ಹೈಕೋರ್ಟ್ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತಂಪು ಪಾನೀಯ ಸೇವಿಸಿದ್ದಕ್ಕಾಗಿ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಗರಂ ಆಗಿ ಅಧಿಕಾರಿಗೆ ವಿಶೇಷ ಶಿಕ್ಷೆ ವಿಧಿಸಿದ ಘಟನೆ ಗುಜರಾತ್ನಲ್ಲಿ ವರದಿಯಾಗಿದೆ.
ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಾಗೂ ಅಶುತೋಷ್ ಶಾಸ್ತ್ರಿ ಅವರಿದ್ದ ಪೀಠ, ಟ್ರಾಫಿಕ್ನಲ್ಲಿ ಮಹಿಳೆ ಮೇಲೆ ಹಲ್ಲೆಯ ಪ್ರಕರಣವನ್ನು ವರ್ಚ್ಯೂವಲ್ ವಿಧಾನದ ಮೂಲಕ ವಿಚಾರಣೆ ನಡೆಸುತ್ತಿದ್ದರು .ಈ ವೇಳೆ ಎ.ಎಂ. ರಾಥೋರ್ ಎಂಬ ಪೊಲೀಸ್ ಅಧಿಕಾರಿ ಕೂಡ ವಿಚಾರಣೆಯಲ್ಲಿ ಭಾಗಿಯಾಗಿದ್ದು, ಈ ವೇಳೆ ಪೊಲೀಸ್ ಅಧಿಕಾರಿ ಬಾಯಾರಿಕೆಯಾಗಿ ಪಕ್ಕದಲ್ಲಿದ್ದ ಕೋಕಾ ಕೋಲಾ ಸೇವೆನೆ ಮಾಡಿದ್ದಾರೆ.
ವಿಚಾರಣೆ ನಡುವೆಯೇ ಇದನ್ನ ಗಮನಿಸಿದ ನ್ಯಾಯಮೂರ್ತಿಗಳು ಪೊಲೀಸ್ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕೋರ್ಟ್ನ ವಕೀಲರಿಗೆ ಬರೋಬ್ಬರಿ 100 ಕ್ಯಾನ್ ಕೋಕಾ ಕೋಲಾವನ್ನು ವಿತರಿಸುವಂತೆ ಆದೇಶಿಸಿದ್ದಾರೆ. ವಿಚಾರಣೆ ವೇಳೆ ಈ ರೀತಿ ವರ್ತಿಸುವುದು ಕೋರ್ಟ್ನ ಶಿಸ್ತನ್ನು ಉಲ್ಲಂಘಿಸಿದಂತೆ ಇದು ಪೀಠಕ್ಕೆ ಅಗೌರವ ತೋರುವ ವರ್ತನೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದು, ಒಂದೊಮ್ಮೆ ನೇರ ವಿಚಾರಣೆಯಲ್ಲಿ ಪೊಲೀಸ್ ಅಧಿಕಾರಿ ವಿಚಾರಣೆಗೆ ಕೋರ್ಟ್ನಲ್ಲಿ ಹಾಜರಾಗಿದ್ದಾರೆ ಈ ರೀತಿ ಮಾಡಲು ಸಾಧ್ಯವಿತ್ತೇ.. ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಯ ನಡೆಗೆ ಸರ್ಕಾರ ಪರ ಹಾಜರಿದ್ದ ಉನ್ನತ ಅಧಿಕಾರಿ, ನ್ಯಾಯಾಮೂರ್ತಿಗಳ ಬಳಿ ಕ್ಷಮೆ ಕೋರಿದ್ದರು ಎಂದು ವರದಿಯಾಗಿದೆ.