
ಮಂಕಿಪಾಕ್ಸ್
ದೇಶದಲ್ಲಿ ಮಂಕಿಪಾಕ್ಸ್ ಭೀತಿ ಹಿನ್ನೆಲೆ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಲಕ್ಷಣ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಿದೆ.
ದೇಶದಲ್ಲಿ ಮಹಾಮಾರಿ ಸೋಂಕು ಕೊರೋನಾದ 3ನೇ ಅಲೆ ಕಡಿಮೆಯಾಗಿ 4ನೇ ಅಲೆ ಭೀತಿ ಎದುರಾಗಿದೆ. ಇದೀಗ ದೇಶಕ್ಕೆ ಮಂಕಿಪಾಕ್ಸ್ (Monkey Pox) ರೋಗದ ಭಯ ಹೆಚ್ಚಿಸಿದೆ. ಈಗಾಗಲೇ ವಿದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆಯಾದ ಹಿನ್ನೆಲೆ ಭಾರತದ ಆರೋಗ್ಯ ಇಲಾಖೆ (Department of Health) ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿ (Guidelines) ಪ್ರಕಟಿಸಿದೆ. ಅಮೆರಿಕ, ಯುರೋಪ್, ಯುಕೆ, ಆಸ್ಟ್ರೇಲಿಯಾ, ಕೆನಡಾ, ಆಫ್ರಿಕಾದಲ್ಲಿ ದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದ್ದು, ಭಾರತದಲ್ಲಿ ಪತ್ತೆಯಾಗದಿದ್ದರೂ ಆತಂಕ ಸೃಷ್ಟಿಸಿದ ಹಿನ್ನೆಲೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಮಂಕಿಪಾಕ್ಸ್ ವೈರಸ್ ಬಗ್ಗೆ ಭಾರತದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕಣ್ಣಿಡಲು ಸೂಚಿನೆ ನೀಡಲಾಗಿದೆ. ಮಂಕಿಪಾಕ್ಸ್ ಇರುವ ದೇಶಗಳಿಂದ ಬಂದವರ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚಿಸಲಾಗಿದೆ. ಕಳೆದ 21 ದಿನಗಳಲ್ಲಿ ವಿದೇಶದಿಂದ ಬಂದವರನ್ನು ತಪಾಸಣೆಗೆ ನಡೆಸುವಂತೆ ಹಾಗೂ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರ ಮೇಲೂ ಕಣ್ಣಿಡಲು ಸೂಚನೆ ನೀಡಲಾಗಿದೆ.
ಮೈ ಮೇಲೆ ಗುಳ್ಳೆ ರೋಗದ ಲಕ್ಷಣ
ಮಂಕಿಪಾಕ್ಸ್ ರೋಗದ ಲಕ್ಷಣಗಳ ಬಗ್ಗೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಮೈ ಮೇಲೆ ಗುಳ್ಳೆ, ಜ್ವರ ಬರೋದು ಮಂಕಿಪಾಕ್ಸ್ ಲಕ್ಷಣ ಎಂದು ತಿಳಿಸಿದೆ. ಈ ರೋಗವು 2 ವಾರದಿಂದ 4 ವಾರಗಳ ಕಾಲ ಬಾಧಿಸಲಿದ್ದು, ಇಂಥ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.