ಕೊಲ್ಕತ್ತಾದಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಇದು ರಾಜಕೀಯ ಕೊಲೆ ಎಂದ ದಿಲೀಪ್ ಘೋಷ್ | BJP worker found dead inside an abandoned building in Kolkata its political murder says Dilip Ghosh


ಕೊಲ್ಕತ್ತಾದಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಇದು ರಾಜಕೀಯ ಕೊಲೆ ಎಂದ ದಿಲೀಪ್  ಘೋಷ್

ದಿಲೀಪ್ ಘೋಷ್

ಉತ್ತರ ಕೋಲ್ಕತ್ತಾದ ಘೋಷ್ ಬಗಾನ್ ಪ್ರದೇಶದಲ್ಲಿರುವ ಕಟ್ಟಡವೊಂದರಲ್ಲಿ ನೇಣುಹಾಕಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಎಂಬವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Sha)  ಅವರು ಇಂದು(ಶುಕ್ರವಾರ) ಕೊಲ್ಕತ್ತಾದಲ್ಲಿ(Kolkata) ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮಿತ್ ಶಾ ಅವರು ಬಂಗಾಳ ಪ್ರವಾಸದಲ್ಲಿರುವ ಹೊತ್ತಲ್ಲೇ ಇಂದು ಬೆಳಗ್ಗೆ 26 ವರ್ಷದ ಬಿಜೆಪಿ (BJP) ಕಾರ್ಯಕರ್ತರೊಬ್ಬರ ಶವ ಪಾಳು ಬಿದ್ದ ಕಟ್ಟಡದಲ್ಲಿ ಪತ್ತೆಯಾಗಿದೆ. ಉತ್ತರ ಕೋಲ್ಕತ್ತಾದ ಘೋಷ್ ಬಗಾನ್ ಪ್ರದೇಶದಲ್ಲಿರುವ ಕಟ್ಟಡವೊಂದರಲ್ಲಿ ನೇಣುಹಾಕಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತ ಅರ್ಜುನ್ ಚೌರಾಸಿಯಾ (Arjun Chowrasia) ಎಂಬವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇವರು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಯಾಗಿದ್ದರು. ಪೊಲೀಸರಿಗೆ ಶವದ ಬಳಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆಗಾಗಿ ಶವವನ್ನು ತೆಗೆದುಕೊಂಡು ಹೋಗುವಾಗ  ಪ್ರತಿಭಟನೆಗಳು ನಡೆದಿದ್ದು, ಘಟನಾ ಸ್ಥಳದಲ್ಲಿ ಉಪ ಪೊಲೀಸ್ ಆಯುಕ್ತ (ಉತ್ತರ) ಜೋಯಿತಾ ಬಸು ಉಪಸ್ಥಿತರಿದ್ದರು. “ನಮಗೆ ನ್ಯಾಯ ಬೇಕು. ಅವರು ಖುಷಿಯಾಗಿದ್ದ ವ್ಯಕ್ತಿ, ನಾನು ಪೊಲೀಸರನ್ನು ನಂಬುವುದಿಲ್ಲ. ನನ್ನ ಸಹೋದರ ತಡರಾತ್ರಿ 2 ಗಂಟೆಗೆ ನಿಧನರಾಗಿದ್ದು, ಪೊಲೀಸರು ಬೆಳಗ್ಗೆ 7 ಗಂಟೆಗೆ ಬಂದಿದ್ದಾರೆ ಎಂದು ಅರ್ಜುನ್ ಅವರ ಅಕ್ಕ ಸುನಿತಾ ಚೌರಾಸಿಯಾ ಹೇಳಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಇದನ್ನು “ರಾಜಕೀಯ ಕೊಲೆ” ಎಂದು ಕರೆದಿದ್ದಾರೆ. “ಅಭಿಜಿತ್ ಸರ್ಕಾರ್ ನಂತರ, ಅರ್ಜುನ್ ಚೌರಾಸಿಯಾ ಎಂಬ 26 ವರ್ಷದ ಬಿಜೆಪಿ ಕಾರ್ಯಕರ್ತರನ್ನು ಟಿಎಂಸಿಯ ರಾಜಕೀಯ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಅವನನ್ನು ಕೊಂದು ನೇಣು ಹಾಕಲಾಯಿತು, ”ಘೋಷ್ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಗೆ ಭೇಟಿ ನೀಡಿದರೆ ನನ್ನನ್ನು ಕೊಲೆ ಮಾಡುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಅಮಿತ್ ಶಾ ನಿನ್ನೆ ಹೇಳಿದ್ದರು. ರಾಜಕೀಯ ಕೊಲೆಗಳ ಸರಣಿ ಮುಂದುವರಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲ್ಲಲು ಟಿಎಂಸಿ ನಿರ್ಧರಿಸಿದೆ ಎಂದು ಅವರು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಸಂಸದ ಸುಭಾಷ್ ಸರ್ಕಾರ್ ಸಿಬಿಐ ತನಿಖೆಗೆ ಆಗ್ರಹಿಸಿದರು. ಇಂದು ಕೋಲ್ಕತ್ತಾದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಲು ಚೌರಾಸಿಯಾ ಬೈಕ್ ರ್ಯಾಲಿಯಲ್ಲಿ ಭಾಗವಹಿಸುವವರಿದ್ದರು ಎಂದು ಸರ್ಕಾರ್ ಹೇಳಿದ್ದಾರೆ.

ಆರೋಪಗಳಿಗೆ ಪ್ರತಿಕ್ರಿಯಿಸಿದ ಟಿಎಂಸಿ ಸಂಸದ ಸಂತನು ಸೇನ್, ಪ್ರತಿ ಘಟನೆಯನ್ನು ರಾಜಕೀಯಗೊಳಿಸಬೇಡಿ ಎಂದು ಬಿಜೆಪಿಗೆ ಹೇಳಿದ್ದಾರೆ. “ಯಾವುದೇ ಸಾವು ತುಂಬಾ ದುರದೃಷ್ಟಕರ. ಪೊಲೀಸರು ಅಲ್ಲಿದ್ದಾರೆ. ಇದು ಉತ್ತರ ಪ್ರದೇಶ ಅಲ್ಲ, ಇದು ಬಂಗಾಳ. ಯಾವುದೇ ಘಟನೆ ನಡೆದಾಗ, ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ನ್ಯಾಯಯುತವಾಗಿ ತನಿಖೆ ಮಾಡಲಾಗುತ್ತದೆ. ಈ ಹಿಂದೆಯೂ ಕೊಲೆ ಎಂದು ಬಿಂಬಿಸಲು ಯತ್ನಿಸಿದ ಘಟನೆಗಳು ನಡೆದಿವೆ. ಆದಾಗ್ಯೂ, ತನಿಖೆ ಮುಗಿಯುವವರೆಗೆ ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಸೇನ್ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *