ಕೊವಿಡ್ ನಿರ್ವಹಣೆಯಲ್ಲಿ ಲೋಪ: ವುಹಾನ್ ಉಸ್ತುವಾರಿಯಾಗಿದ್ದ ಸಚಿವನನ್ನೇ ಬಂಧಿಸಿದ ಚೀನಾ | China arrests ex minister Sun Lijun alleges he deserted post during Covid outbreak in Wuhan


ಕೊವಿಡ್ ನಿರ್ವಹಣೆಯಲ್ಲಿ ಲೋಪ: ವುಹಾನ್ ಉಸ್ತುವಾರಿಯಾಗಿದ್ದ ಸಚಿವನನ್ನೇ ಬಂಧಿಸಿದ ಚೀನಾ

ಚೀನಾ ಸರ್ಕಾರವು ಸಚಿವ ಸುನ್ ಲಿಜಿನ್ ಅವರನ್ನು ಬಂಧಿಸಿದೆ.

ಬೀಜಿಂಗ್: ಚೀನಾದ ವುಹಾನ್​ನಲ್ಲಿ ಕೊರೊನಾ ವೈರಸ್ ತೀವ್ರವಾಗಿ ಹರಡಿದ ನಂತರ ಪರಿಸ್ಥಿತಿ ನಿರ್ವಹಣೆಗಾಗಿ ಚೀನಾ ಸರ್ಕಾರವು ಕಳೆದ ಮಾರ್ಚ್ (2020) ತಿಂಗಳಲ್ಲಿ ಕಳುಹಿಸಿದ್ದ ಪ್ರಭಾವಿ ಉಪ ಸಚಿವ ಸುನ್ ಲಿಜುನ್ ಅವರನ್ನು ಲಂಚ ಪಡೆದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಸರ್ಕಾರಿ ಮಾಧ್ಯಮ ಶುಕ್ರವಾರ ತಿಳಿಸಿದೆ. ಕೊವಿಡ್ ನಿರ್ವಹಣೆಗಾಗಿ ಚೀನಾ ಸರ್ಕಾರವು ವುಹಾನ್ ನಗರಕ್ಕೆ ರವಾನಿಸಿದ್ದ ಅಧಿಕಾರಿಗಳ ತಂಡದಲ್ಲಿ ಸುನ್ ಲಿಜುನ್ ಸಹ ಇದ್ದರು. ಕೊವಿಡ್ ನಿರ್ವಹಣೆ ವೇಳೆ ಮಾಡಿದ ತಪ್ಪುಗಳಿಗಾಗಿ ಅವರನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದಿಂದ (Communist Party of China – CPC) ಉಚ್ಚಾಟಿಸಲಾಗಿತ್ತು.

2017ರಲ್ಲಿ ಹಾಗ್​ಕಾಂಗ್​ನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಹೋರಾಟಗಳನ್ನು ಹತ್ತಿಕ್ಕುವ ಕಾರ್ಯಾಚರಣೆಯ ಉಸ್ತುವಾರಿಯನ್ನೂ ಸುನ್ ನಿರ್ವಹಿಸಿದ್ದರು. ಸಾರ್ವಜನಿಕ ರಕ್ಷಣೆ ಇಲಾಖೆಯ ಉಪ-ಸಚಿವರಾಗಿದ್ದ ಸುನ್, ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ ಎಂದು ಕ್ಸಿನ್​ಹುವಾ ಸುದ್ದಿಸಂಸ್ಥೆ ಶುಕ್ರವಾರ ಪ್ರಕಟಿಸಿರುವ ವರದಿಯಲ್ಲಿ ತಿಳಿಸಿದೆ. ಕಳೆದ ಒಂದು ವರ್ಷದಿಂದಲೂ ಸುನ್ ಅವರ ವಿರುದ್ಧ ವಿಚಾರಣೆ ನಡೆಯುತ್ತಿತ್ತು ಎಂದು ಸರ್ಕಾರಿ ಮಾಧ್ಯಮ ಹೇಳಿದೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೊವಿಡ್-19 ಪಿಡುಗು ವ್ಯಾಪಿಸಿದಾಗ ಸುನ್ ತಮ್ಮ ಕೇಂದ್ರಸ್ಥಾನವನ್ನು ಬಿಟ್ಟು ಬಂದಿದ್ದರು. ಸರ್ಕಾರದ ಅನುಮತಿಯಿಲ್ಲದೆ ಗೌಪ್ಯ ಮಾಹಿತಿಯನ್ನು ತನ್ನೊಂದಿಗೆ ಹೊತ್ತೊಯ್ದಿದ್ದ ಸುನ್, ಹಲವು ಮೂಢನಂಬಿಕೆ ಆಧರಿಸಿದ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡಿದ್ದ. ಇದು ದೊಡ್ಡ ತಪ್ಪು ಎಂದು ಸರ್ಕಾರಿ ಮಾಧ್ಯಮ ಹೇಳಿದೆ.

ವುಹಾನ್​ನಿಂದ ಪಲಾಯನ ಮಾಡಿದ ಗಂಭೀರ ಆರೋಪವನ್ನು ಸುನ್ ಮೇಲೆ ಹೊರಿಸಲಾಗಿದೆ. ಆದರೆ ಈ ಆರೋಪಕ್ಕೆ ತಕ್ಕ ಪುರಾವೆಗಳನ್ನು ಚೀನಾ ಸರ್ಕಾರ ಈವರೆಗೆ ಒದಗಿಸಿಲ್ಲ. ಚೀನಾದ ಆಡಳಿತ ಸುನ್ ಮೇಲೆ ಈ ಮಟ್ಟಿಗಿನ ಸಿಟ್ಟು ತೋರಿಸಲು ಏನು ಕಾರಣ ಎನ್ನುವುದೂ ತಿಳಿದುಬಂದಿಲ್ಲ. ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತ ಮತ್ತು ಆದರ್ಶಗಳಿಗೆ ಅನುಗುಣವಾಗಿ ಸುನ್ ಎಂದಿಗೂ ವರ್ತಿಸಲಿಲ್ಲ. ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪ್ರದರ್ಶಿಸಿದ್ದಲ್ಲದೇ ರಾಜಕೀಯವಾಗಿ ಬದ್ಧತೆಯನ್ನೇ ಅವರು ಹೊಂದಿರಲಿಲ್ಲ. ಪಕ್ಷದ ಸಿದ್ಧಾಂತಗಳ ಬಗ್ಗೆ ಆಧಾರರಹಿತ ಟೀಕೆ ಮಾಡಿದ್ದಲ್ಲದೆ, ರಾಜಕೀಯ ಗಾಳಿಸುದ್ದಿಗಳನ್ನೂ ಹರಡಿದ್ದರು ಎಂದು ಸರ್ಕಾರ ಆರೋಪಿಸಿದೆ.

ಈ ಸಂದರ್ಭಗಳು ನಿಜಕ್ಕೂ ಗಂಭೀರವಾಗಿದ್ದವು. ಪ್ರಕೃತಿ ನಮ್ಮ ವಿರುದ್ಧ ಮುನಿದಿತ್ತು. ಇಂಥ ಸಂದರ್ಭವನ್ನು ಗಂಭೀರವಾಗಿ ನಿರ್ವಹಿಸಬೇಕಿತ್ತು. ಆದರೆ ಸುನ್ ಅವರು, ದೊಡ್ಡಮಟ್ಟದ ನಗದು ಮತ್ತು ಆಸ್ತಿ ರೂಪದಲ್ಲಿ ಲಂಚ ಪಡೆದದ್ದಲ್ಲದೆ, ಐಷಾರಾಮಿ ಮನರಂಜನೆ ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂಥ ಮನರಂಜನಾ ಕೂಟಗಳು ಅವರ ನಿಷ್ಪಕ್ಷಪಾತ ವರ್ತನೆ ಮತ್ತು ಅಧಿಕೃತ ನಿರ್ವಹಣೆಯ ಮೇಲೆ ಪರಿಣಾಮ ಬೀರಿದ್ದವು ಎಂದು ಸರ್ಕಾರಿ ತನಿಖಾ ಸಂಸ್ಥೆಗಳು ಹೇಳಿವೆ.

ಇದನ್ನೂ ಓದಿ: ತೈವಾನ್ ತಂಟೆಗೆ ಹೋದರೆ ಎಚ್ಚರ: ಚೀನಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ಅಮೆರಿಕ
ಇದನ್ನೂ ಓದಿ: ನೆಹರೂ ಅವರನ್ನು ದೂರುವುದರಿಂದ ಚೀನಾ ಸಮಸ್ಯೆ ಬಗೆಹರಿಯುವುದಿಲ್ಲ: ನಿರುಪಮಾ ರಾವ್

TV9 Kannada


Leave a Reply

Your email address will not be published. Required fields are marked *