ಕೊವಿಡ್ 19 ರೋಗಿಗಳ ಚಿಕಿತ್ಸೆ ವಿಚಾರದಲ್ಲಿ ಮತ್ತೆ ಎಡವಬೇಡಿ; ಬ್ಲ್ಯಾಕ್ ಫಂಗಸ್​ ಭೀಕರತೆ ನೆನಪಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಆರೋಗ್ಯ ತಜ್ಞರು | 32 Top doctors warn to central and State governments against unnecessary medicines for patients


ಕೊವಿಡ್ 19 ರೋಗಿಗಳ ಚಿಕಿತ್ಸೆ ವಿಚಾರದಲ್ಲಿ ಮತ್ತೆ ಎಡವಬೇಡಿ; ಬ್ಲ್ಯಾಕ್ ಫಂಗಸ್​ ಭೀಕರತೆ ನೆನಪಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಆರೋಗ್ಯ ತಜ್ಞರು

ಪ್ರಾತ

ಭಾರತ, ಕೆನಡಾ ಮತ್ತು ಯುಎಸ್​​ನ ಸುಮಾರು 32 ಆರೋಗ್ಯ ತಜ್ಞರು ಹಾಗೂ ವೈದ್ಯರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು, ಭಾರತೀಯ ವೈದ್ಯಕೀಯ ಸಂಘ ಮತ್ತು ವೈದ್ಯಕೀಯ ವೃತ್ತಿಪರರಿಗೆ ಬಹಿರಂಗ ಪತ್ರ ಬರೆದು ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಕೊವಿಡ್ 19 ತಪಾಸಣೆ (Covid 19 Test) ಮತ್ತು ಕೊರೊನಾ ರೋಗಿಗಳಿಗೆ  ಚಿಕಿತ್ಸೆ ನೀಡುವ ವಿಚಾರದಲ್ಲಿ 2021ರಲ್ಲಿ ಮಾಡಿದ ತಪ್ಪನ್ನೇ ಮಾಡಬೇಡಿ. ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತದೆ ಎಂಬುದಕ್ಕೆ ಸಾಕ್ಷಿಯೇ ಇಲ್ಲದಂಥ ಔಷಧಗಳನ್ನು ಬಳಸಬೇಡಿ. ಯಾಕೆಂದರೆ ಔಷಧಗಳ ವಿನಾಕಾರಣ ಬಳಕೆಯಿಂದ ರೋಗಿಗಳ ಆರೋಗ್ಯದ ಮೇಲೆ ಇನ್ನಷ್ಟು ಅಪಾಯಕಾರಿ ಪರಿಣಾಮ ಬೀರಲಿದೆ ಎಂದೂ ಹೇಳಿದ್ದಾರೆ. 

ಕೊರೊನಾ ಕಾಲಿಟ್ಟು ಎರಡು ವರ್ಷವಾಯಿತು. ಏರಿಕೆಯಾಗುತ್ತಿರುವ ಪ್ರಕರಣಗಳ ಮಧ್ಯೆ ಅನಿಶ್ಚಿತತೆ, ಗೊಂದಲಗಳು ಉಂಟಾಗುತ್ತಲೇ ಇದೆ. ಈಗೀಗ ವಸ್ತುನಿಷ್ಠವಾದ ಅಧ್ಯಯನದ ಉತ್ತಮ ಗುಣಮಟ್ಟದ ವೈಜ್ಞಾನಿಕ ಲೇಖನಗಳು ಹೊರಬೀಳುತ್ತಿದ್ದು, ಅವರು ಕೊವಿಡ್ 19 ಕ್ಲಿನಿಕಲ್ ನಿರ್ವಹಣೆ ಸಂಬಂಧ ಸ್ಪಷ್ಟವಾದ ಮಾರ್ಗದರ್ಶನ ನೀಡುತ್ತಿವೆ. ಹಾಗಿದ್ದಾಗ್ಯೂ ಹಿಂದೆ 2021ರಲ್ಲಿ ಡೆಲ್ಟಾ ವೈರಸ್​​ನ ಎರಡನೇ ಅಲೆ ಬಂದಿದ್ದಾಗ ಘಟಿಸಿದ ತಪ್ಪುಗಳೇ ಈ ಬಾರಿ ಒಮಿಕ್ರಾನ್​ನಿಂದ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂದರ್ಭದಲ್ಲಿಯೂ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಆದರೆ ಹೀಗಾಗಬಾರದು..ಕೊರೊನಾ ತಪಾಸಣೆ ಮತ್ತು ಕೊವಿಡ್ 19 ರೋಗಿಗಳಿಗೆ ನೀಡುವ ಚಿಕಿತ್ಸೆಯಲ್ಲಿ ಎಚ್ಚರಿಕೆ ಇರಬೇಕು. ಅಸಂಬದ್ಧ, ಅನಗತ್ಯ ಔಷಧಿಗಳನ್ನು ನೀಡಿದರೆ ಇನ್ನಷ್ಟು ಅಪಾಯ ಕಟ್ಟಿಟ್ಟಬುತ್ತಿ ಎಂದು ವೈದ್ಯರು ಪತ್ರದಲ್ಲಿ ಹೇಳಿದ್ದಾರೆ.

