ಮಿಲ್ಖಾ ಸಿಂಗ್.. ಭಾರತದ ಹೆಮ್ಮೆಯ ಪುತ್ರ. ಅವರ ಜೀವನವೇ ಒಂದು ಓಟ, ಹೋರಾಟವಾಗಿತ್ತು.  91ರ ವಯಸ್ಸಲ್ಲೂ ಕೋವಿಡ್ ವಿರುದ್ಧ ನಿರಂತರ ಹೋರಾಟ ನಡೆಸಿದ್ದರು. ಆದ್ರೆ, ಮಹಾಮಾರಿ ವಿರುದ್ಧದ ಸೆಣಸಾಟದಲ್ಲಿ ಬಸವಳಿದು ಓಟ ನಿಲ್ಲಿಸಿದ್ದಾರೆ. ಕ್ರೀಡಾಲೋಕದ ಒಂದು ಸುವರ್ಣಯುಗವನ್ನೇ ಕಳೆದುಕೊಂಡಂತಾಗಿದೆ.

ಭಾರತದಲ್ಲಿ ಈಗ ಕ್ರಿಕೆಟ್ ಒಂದು ಧರ್ಮವಾಗಿ ಬೆಳೆದುನಿಂತಿದೆ. ಕೆಲ ಅಥ್ಲೆಟ್‌ಗಳು ಭಾರತದ ಕ್ರೀಡಾಲೋಕಕ್ಕೆ ವೈವಿಧ್ಯತೆ ತಂದಿದ್ದಾರೆ. ಕುಸ್ತಿಯಲ್ಲಿ ಸುಶೀಲ್ ಕುಮಾರ್, ಬಾಕ್ಸಿಂಗ್‌ನಲ್ಲಿ ವಿಜೇಂದರ್, ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ, ರಾಜವರ್ಧನ್ ಸಿಂಗ್ ರಾಥೋಡ್, ವೇಯ್ಟ್​ ಲಿಫ್ಟಿಂಗ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಮುಂತಾದ ಅಥ್ಲೀಟ್ಸ್​, ನಮ್ಮ ದೇಶದ ಹಿರಿಮೆಯನ್ನ ವಿಶ್ವದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ. ಆದ್ರೆ, ಇದೆಲ್ಲಕ್ಕೂ ಮೊದಲು ಓಟದ ಮೂಲಕ ದೇಶದ ಅಥ್ಲೆಟಿಕ್ಸ್ ರಂಗಕ್ಕೆ ಹೊಸ ಶಖೆ ತಂದವರು ಮಿಲ್ಖಾ ಸಿಂಗ್.

ಹೌದು. ಅಥ್ಲೆಟಿಕ್ಸ್​ನಲ್ಲಿ ಸಾಧನೆಯನ್ನೇ ಮಾಡದ ಭಾರತಕ್ಕೆ ಹೊಸ ದಿಕ್ಕು, ದೆಸೆಯಾಗಿದ್ದು. ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ,. ಇಂದು ಒಲಪಿಕ್ಸ್​ನಲ್ಲಿ ಭಾರತದ ತಿರಂಗ ಧ್ವಜ ಹಾರುವಂತೆ ಮಾಡಿದ್ದರ ರೂವಾರಿ ಮಿಲ್ಖಾ ಸಿಂಗ್. ತನ್ನ ಓಟದಿಂದಲೇ ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ದಿಗ್ಗಜ, ತನ್ನ ಜೀವನವನ್ನೂ ಓಟದಿಂದಲೇ ಕಟ್ಟಿಕೊಂಡವರು. ಆದ್ರೆ, ಓಟಗಾರನ ಓಟವನ್ನೇ ಕೋವಿಡ್ ಎಂಬ ಮಹಾಮಾರಿ ನಿಲ್ಲಿಸಿದೆ. ಯಾವುದಕ್ಕೂ ಬಗ್ಗದ ಆ ಛಲದಂಕ ಮಲ್ಲನ ಜೀವವಾಯುವನ್ನೇ ಬಲಿ ಪಡೆದಿದೆ.

