ಮೈಸೂರು: ಇಲವಾಲ ಬಳಿ ರವೀಶ್ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಮೊಬೈಲ್‌ನಲ್ಲಿದ್ದ ಶೂ ಫೋಟೋದಿಂದ ಕೊಲೆಗಾರನ ಸುಳಿವು ಸಿಕ್ಕ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ.

ಜೂನ್ 9ರ ರಾತ್ರಿ ಇಲವಾಲ ಆದಿಶ್ವರ ನಗರದಲ್ಲಿ ಪಾಂಡವಪುರ ಮೂಲದ ರವೀಶ್ ಎಂಬ ಯುವಕನ ಕೊಲೆಯಾಗಿತ್ತು. ಜೂ.10 ರಂದು ಇಲವಾಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಮೃತ ವ್ಯಕ್ತಿಯ ಮೊಬೈಲ್‌ನಲ್ಲಿ ಕಪ್ಪು ಬಣ್ಣದ ಶೂ ಮೇಲೆ ಬಿಳಿ ರೇಡಿಯಂ ರೀತಿಯ ಅಂಕುಡೋಂಕಾದ ಪಟ್ಟಿ ಇರುವ ಫೋಟೋ ಇತ್ತು. ಪ್ರಕರಣ ಸಂಬಂಧ ಪೊಲೀಸರು‌, ರವೀಶನ ಪರಿಚಯಸ್ಥರನ್ನ ಕರೆದು ವಿಚಾರಣೆ ನಡೆಸಿದ್ರು.

ಈ ವೇಳೆ ಶೂ ಬಗ್ಗೆ ಮಾಹಿತಿ ಕೊಟ್ಟ ಪರಿಚಯಸ್ಥರು, ಆ ಶೂ ರವೀಶ್ ಸ್ನೇಹಿತ ತೇಜ್‌ಮಾಲ್​ನದ್ದು ಎಂದು ತಿಳಿಸಿದ್ರು. ಬಳಿಕ ಪೊಲೀಸರು ತೇಜ್‌ಮಾಲ್​ನ್ನನು ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ತೇಜ್‌ಮಾಲ್ , ರವೀಶ್ ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪಾಲುದಾರಿಕೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ರು. ಹಣಕಾಸು ವಿಚಾರದಲ್ಲಿ ಮನಸ್ತಾಪ ಬಂದು ತನ್ನ ಪಾಲು ಕೊಡುವಂತೆ ರವೀಶ್ ಕೇಳಿದ್ದ. ಇದರಿಂದ ಕುಪಿತಗೊಂಡ ತೇಜ್‌ಮಾಲ್ ತನ್ನ ಸ್ನೇಹಿತ ಪ್ರಕಾಶ್ ಜೊತೆ ಸೇರಿ ರವೀಶ್ ಕೊಲೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.

ಜೂ. 9ರಂದು ತೇಜ್‌ಮಾಲ್ ತನ್ನ ಹುಟ್ಟುಹಬ್ಬವೆಂದು ರವೀಶ್​​ನನ್ನು ಇಲವಾಲ ಬಳಿಯ ಖಾಲಿ‌ ನಿವೇಶನಕ್ಕೆ ಕರೆದೊಯ್ದು ಎಣ್ಣೆ ಪಾರ್ಟಿ‌ ಮಾಡಿದ್ದ. ಈ ವೇಳೆ ತೇಜ್‌ಮಾಲ್ ಮತ್ತು ಪ್ರಕಾಶ್  ಬ್ಯಾಟ್‌ನಿಂದ ತಲೆ, ಕುತ್ತಿಗೆ ಮೇಲೆ ಒಡೆದು ರವೀಶ್​​ನನ್ನು ಕೊಲೆ ಮಾಡಿದ್ದರು ಅಂತ ತಿಳಿದುಬಂದಿದೆ.

ಶೂ ಕೊಟ್ಟ ಸುಳಿವು
ಸಾಯುವ ಮುನ್ನ ರವೀಶ್ ಮದ್ಯದ ಬಾಟಲಿಗಳನ್ನಿಟ್ಟು ಫೋಟೋ ತೆಗೆದುಕೊಂಡಿದ್ದ. ಫೋಟೋದಲ್ಲಿ ಕೇವಲ ಶೂ ಹಾಗೂ ಮದ್ಯದ ಬಾಟಲು ಮಾತ್ರ ಸೆರೆಯಾಗಿತ್ತು. ಈ ಶೂ ಕೊಟ್ಟ ಸುಳಿವಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನ ಭೇದಿಸಿದ್ದಾರೆ.

The post ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್​: ಶೂ ಕೊಟ್ಟ ಸುಳಿವಿನಿಂದ ಪ್ರಕರಣ ಬೇಧಿಸಿದ ಪೊಲೀಸ್ appeared first on News First Kannada.

Source: newsfirstlive.com

Source link