ಕೊವಿಶೀಲ್ಡ್ ಲಸಿಕೆ ರಫ್ತು ಮತ್ತೆ ಆರಂಭ; 4 ರಾಷ್ಟ್ರಗಳಿಗೆ 50 ಲಕ್ಷ ಡೋಸ್ ಲಸಿಕೆ ರಫ್ತು ಮಾಡಲಿರುವ ಸೆರಮ್ ಇನ್ಸ್ಟಿಟ್ಯೂಟ್: ವರದಿ | Serum institute will export 50 lakh covishield doses to 4 countries under COVAX

ಕೊವಿಶೀಲ್ಡ್ ಲಸಿಕೆ ರಫ್ತು ಮತ್ತೆ ಆರಂಭ; 4 ರಾಷ್ಟ್ರಗಳಿಗೆ 50 ಲಕ್ಷ ಡೋಸ್ ಲಸಿಕೆ ರಫ್ತು ಮಾಡಲಿರುವ ಸೆರಮ್ ಇನ್ಸ್ಟಿಟ್ಯೂಟ್: ವರದಿ

ಆದರ್ ಪೂನವಲ್ಲ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಫೈಲ್ ಫೋಟೋ)

ವಿಶ್ವಸಂಸ್ಥೆ ಬೆಂಬಲಿತ ಕೊವ್ಯಾಕ್ಸ್ (COVAX) ಜಾಗತಿಕ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ನೇಪಾಳ, ತಜಕಿಸ್ತಾನ್ ಮತ್ತು ಮೊಜಾಂಬಿಕ್‌ಗೆ 50 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ರಫ್ತು ಮಾಡಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮೂರು ದೇಶಗಳ ಜೊತೆಗೆ, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೊವ್ಯಾಕ್ಸ್ (SII COVAX) ಅಡಿಯಲ್ಲಿ ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕೂ ಕೋವಿಶೀಲ್ಡ್ ಅನ್ನು ರಫ್ತು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಎಸ್​​ಐಐ ಇಂದಿನಿಂದ (ನವೆಂಬರ್ 23) COVAX ಕಾರ್ಯಕ್ರಮದ ಅಡಿಯಲ್ಲಿ ಕೋವಿಡ್ ಲಸಿಕೆ ರಫ್ತು ಪ್ರಾರಂಭಿಸುತ್ತದೆ ಮತ್ತು ನೇಪಾಳವು ನವೆಂಬರ್ 24 ರಂದು ಮೊದಲ ಕೋವಿಶೀಲ್ಡ್ ಅನ್ನು ಸ್ವೀಕರಿಸುತ್ತದೆ. ‘ಲಸಿಕೆ ಮೈತ್ರಿ’ ಕಾರ್ಯಕ್ರಮದ ಅಡಿಯಲ್ಲಿ ನೇಪಾಳ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಕ್ಕೆ ತಲಾ 10 ಲಕ್ಷ ಕೋವಿಶೀಲ್ಡ್ ಡೋಸ್‌ಗಳನ್ನು ರಫ್ತು ಮಾಡಲು ಸರ್ಕಾರವು ಅಕ್ಟೋಬರ್‌ನಲ್ಲಿ ಮೊದಲು ಸೀರಮ್ ಇನ್ಸ್ಟಿಟ್ಯೂಟ್​ಗೆ ಅನುಮತಿ ನೀಡಿತ್ತು.

ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಇತ್ತೀಚೆಗೆ ನೀಡಿದ ಮಾಹಿತಿಯಲ್ಲಿ, ಪುಣೆ ಮೂಲದ ಎಸ್​ಐಐ ಸಂಸ್ಥೆಯು 24,89,15,000 ಡೋಸ್‌ಗಳನ್ನು ತಯಾರಿಸಿದೆ ಎಂದು ಎಸ್‌ಐಐಯ ಸರ್ಕಾರ ಮತ್ತು ನಿಯಂತ್ರಕ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಆದರ್ ಪೂನಾವಲ್ಲ ಅವರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ವರದಿಗಳ ಪ್ರಕಾರ, ಕೊರೊನಾ ಸೋಂಕಿನ ವಿರುದ್ಧದ ಲಸಿಕೆಯಾದ ಕೋವಿಶೀಲ್ಡ್ (ಕೋವಿಡ್ -19) ಸರಬರಾಜನ್ನು COVAX ಕಾರ್ಯಕ್ರಮದ ಅಡಿಯಲ್ಲಿ ಶೀಘ್ರದಲ್ಲೇ ಪುನರಾರಂಭಿಸಲಾಗುತ್ತದೆ.

