ಕೊವಿಡ್ ಸೋಂಕಿತರಿಗೆ ಮೆರ್ಕ್​ ಮಾತ್ರೆ ನೀಡಲು ಬ್ರಿಟನ್ ಒಪ್ಪಿಗೆ | Britain nod for treatment of patients with Covid Pills


ಕೊವಿಡ್ ಸೋಂಕಿತರಿಗೆ ಮೆರ್ಕ್​ ಮಾತ್ರೆ ನೀಡಲು ಬ್ರಿಟನ್ ಒಪ್ಪಿಗೆ

ಮೆರ್ಕ್​ ಮಾತ್ರೆ

ಇಂಗ್ಲೆಂಡ್: ಅಮೆರಿಕದ ಔಷಧ ತಯಾರಿಕ ಕಂಪೆನಿ ಮೆರ್ಕ್ (MRK) ತಯಾರಿಸಿರುವ ಮಾತ್ರೆಗಳನ್ನು ಕೊರೊನಾ ಸೋಂಕಿತರಿಗೆ ನೀಡಲು ಬ್ರಿಟನ್ ಔಷಧ ನಿಯಂತ್ರಣಾ ಸಂಸ್ಥೆ ಅನುಮೋದನೆ ನೀಡಿದೆ. ಬ್ರಿಟನ್ ಈ ಮಾತ್ರೆಯ ಬಳಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ದೇಶ ಎನಿಸಿದೆ. ಮೊಲ್ನುಪಿರವಿರ್ ಹೆಸರಿನಲ್ಲಿ ಈ ಮಾತ್ರೆಯು ಬ್ರಿಟನ್​ನಲ್ಲಿ ಜನರಿಗೆ ಲಭ್ಯವಾಗಲಿದೆ.

ಕೊವಿಡ್ ಸೋಂಕಿತರಿಗೆ ಈ ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ನೀಡಲಾಗುವುದು. ಸೋಂಕು ದೃಢಪಟ್ಟ ಮೊದಲ ಐದು ದಿನಗಳ ಒಳಗೆ ಮನೆಗಳಲ್ಲಿಯೇ ಈ ಮಾತ್ರೆಯನ್ನು ತೆಗೆದುಕೊಳ್ಳಬಹುದಾಗಿದೆ. ಕ್ಲಿನಿಕಲ್ ಟ್ರಯಲ್​ಗಳ ವೇಳೆ ಈ ಮಾತ್ರೆಯ ಪರಿಣಾಮ ಸಾಬೀತಾಗಿತ್ತು. ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆಯನ್ನು, ಸೋಂಕಿನ ಲಕ್ಷಣಗಳನ್ನು ಮತ್ತು ಸಾವು ಸಂಭವಿಸುವ ಸಾಧ್ಯತೆಗಳನ್ನು ಇದು ಕಡಿಮೆ ಮಾಡಿತ್ತು.

ಕ್ಲಿನಿಕಲ್ ಟ್ರಯಲ್​ನಲ್ಲಿ ಪಾಲ್ಗೊಂಡಿದ್ದ 775 ರೋಗಿಗಳ ಪೈಕಿ ಮೊದಲ 29 ದಿನಗಳಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ. ‘ಬ್ರಿಟನ್​ನ ಇತಿಹಾಸದಲ್ಲಿ ಇದು ಮಹತ್ವದ ದಿನ. ಕೊವಿಡ್​ ಚಿಕಿತ್ಸೆಗೆ ಮನೆಯಲ್ಲಿಯೇ ಔಷಧ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿರುವುದು ಮಹತ್ವದ ನಿರ್ಧಾರ’ ಎಂದು ಬ್ರಿಟನ್​ನ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಾಜಿದ್ ಜಾವಿದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಹಲವು ನಿಯಂತ್ರಕರು ಈ ಔಷಧಿಯನ್ನು ಇನ್ನೂ ಪರಿಶೀಲಿಸುತ್ತಿದ್ದಾರೆ. ಅಮೆರಿಕದ ಔಷಧ ನಿಯಂತ್ರಕರ ಸಮಿತಿ ಸಭೆಯು ಈ ತಿಂಗಳ ಅಂತ್ಯದಲ್ಲಿ ನಡೆಯಲಿದೆ. ಇತರ ದೇಶಗಳ ಔಷಧ ನಿಯಂತ್ರಕರ ಮುಂದೆಯೂ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮೆರ್ಕ್ ಮಾತ್ರೆಯ ತಯಾರಕರು ಹೇಳಿದ್ದಾರೆ.

ಬ್ರಿಟನ್ ಈವರೆಗೆ ಸುಮಾರು 5 ಲಕ್ಷ ಮೆರ್ಕ್​ ಮಾತ್ರೆಗಳಿಗೆ ಬೇಡಿಕೆಯಿಟ್ಟದ್ದರೆ, ಅಮೆರಿಕ 17 ಲಕ್ಷ ಮಾತ್ರೆಗಳು ಬೇಕು ಎಂದು ಕೋರಿದೆ. ಆಸ್ಟ್ರೇಲಿಯಾ, ಸಿಂಗಪುರ ಮತ್ತು ದಕ್ಷಿಣ ಕೊರಿಯಾ ದೇಶಗಳು ಸಹ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ. ಬೇಡಿಕೆ ಹೆಚ್ಚಾಗಿರುವುದರಿಂದ ಕಂಪನಿಯ ಲಾಭ ಗಳಿಕೆ ಸಾಧ್ಯತೆಯೂ ಹೆಚ್ಚಾಗಿದೆ. ಷೇರುಪೇಟೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ 3ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಶೂನ್ಯದತ್ತ ಕೊರೊನಾ! ನವೆಂಬರ್ 8ರಿಂದ ರಾಜ್ಯದಲ್ಲಿ ಅಂಗನವಾಡಿ ಓಪನ್; ಸರ್ಕಾರದಿಂದ ಗೈಡ್‌ಲೈನ್ಸ್ ಬಿಡುಗಡೆ
ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಮಧ್ಯೆ ಮಿತಿಮೀರಿದ ಡೆಂಗ್ಯೂ ಪ್ರಕರಣ; 4 ವರ್ಷಗಳಲ್ಲೇ ಅತಿ ಹೆಚ್ಚು ಕೇಸ್​ ದಾಖಲು

TV9 Kannada


Leave a Reply

Your email address will not be published. Required fields are marked *