ಮಂಡ್ಯ: ಇತ್ತೀಚಿಗೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದೂದರು ಗ್ರಾಮದಲ್ಲಿ ನಡೆದಿದ್ದ ಗೃಹಿಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಮಾಹಿತಿ ದೊರೆತಿದ್ದು ಪತಿಯಿಂದಲೇ ಪತ್ನಿಯ ಹತ್ಯೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಒಂದೂವರೆ ವರ್ಷದ ಹಿಂದಷ್ಟೇ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನನ್ನು ಮದುವೆಯಾಗಿದ್ದ ಮೃತ ಸಂಧ್ಯಾ. ದಾಂಪತ್ಯದಲ್ಲಿ ಬಿರುಕು ಸೃಷ್ಟಿಯಾಗಿ ಇತ್ತೀಚೆಗೆ ದೂರವಾಗಿದ್ದರು. ಬಳಿಕ ತವರು ಮನೆಯಲ್ಲಿದ್ದುಕೊಂಡೆ ಕಂಪ್ಯೂಟರ್ ತರಬೇತಿಗೆ ಪಡೆಯುತ್ತಿದ್ದರು. ಒಂದು ದಿನ ಕಂಪ್ಯೂಟರ್ ಕ್ಲಾಸ್ಗೆಂದು ತೆರಳಿದ್ದ ಸಂಧ್ಯಾ ಏಕಾಏಕಿ ನಾಪತ್ತೆಯಾಗಿದ್ದರು. ಇದರಿಂದ ಆತಂಕಕ್ಕೊಳಗಾಗಿದ್ದ ಪೋಷಕರು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಕೊಲೆ ಮಾಡಿ ಹೈಡ್ರಾಮಾ ಮಾಡಿದ್ದ ಪಾಪಿ ಪತಿ..!
ಇತ್ತ ಪತ್ನಿ ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ವಿಷ ಕುಡಿದ ಪತಿ ಷಡಕ್ಷರಿ ಅನುಕಂಪ ಗಿಟ್ಟಿಸಿಕೊಳ್ಳಲು ಮಂಡ್ಯ ಮಿಮ್ಸ್ ಆಸ್ಪತ್ರೆ ದಾರಿ ಹಿಡದಿದ್ದ. ಗಂಡನ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು ಆತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋವರೆಗೆ ಕಾದು ಕುಳಿತು ಬಳಿಕ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ತನಗೇನು ಗೊತ್ತಿಲ್ಲ ಎನ್ನುತ್ತಿದ್ದ ಹಂತಕ ಪೊಲೀಸರ ಟ್ರಿಟ್ಮೆಂಟ್ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಕಂಪ್ಯೂಟರ್ ಕ್ಲಾಸ್ ನಿಂದ ಪತ್ನಿ ಕರೆದುಕೊಂಡು ಬಂದು ಕುಂದೂರು ಬಳಿಯ ನಾಲೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಗಿ ಪಾಪಿ ಪತಿ ಒಪ್ಪಿಕೊಂಡಿದ್ದಾನಂತೆ. ಆ ಬಳಿಕ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿ ವಿಷ ಸೇವಿಸಿ ತಾನೇ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವ ಕೊಲೆ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ.