ಕೊಪ್ಪಳ: ಜಾಮೀನಿನ ಮೇಲೆ ಹೊರ ಬಂದ ಕೊಲೆ ಆರೋಪಿಯ ಮದುವೆಯಲ್ಲಿ ಭಾಗವಹಿಸಿದ ಪೊಲೀಸ್​ ಅಧಿಕಾರಿಗಳಿಗೆ ಎಸ್​ಪಿ ಕಡ್ಡಾಯ ರಜೆ ಶಿಕ್ಷೆ ನೀಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಹನುಮೇಶ್ ನಾಯಕನ ಮಗ, ಮಹಾಂತೇಶ್ ನಾಯಕ ಕೂಡ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದ್ದು ಕಳೆದ ಎರಡು ದಿನಗಳ ಹಿಂದೆ ಕನಕಗಿರಿ ತಾಲೂಕಿನ, ಹುಲಿಹೈದರ್ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಈ ಮದುವೆಯಲ್ಲಿ ಗಂಗಾವತಿ ಡಿವೈಎಸ್​ಪಿ ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಸಿಪಿಐ ಉದಯರವಿ, ಕನಕಗಿರಿ ಪಿಎಸ್​ಐ ತಾರಾಬಾಯಿ ಮದುವೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

 

ಜಾಮೀನಿನ ಮೇಲೆ ಹೊರ ಬಂದಿರುವ ಆರೋಪಿಯ ಮದುವೆಯಲ್ಲಿ ಪೊಲೀಸ್​ ಅಧಿಕಾರಿಗಳು ಭಾಗಿಯಾಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಚರ್ಚೆ ನಡೆದಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕೊಪ್ಪಳ ಎಸ್​ಪಿ ಮದುವೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಜನವರಿ 2015ರಲ್ಲಿ ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಕನಕಪೂರ ನಿವಾಸಿಯಾದ ಯಲ್ಲಾಲಿಂಗ ಎಂಬಾತನ ಹತ್ಯೆ ಮಾಡಲಾಗಿತ್ತು. ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ಬೆಳಕಿಗೆ ಬಂದ ನಂತರ ಪ್ರಕರಣದ ತನಿಖೆಯ ಹೊಣೆ ಗದಗ ರೈಲ್ವೆ ಪೊಲೀಸ್ ಠಾಣೆಯಿಂದ ಕೊಪ್ಪಳ ನಗರ ಠಾಣೆಗೆ ವರ್ಗಾವಣೆಯಾಯಿತು.

ಯಲ್ಲಾಲಿಂಗನ ಮನೆಯವರೂ ಇದು ‌ಕೊಲೆ ಎಂದು ಅನುಮಾನಿಸಿದ್ದರು. ಕೊಲೆ ಪ್ರಕರಣದ ತನಿಖೆ ಚುರುಕಾದಂತೆ ಹಲವು ವಿಚಾರಗಳು ಬಯಲಾದವು. ಮಾಜಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ ಮತ್ತು ಅವರ ಮಗ ಮಹಾಂತೇಶ ನಾಯಕ ಸೇರಿ 9 ಜನರ ಮೇಲೆ ಕೊಲೆ ಆರೋಪ ಕೇಳಿಬಂದಿತ್ತು.

The post ಕೊಲೆ ಆರೋಪಿಯ ಮದುವೆಗೆ ಪೊಲೀಸರು ಹಾಜರ್.. ಕಡ್ಡಾಯ ರಜೆ ಶಿಕ್ಷೆ ಕೊಟ್ಟ ಎಸ್​ಪಿ appeared first on News First Kannada.

Source: newsfirstlive.com

Source link