ನಾವು ಗಮನಿಸಿದಂತೆ ಕೊವಿಡ್​ 19 ರೋಗಿಗಳಿಗೆ ಶಿಫಾರಸ್ಸು ಮಾಡುವ ಔಷಧದದಲ್ಲಿ ತಪ್ಪು ಕಂಡುಬರುತ್ತಿದೆ. ಕೊರೊನಾದ ಸೌಮ್ಯ ಲಕ್ಷಣಗಳು ಇರುವವರು ಮತ್ತು ಲಕ್ಷಣವೇ ಇಲ್ಲದವರಿಗೆ ಕೆಲವೊಮ್ಮೆ ಯಾವುದೇ ಔಷಧದ ಅಗತ್ಯವೂ ಇರುವುದಿಲ್ಲ. ಹಾಗೊಮ್ಮೆ ಇದ್ದರೂ ಅತ್ಯಂತ ಕಡಿಮೆ ಡೋಸ್​ (ಪ್ರಮಾಣ) ಔಷಧ ಸಾಕಾಗಿರುತ್ತದೆ.  ಆದರೆ ಕಳೆದ ಎರಡು ವಾರಗಳಿಂದಲೂ ಕೊವಿಡ್ 19 ರೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಂಯೋಜನೆಗಳು, ಅಜಿಥ್ರೊಮೈಸಿನ್, ಡಾಕ್ಸಿಸೈಕ್ಲಿನ್, ಹೈಡ್ರಾಕ್ಸಿಕ್ಲೋರೋಕ್ವಿನ್, ಫೇವಿಪಿರಾವಿರ್ ಮತ್ತು ಐವರ್ಮೆಕ್ಟಿನ್​ಗಳನ್ನು ಶಿಫಾರಸ್ಸು ಮಾಡಲಾಗುತ್ತಿದೆ. ಇದು ತಪ್ಪಾದ ಕ್ರಮ. ಸೂಕ್ತವಲ್ಲದ ಔಷಧಗಳ ಮೂಲಕ ಚಿಕಿತ್ಸೆ ನೀಡುವುದರಿಂದ ಬೇರೆ ಸಮಸ್ಯೆ ಶುರುವಾಗುತ್ತದೆ. 2021ರಲ್ಲಿ ಹೀಗೆ ಅನಗತ್ಯ, ಸೂಕ್ತವಲ್ಲದ ಔಷಧಗಳ ಮೂಲಕ ಚಿಕಿತ್ಸೆ ಕೊಡ್ಡು ಭಾರತದಲ್ಲಿ  ಮ್ಯೂಕೋರ್ಮೈಕೋಸಿಸ್ (ಬ್ಲ್ಯಾಕ್​ ಫಂಗಸ್​) ಮತ್ತು ಬ್ರೆಜಿಲ್‌ನಲ್ಲಿ ಆಸ್ಪರ್‌ಜಿಲೊಸಿಸ್‌ನಂತಹ ಶಿಲೀಂಧ್ರಗಳ ಸೋಂಕು ಶುರುವಾಯಿತು. ಅದೇ ತಪ್ಪು ಈಗಾಗಬಾರದು ಎಂದೂ ಪತ್ರದಲ್ಲಿ ವಿವರಿಸಿದ್ದಾರೆ.