ಕೋವಿಡ್ ಜೊತೆ ನಿರಂತರ ಒಂದು ತಿಂಗಳ ಹೋರಾಟ
ಓಟ ನಿಲ್ಲಿಸಿದ ಮಿಲ್ಖಾ ಸಿಂಗ್

ಮೇ.20ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಿಲ್ಖಾ ಸಿಂಗ್, ಮೇ 24ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 30ರಂದು ಚೇತರಿಕೆ ಕಾರಣ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದ್ರೆ ಕೆಲ ದಿನಗಳ ಬಲಿಕ ಮತ್ತೆ ಕೊರೊನಾ ಸೋಂಕಿಗೆ ತುತ್ತಾಗಿ ಪುನಃ ಆಸ್ಪತ್ರೆಗೆ ಸೇರಿದ್ದರು. ಆಕ್ಸಿಜನ್​ ಪ್ರಮಾಣ ಕಡಿಮೆಯಾದ ಕಾರಣ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಿಲ್ಖಾ, ಕೆಲ ದಿನಗಳ ಹಿಂದಷ್ಟೇ ಕೋವಿಡ್ ನೆಗಟಿವ್​ ವರದಿಯಿಂದಾಗಿ ಜನರಲ್​​ ವಾರ್ಡ್​ಗೆ ಶಿಫ್ಟ್​ ಆಗಿದ್ದರು. ಆದ್ರೆ, ಮತ್ತೆ ಆಕ್ಸಿಜನ್‌ ಪ್ರಮಾಣ ಕಡಿಮೆಯಾದ ಕಾರಣ, ಚಿಂತಾಜನಕ ಸ್ಥಿತಿಗೆ ತಲುಪಿದ್ದರು. ನಿರಂತರ ಒಂದು ತಿಂಗಳ ಕಾಲ ಕೋವಿಡ್ ಜೊತೆ ಸಾವಿನೊಂದಿಗೆ ಹೊರಾಟ ನಡೆಸಿ, ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಇಂದಿನ ಪಾಕ್​​ನ ಗೋಬಿಂದ್‌ಪುರದಲ್ಲಿ ಜನಿಸಿದ್ದ ಮಿಲ್ಖಾ
ಕೋಮು ದಂಗೆ ವೇಳೆ ಭಾರತ ಸೇರಿದ್ದ 12ರ ಬಾಲಕ

ಪ್ರಸ್ತುತ ಪಾಕಿಸ್ತಾನದಲ್ಲಿರುವ ಗೋವಿಂದಪುರದಲ್ಲಿ 1928ರ ನವೆಂಬರ್​ 20ರಂದು ಜನಿಸಿದ್ದ ಮಿಲ್ಖಾ ಸಿಂಗ್, ಭಾರತಕ್ಕೆ ಬಂದಿದ್ದು 12 ವರ್ಷದ ವಯಸ್ಸಿನಲ್ಲಿ. ಇಲ್ಲಿಯವರೆಗೆ ಶಾಲೆಗೆ ತಡವಾಗಬಾರದೆಂಬ ಕಾರಣಕ್ಕೆ ಮಾತ್ರವೇ ಓಡುತ್ತಿದ್ದ ಬಾಲಕ, ಮತ್ತೆ ಓಡಿದ್ದು ಜೀವ ಉಳಿಸಿಕೊಳ್ಳುವ ಸಲುವಾಗಿ. ಭಾರತ-ಪಾಕಿಸ್ತಾನದ ವಿಭಜನೆ ವೇಳೆ ನಡೆದ ಕೋಮು ದಂಗೆಯಲ್ಲಿ ಕುಟುಂಬ ಹತ್ಯೆಗೀಡಾದಾಗ ಅಪ್ಪನ ‘ಭಾಗ್ ಮಿಲ್ಕಾ ಭಾಗ್’ ಕೂಗಿಗೆ ಓಡಿದ ಹುಡುಗ, ಪ್ರಾಣ ಉಳಿಸಿಕೊಳ್ಳಲು ಭಾರತಕ್ಕೆ ಬಂದು ಸೇರುತ್ತಾನೆ.

