ಕೊಹ್ಲಿ ಕಂಬ್ಯಾಕ್.. ಗೆಲ್ಲುವ ಅವಕಾಶವಿದ್ದರೂ ಕೈಚೆಲ್ಲಿದ ವಿಂಡೀಸ್.. ಹೇಗಿತ್ತು ನಿನ್ನೆಯ ಪಂದ್ಯ..?


ಈಡನ್​ ಗಾರ್ಡನ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಸರಣಿ ಜಯಿಸಿದೆ.

ಇಂಡೋ-ವಿಂಡೀಸ್​ ನಡುವಿನ 2ನೇ ಟಿ20 ಕದನದಲ್ಲಿ ಟೀಮ್​ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ವಿರಾಟ್​ ಕೊಹ್ಲಿ, ರಿಷಭ್​ ಪಂತ್​ ಸಿಡಿಸಿದ ಭರ್ಜರಿ ಅರ್ಧಶತಕಗಳ ನೆರವಿನಿಂದ ಮತ್ತು ಭುವನೇಶ್ವರ್​ ಹಾಗೂ ಹರ್ಷಲ್​ ಪಟೇಲ್​ ಮಾರಕ ಬೌಲಿಂಗ್​​​ ದಾಳಿಯಿಂದಾಗಿ ಭಾರತಕ್ಕೆ ಈ ಗೆಲುವು ದಕ್ಕಿದೆ. 8 ರನ್​ಗಳಿಂದ ಭರ್ಜರಿ ಜಯ ಸಾಧಿಸಿದ ರೋಹಿತ್​ ಪಡೆ, ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿಯನ್ನ ಗೆದ್ದುಕೊಂಡಿದೆ.

ಕೈ ಕೊಟ್ಟ ಇಶಾನ್​​​, ವಿರಾಟ್​ ಕೊಹ್ಲಿ ಕಂಬ್ಯಾಕ್​ ಇನ್ನಿಂಗ್ಸ್..!
ಟಾಸ್​​​ ಸೋತು ಬ್ಯಾಟಿಂಗ್​ ನಡೆಸಿದ ಟೀಮ್​ ಇಂಡಿಯಾ, ಉತ್ತಮ ಆರಂಭ ಪಡೆಯಲಿಲ್ಲ. ಕಳೆದ ಪಂದ್ಯದಲ್ಲೂ ಸ್ಲೋ ಇನ್ನಿಂಗ್ಸ್ ಆಡಿದ್ದ​ ಇಶಾನ್​ ಕಿಶನ್​ 2ನೇ ಚುಟುಕು ಕದನದಲ್ಲಿ ಕೇವಲ 2 ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ರು. ಇನ್ನ ರೋಹಿತ್ ಶರ್ಮಾ​​ಗೆ ಜೀವದಾನ ಸಿಕ್ಕಿದ್ರೂ, ಅದನ್ನು ಬಿಗ್​​ ಸ್ಕೋರ್​ಗೆ ಕನ್ವರ್ಟ್​ ಮಾಡುವಲ್ಲಿ ವಿಫಲರಾದ್ರು. ಅತ್ತ ಸೂರ್ಯ ಕುಮಾರ್​​ ಕೂಡ 8ರನ್​ಗೆ ಸುಸ್ತಾದ್ರು. ಆದ್ರೆ ವಿರಾಟ್​ ಕೊಹ್ಲಿ, ವಿಂಡೀಸ್​ ಬೌಲರ್​​ಗಳಿಗೆ ಬೆಂಡೆತ್ತಿ 7 ಬೌಂಡರಿ, 1 ಸಿಕ್ಸರ್​ ನೆರವಿನಿಂದ ತಮ್ಮ 30ನೇ ಅರ್ಧಶತಕ ಸಿಡಿಸಿದ್ರು.