RAT ಅಥವಾ RT-PCR ನಂತರ ಹೆಚ್ಚುವರಿ ಪರೀಕ್ಷೆಗಳು ಬೇಕಿಲ್ಲ
ಹಾಗೇ, ಕೊರೊನಾ ತಪಾಸಣೆ ವಿಚಾರದಲ್ಲೂ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ರ್ಯಾಪಿಡ್ ಆ್ಯಂಟಿಜೆನ್​ ಟೆಸ್ಟ್​ ಅಥವಾ ಆರ್​ಟಿ-ಪಿಸಿಆರ್ ಟೆಸ್ಟ್​ಗಳಲ್ಲಿ ಪಾಸಿಟಿವ್ ವರದಿ ಬಂದವರಿಗೆ ಮತ್ತೆ ಹೆಚ್ಚುವರಿ ಟೆಸ್ಟ್ ಅಗತ್ಯವಿರುವುದಿಲ್ಲ. ಆದರೆ ಅದೆಷ್ಟೋ ಪ್ರಕರಣಗಳಲ್ಲಿ ಈ ಟೆಸ್ಟ್​​ನಲ್ಲಿ ಪಾಸಿಟಿವ್ ಬಂದವರಿಗೆ ಮತ್ತೆ ಸಿಟಿ ಸ್ಕ್ಯಾನ್​, ಡಿ-ಡೈಮರ್​, ಐಎಲ್​-6ನಂತಹ ಲ್ಯಾಬೋರೇಟರಿ ಟೆಸ್ಟ್​ಗಳನ್ನು ಶಿಫಾರಸ್ಸು ಮಾಡುವುದು ಕಂಡುಬರುತ್ತಿದೆ. ಇಂಥ ಟೆಸ್ಟ್​ಗಳು ಕೊರೊನಾ ಗಂಭೀರ ಸ್ವರೂಪ ತಲುಪಿದವರಿಗೆ, ಆಕ್ಸಿಜನ್​ ಪ್ರಮಾಣ ಕುಸಿದವರಿಗೆ, ಆಯ್ದ ಪ್ರಕರಣಗಳಲ್ಲಿ ಮಾತ್ರ ಅಗತ್ಯವಿರುತ್ತದೆ.  ಹೀಗೆ ಕೊರೊನಾದ ಲಕ್ಷಣಗಳು ಸೌಮ್ಯ ಆಗಿರುವವರಿಗೆ, ಲಕ್ಷಣವೇ ಇಲ್ಲದವರಿಗೆಲ್ಲ ಇಂಥ ಟೆಸ್ಟ್​ಗಳಿಗೆ ಶಿಫಾರಸ್ಸು ಮಾಡಿದರೆ ಅವರಿಗೆ ಆರ್ಥಿಕ ಹೊರೆಯಾಗುವ ಜತೆ, ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮ ಬೀರುತ್ತದೆ ಎಂದು ವೈದ್ಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಂದಹಾಗೆ, ಈ ಪತ್ರಕ್ಕೆ ಸಹಿ ಮಾಡಿದವರಲ್ಲಿ, ಮುಂಬೈನ ಜಸ್ಲೋಕ್​ ಆಸ್ಪತ್ರೆಯ ಡಾ. ಸಂಜಯ್​, ಕೇರಳ ರಾಜಗಿರಿ ಆಸ್ಪತ್ರೆಯ ಲಿವರ್ ಇನ್​ಸ್ಟಿಟ್ಯೂಟ್​ನ  ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್, ಬೆಂಗಳೂರು ಆಸ್ಪತ್ರೆಯ ಡಾ. ರಜನಿ ಭಟ್​, ದೆಹಲಿಯ ಡಾ. ಭರತ್ ಗೋಪಾಲ್​, ವೆಲ್ಲೋರ್​​ನ ಕ್ರಿಶ್ಚಿಯನ್ ಮೆಡಿಕಲ್​ ಕಾಲೇಜಿನ ಡಾ. ರಿಚಾ ಗುಪ್ತಾ ಸೇರಿ, ಕೆನಡಾ-ಯುಎಸ್​ನಲ್ಲಿರುವ ಭಾರತ ಮೂಲದ ಹಲವು ವೈದ್ಯರು ಸೇರಿದ್ದಾರೆ.

TV9 Kannada


Leave a Reply

Your email address will not be published. Required fields are marked *