ಇತ್ತ ಭಾರತದಲ್ಲಿ ತಿರಂಗಾ ಹಾರಿಸಿ ಜನ ಕುಣಿಯುತ್ತಿದ್ದರೆ, ಇದೇ ಹೊತ್ತಿಗೆ ಪಾಕಿಸ್ತಾನದಿಂದ ಹಿಂಡುಹಿಂಡಾಗಿ ಜನ ದಿಕ್ಕಿಲ್ಲದೆ ಭಾರತಕ್ಕೆ ಬರುತ್ತಿದ್ದರು. ಆಗ ಅವರಿಗೆಲ್ಲಾ ತಾತ್ಕಾಲಿಕ ನೆಲೆ ಕೊಟ್ಟಿದ್ದು ದೆಹಲಿಯ ಪುರಾನಾ ಕಿಲಾದ ಹಳೆಯ ಕೋಟೆ. ದೂರದ ಮುಲ್ತಾನ್, ಸಿಂಧ್, ಪಂಜಾಬ್‌ಗಳಿಂದ ಬಂದವರೆಲ್ಲಾ ನೆರೆದು ಅಲ್ಲಿ ಬೇರೆಯದ್ದೇ ಭಾರತ ನಿರ್ಮಾಣವಾಗಿತ್ತು. ಅಲ್ಲಿ 12 ವರ್ಷದ ಬಾಲಕ ಜನರ ನಡುವೆ ನುಸುಳುತ್ತಿದ್ದ. ದೊಡ್ಡ ಕೈಗಳ ಮಧ್ಯೆ ಸಣ್ಣ ಕೈಗೆ ತಿಂಡಿಯ ಪೊಟ್ಟಣಗಳು ಸಿಗದೆ, ತುತ್ತು ಅನ್ನಕ್ಕೂ ಪರದಾಡಿದ್ದ. ಒಂದು ಹೊತ್ತಿನ ಊಟ ಸಿಗದೆ, ದೆಹಲಿಯ ನಿರಾಶ್ರಿತರ ಶಿಬಿರದಲ್ಲಿ ಕಳೆದ ಆ ದಿನಗಳು ನಿಜಕ್ಕೂ ಘನಘೋರವಾಗಿದ್ದವು. ನಂತ್ರ ಹೇಗೋ ಅಕ್ಕ-ಭಾವನ ಜೊತೆ ಸೇರಿದ ಮಿಲ್ಖಾ ಸಂತೋಷ ಟ್ಟರು. ನಂತರ ಭಾವ ಅಕ್ಕನಿಗೆ ನೀಡುತ್ತಿದ್ದ ಕಿರುಕುಳ ಸಹಿಸದೆ ಭಾವನನ್ನೇ ಹೊಡೆದು ಓಡಿಹೋಗ್ತಾರೆ.

ಕಳ್ಳನೋ ಡಕಾಯಿತನೋ ಆಗಬೇಕಿದ್ದ ಮಿಲ್ಖಾ
ನಂತರ ಸೇನೆಗೆ ಸೇರಿ ಅಥ್ಲೀಟ್ ಆಗಿದ್ದೇ ರೋಚಕ

ಭಾವನನ್ನ ಹೊಡೆದು ನಂತರ ಕಳ್ಳರ ಗ್ಯಾಂಗ್ ಸೇರಿದ್ದ ಮಿಲ್ಖಾ, ಕಳ್ಳನೋ, ಡಕಾಯಿತನೋ ಆಗಿಬಿಡುವ ಸಂಭವವೂ ಇತ್ತು. ಆದ್ರೆ, ಪ್ರೀತಿಸಿದ ಹುಡುಗಿ ಕೈತಪ್ಪಿ ಹೋಗುತ್ತಾಳೆ ಎಂಬ ಕಾರಣ ಸೇನೆಗೆ ಸೇರುವಂತೆ ಮಾಡುತ್ತೆ. ಓಡಲು ಪ್ರಾರಂಭಿಸಿದಾಗ ಅವರ ಅದೃಷ್ಟ ಖುಲಾಯಿಸುತ್ತದೆ. ಸೈನ್ಯದ ಅತ್ಯುತ್ತಮ ಅಥ್ಲೀಟ್ ಎನ್ನಿಸಿಕೊಳ್ಳುತ್ತಾರೆ. ವೈರಿಗಳು ಕಾಲು ಕಿತ್ತುಹೋಗುವಂತೆ ಚಚ್ಚಿ ಹಾಕಿದರೂ, ರಕ್ತಸಿಕ್ತ ಕಾಲುಗಳಿಗೆ ಕಟ್ಟಿದ್ದ ಬ್ಯಾಂಡೇಜೂ ಕಿತ್ತು ಹೋಗುವಂತೆ ಓಡುತ್ತಾರೆ. ಮಿಲ್ಖಾ ಓಟದ ಮಹಿಮೆ ಅರಿತ ಸೈನ್ಯಾಧಿಕಾರಿಗಳು ಅವರಿಗೆ ಮತ್ತಷ್ಟು ತರಬೇತಿ ನೀಡಿ ಅತ್ಯುತ್ತಮ ಕ್ರೀಡಾಪಟುವಾಗಿ ರೂಪಿಸುತ್ತಾರೆ.

ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಿಲ್ಖಾ ಸಿಂಗ್‌, ನಂತರ ಅಥ್ಲೆಟಿಕ್ಸ್‌ನಲ್ಲಿ ಭಾರತವನ್ನ ಪ್ರತಿನಿಧಿಸುವ ಸುವರ್ಣ ಅವಕಾಶವನ್ನೂ ಪಡೆದರು. ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಅಥ್ಲೀಟ್‌ ಎಂಬ ಹಿರಿಮೆ ಮಿಲ್ಖಾರದ್ದಾಗಿದೆ. 1958 ರಲ್ಲಿ ನಡೆದ ಕಾರ್ಡಿಫ್ ಕಾಮನ್‌ವೆಲ್ತ್ ಗೇಮ್‌ನಲ್ಲಿ 400 ಮೀ. ಓಟವನ್ನ ಕೇವಲ 46.16 ಸೆಕೆಂಡಿನಲ್ಲಿ ಪೂರ್ತಿಗೊಳಿಸಿದ್ದ ಮಿಲ್ಖಾ ಸಿಂಗ್, ಚಿನ್ನದ ಪದಕ ಗೆದಿದ್ದರು. ಇದು ಕಾಮನ್‌ವೆಲ್ತ್ ಗೇಮ್‌ನಲ್ಲಿ ಭಾರತ ಗೆದ್ದ ಮೊಟ್ಟ ಮೊದಲ ಚಿನ್ನದ ಪದಕವಾಗಿತ್ತು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್​​​ ಡಿಸ್ಕಸ್‌ ಥ್ರೋನಲ್ಲಿ ಕೃಷ್ಣ ಪೂಂಜಾ ಚಿನ್ನದ ಪಡೆಯುವವರೆಗೂ, ಮಿಲ್ಖಾ ಏಕಮಾತ್ರ ಸ್ವರ್ಣ ಪದಕ ವಿಜೇತ ಎನಿಸಿದ್ದರು. ಈ ದಾಖಲೆ 50 ವರ್ಷಗಳಿಗೂ ಹೆಚ್ಚು ಕಾಲ ಉಳಿದಿತ್ತು.

ಮಿಲ್ಖಾ ಸಿಂಗ್‌ ಸಾಧನೆ
* 1958ರ ಏಷ್ಯನ್​​ಗೇಮ್ಸ್​ 200 & 400 ಮೀ. ವಿಭಾಗದಲ್ಲಿ ಚಿನ್ನ
* 1962ರ ಏಷ್ಯನ್ ಗೇಮ್ಸ್‌ 400 ಮತ್ತು 4‍X400 ರಿಲೇಯಲ್ಲಿ ಚಿನ್ನ
* 1960ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್​​​ನಲ್ಲಿ 4ನೇ ಸ್ಥಾನ

1958ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ 200 ಮೀಟರ್ ಮತ್ತು 400 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಮಿಲ್ಖಾ ಸಿಂಗ್, ನಂತರ 1962ರ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಹಾಗೂ 4‍X400 ರಿಲೇ ವಿಭಾಗದಲ್ಲಿಯೂ ಇಂಥದ್ದೇ ಸಾಧನೆ ಮಾಡಿ ಮೆರೆದಿದ್ದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್‌ ಅಂತರವನ್ನು 45.6 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. 4ನೇ ಸ್ತಾನಕ್ಕೆ ತೃಪ್ತಿ ಪಡಬೇಕಾಗುತ್ತೆ.