ಅಬ್ಬರಿಸಿದ ರಿಷಭ್​ ಪಂತ್​, ಸ್ಫೋಟಿಸಿದ ವೆಂಕಟೇಶ್​ ಅಯ್ಯರ್​..!
ಇನ್ನು ಕೊಹ್ಲಿ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಔಟಾಗಿ ಪೆವಿಲಿಯನ್​ ಸೇರಿದ್ರು. ಆಗ ಟೀಮ್​ ಇಂಡಿಯಾ 106 ರನ್​ಗೆ 4 ವಿಕೆಟ್​ ಕಳೆದುಕೊಂಡಿತ್ತು. ಬಳಿಕ ಒಂದಾದ ರಿಷಭ್​ ಪಂತ್​​​ ಮತ್ತು ವೆಂಕಟೇಶ್​ ಅಯ್ಯರ್​, ಬಿರುಸಿನ ಬ್ಯಾಟಿಂಗ್​ ನಡೆಸಿದ್ರು. ಮೈದಾನದ ಮೂಲೆ ಮೂಲೆಗೂ ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದ್ರು. ಈ ವೇಳೆ 33 ರನ್ ಗಳಿಸಿದ್ದ ವೆಂಕಿ ಔಟಾದ್ರೆ, ಪಂತ್​​ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದ್ರು. ಅಂತಿಮವಾಗಿ ಭಾರತ ತಂಡ 5 ವಿಕೆಟ್​ ನಷ್ಟಕ್ಕೆ 186 ರನ್​​ಗಳ ಬೃಹತ್​ ಮೊತ್ತ ಕಲೆ ಹಾಕ್ತು.

ಆರಂಭದಲ್ಲಿ ಮುಗ್ಗರಿಸಿ, ಮತ್ತೆ ಅಬ್ಬರಿದ ವಿಂಡೀಸ್​..!
ಬೃಹತ್​ ಸವಾಲನ್ನು ಬೆನ್ನತ್ತಿದ ವಿಂಡೀಸ್​, ಆರಂಭದಲ್ಲೇ ಎರಡು 2 ವಿಕೆಟ್​ ಕಳೆದುಕೊಂಡಿತು. ಬ್ರೆಂಡನ್​ ಕಿಂಗ್​​ 22 ರನ್​, ಕೈಲ್ ಮೇಯರ್​​​ 9 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಆದ್ರೆ ಬಳಿಕ ಒಂದಾದ ನಿಕೋಲಸ್​ ಪೂರನ್​ ಮತ್ತು ರಾವ್​ಮನ್​ ಪೊವೆಲ್​, ಭಾರತೀಯ ಬೌಲರ್​ಗಳ ಬೆವರಿಳಿಸಿದ್ರು. ಸಿಕ್ಕ ಜೀವದಾನಗಳನ್ನ ಲಾಭ ಮಾಡಿಕೊಂಡ ಈ ಜೋಡಿ, ಶತಕದ ಜೊತೆಯಾಟವಾಡಿತು. ಅಲ್ಲದೆ ಪೂರನ್​ ಮತ್ತು ಪೊವೆಲ್ ತಲಾ ಅರ್ಧಶತಕ ಸಿಡಿಸಿದ್ರು. ಆದ್ರೆ 62 ರನ್​ ಸಿಡಿಸಿದ್ದ ಪೂರನ್​ ಕೊನೆಯಲ್ಲಿ ಭುವಿಗೆ ಔಟಾದ್ರು.

ಗೆಲ್ಲುವ ಅವಕಾಶ ಇದ್ದರೂ ಸೋತ ವಿಂಡೀಸ್​
ಪೂರನ್​ ಮತ್ತು ಪೊವೆಲ್​ ಸ್ಫೋಟಕ ಆಟಕ್ಕೆ ಒಂದು ಹಂತದಲ್ಲಿ ಪಂದ್ಯ ಭಾರತದಿಂದ ಕೈ ಜಾರಿ ಹೋಗಿತ್ತು. ಪೂರನ್​ ಔಟಾದ್ರೂ, ಪೊವೆಲ್​ ಇನ್ನೂ ಕ್ರಿಸ್​ನಲ್ಲೇ ಇದ್ರು. ಆದರೆ ಪಂದ್ಯದ ಕೊನೆಯವರೆಗೂ ಇದ್ದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಪೊವೆಲ್​ ಅಜೇಯ 68 ರನ್​ ಗಳಿಸಿದರೂ, ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು. ಅಂತಿಮ ಎರಡು ಓವರ್​ಗಳಲ್ಲಿ ಭುವನೇಶ್ವರ್​ ಮತ್ತು ಹರ್ಷಲ್​ ಪಟೇಲ್​ ಸಂಘಟಿತ ಬೌಲಿಂಗ್​ ದಾಳಿ ನಡೆಸಿ ಭಾರತಕ್ಕೆ 8 ರನ್​​ ಜಯದ ಕಾಣಿಕೆ ನೀಡಿದ್ರು.

News First Live Kannada


Leave a Reply

Your email address will not be published. Required fields are marked *