ಕೇವಲ 2 ತಿಂಗಳಲ್ಲೇ ಮತ್ತೆ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಆಸನ ಭರ್ತಿಗೆ ಅನುಮತಿ ನೀಡಲಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More