ಕ್ಷಣಾರ್ಧದಲ್ಲಿ ಭಗ್ನವಾಗಿತ್ತು ದ ಫ್ಲಯಿಂಗ್ ಸಿಖ್ ಕನಸು!
ದ ಫ್ಲಯಿಂಗ್ ಸಿಖ್ ಎಂದೇ ಖ್ಯಾತಿ ಗಳಿಸಿದ್ದ ಮಿಲ್ಖಾ, 1960ರ ರೋಮ್ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ತಾರೆ ಎಂಬ ಬಲವಾದ ನಂಬಿಕೆಯಿತ್ತು. 400 ಮೀಟರ್ ಸ್ಪರ್ಧೆಯ ಮೊದಲಾರ್ಧ ಮುಂದಿದ್ದ ಮಿಲ್ಖಾ, ಕೊನೆಯ ಕ್ಷಣದಲ್ಲಿ ಕೊಂಚ ಹಿಂದುಳಿದು 4ನೇ ಸ್ಥಾನಕ್ಕೆ ತೃಪ್ತಿಪಡಬೇಕಾಗುತ್ತೆ. ಇದಕ್ಕೆ ಕಾರಣ ಚಿನ್ನ ಗೆಲ್ಲುವ ಹಂತದಲ್ಲಿ ಒಂದು ಕ್ಷಣ ಪಕ್ಕಕ್ಕೆ ತಿರುಗಿ ನೋಡಿದ್ದೇ ಮುಳುವಾಗಿತ್ತು.  ದುರದೃಷ್ಟವಶಾತ್ ಕೇವಲ 0.1 ಸೆಕೆಂಡ್‌ಗಳ ವ್ಯತ್ಯಾಸದಲ್ಲಿ ಕಂಚಿನ ಪದಕವನ್ನ ಕಳೆದುಕೊಂಡಿದ್ದರು. ಮೂರು ಒಲಿಂಪಿಕ್ಸ್​ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದ ಮಿಲ್ಖಾಗೆ, 1959ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ ಪ್ರದ್ಮಶೀ ನೀಡಿ ಗೌರವಿಸಲಾಯ್ತು.

ಹೀಗೆ ಜೀವನವೂದಕ್ಕೂ ಓಡುತ್ತಿದ್ದ ಮಿಲ್ಖಾಗೆ, ಒಲಿಂಪಿಕ್ಸ್​ನಲ್ಲಿ ಭಾರತದ ಅಥ್ಲೀಟ್​​​ ಪದಕ ಗೆಲುವನ್ನ ಕಣ್ತುಂಬಿಕೊಳ್ಳಬೇಕೆಂಬ ಮಹದಾಸೆ ಇತ್ತು. ಆದ್ರೆ, ಆಸೆ ಈಡೇರುವ ಮುನ್ನವೇ ಮಹಾಮಾರಿ ಜೊತೆಗಿನ ಸೆಣಸಾಟದಲ್ಲಿ ಬಸವಳಿದು ಇಹಲೋಕ ತ್ಯಜಿಸಿದ್ದಾರೆ. ಇದರೊಂದಿಗೆ ಕ್ರೀಡಾಲೋಕದ ಸುವರ್ಣ ಯುಗವೊಂದು ಮುಗಿದಂತಾಗಿದೆ. ಆದ್ರೆ, ಸೇನಾಧಿಕಾರಿಯಾಗಿ, ಕ್ರೀಡಾಪಟುವಾಗಿ ಭಾರತಕ್ಕೆ ನೀಡಿದ ಕೊಡುಗೆ ಹಾಗೂ ಆತನ ಸಾಧನೆ ಇತಿಹಾಸದಲ್ಲಿ ಎಂದೆಂದಿಗೂ ಚಿರಸ್ಥಾಯಿ.

The post ಕೋಮು ದಂಗೆ ವೇಳೆ ಭಾರತ ಸೇರಿದ್ದ 12ರ ಬಾಲಕ- ಸೇನೆಗೆ ಸೇರಿ ಅಥ್ಲೀಟ್ ಆಗಿದ್ದೇ ರೋಚಕ appeared first on News First Kannada.

Source: newsfirstlive.com

Source link