ಇತ್ತೀಚಿನ ವರದಿಯ ಪ್ರಕಾರ, ವಿಶ್ವಸಂಸ್ಥೆಯ ಬೆಂಬಲದೊಂದಿಗೆ ನೇಪಾಳ, ಬಾಂಗ್ಲಾದೇಶ, ತಜಿಕಿಸ್ತಾನ್ ಮತ್ತು ಮೊಜಾಂಬಿಕ್‌ಗೆ COVAX ಅಡಿಯಲ್ಲಿ 5 ಮಿಲಿಯನ್ ಡೋಸ್ ಕೋವಿಶೀಲ್ಡ್ ಅನ್ನು ರಫ್ತು ಮಾಡಲು ಕೇಂದ್ರ ಸರ್ಕಾರವು ಎಸ್​​ಐಐಗೆ ಅನುಮತಿ ನೀಡಿದೆ. ನೇಪಾಳವು ಮೊದಲ ಬ್ಯಾಚ್ ಅನ್ನು ನವೆಂಬರ್ 24 ರಂದು ಸ್ವೀಕರಿಸಲು ನಿರ್ಧರಿಸಲಾಗಿತ್ತು. ಅದಾಗ್ಯೂ, ವಿತರಣೆಯು ಕಾರಣಾಂತರಗಳಿಂದ ಎರಡು- ಮೂರು ದಿನ ವಿಳಂಬವಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಸೆರಮ್ ಇನ್‌ಸ್ಟಿಟ್ಯೂಟ್ ಅಧಿಕಾರಿಯನ್ನು ಸೋಮವಾರ ಉಲ್ಲೇಖಿಸಿ ಮಾಹಿತಿ ನೀಡಿದೆ.

ಈ ವರ್ಷದ ಏಪ್ರಿಲ್‌ನಲ್ಲಿ, ಕೊರೊನಾ ಎರಡನೇ ಅಲೆಯು ತೀವ್ರ ಪ್ರಮಾಣದಲ್ಲಿ ದೇಶಕ್ಕೆ ಅಪ್ಪಳಿಸಿದ್ದರಿಂದ ಕೇಂದ್ರವು ಕೋವಿಡ್ -19 ಲಸಿಕೆಗಳ ರಫ್ತು ಸ್ಥಗಿತಗೊಳಿಸಿತು. ಈಗ ಸೋಂಕು ಪ್ರಸರಣ ನಿಯಂತ್ರಣದಲ್ಲಿದ್ದು, COVAX ಗೆ ಲಸಿಕೆ ಪೂರೈಕೆಯು ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.

ಕೋವಿಶೀಲ್ಡ್ ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಆಸ್ಟ್ರಾಜೆನೆಕಾ ಲಸಿಕೆಯ ಭಾರತೀಯ ರೂಪಾಂತರವಾಗಿದೆ. ಭಾರತದಲ್ಲಿ ಅದನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಹೆಸರಿನಲ್ಲಿ ಉತ್ಪಾದಿಸುತ್ತದೆ. ಈ ಲಸಿಕೆ  ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ ಎರಡು ಮಾದರಿಯ ಲಸಿಕೆಗಳಲ್ಲಿ ಒಂದಾಗಿದೆ. ಕೋವಿಶೀಲ್ಡ್ ಅಲ್ಲದೇ ಕೊವ್ಯಾಕ್ಸೀನ್ ಅನ್ನು ಭಾರತದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಅದನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಜನವರಿ 16 ರಂದು ಭಾರತದಲ್ಲಿ ಲಸಿಕಾ ಅಭಿಯಾನ ಆರಂಭವಾಗಿತ್ತು.

ಕೊವ್ಯಾಕ್ಸ್ ಅಂದರೆ (COVAX) ಕೊವಿಡ್ 19 ಲಸಿಕೆಗಳನ್ನು ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳಿಗೂ ತಲುಪಿಸುವ ಅಭಿಯಾನವಾಗಿದೆ. ಇದು Gavi, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಎಪಿಡೆಮಿಕ್ ಪ್ರಿಪೇರ್ಡ್‌ನೆಸ್ ಇನ್ನೋವೇಶನ್ಸ್ (CEPI) ಒಕ್ಕೂಟದ ಸಹ- ನೇತೃತ್ವದಲ್ಲಿದೆ. ಈ ಉಪಕ್ರಮವು ಕಡಿಮೆ-ಮಧ್ಯಮ ಆದಾಯದ ದೇಶಗಳಿಗೆ ಕರೋನ ವೈರಸ್ ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.

ಇದನ್ನೂ ಓದಿ:

30 ದಿನದಲ್ಲಿ 20 ಫುಟ್​ಬಾಲ್​ನಷ್ಟು ದೊಡ್ಡ ಜಾಗ, 62.54 ಕೋಟಿ ರೂ. ಆದಾಯ ಪಡೆದ ಕೇಂದ್ರ ಸರ್ಕಾರ

ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಟಿಎಂಸಿ ಸೇರುವ ಸಾಧ್ಯತೆ

TV9 Kannada

Leave a comment

Your email address will not be published. Required fields are marked *