ಕೋಲಾರ: ಕೊರೊನಾ ತಡೆಗಟ್ಟಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲು, ರಾತ್ರಿ ಶ್ರಮಿಸುತ್ತಿರುವ ಜಿಲ್ಲೆಯ 98 ಪೊಲೀಸರಿಗೆ ಹೆಚ್ಚು ಸೋಂಕು ತಗುಲಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮಹಾಮಾರಿ ಬಲಿ ಪಡೆದಿದೆ.

ಜಿಲ್ಲೆಯ 98 ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಆರಕ್ಷಕರು ಕರ್ತವ್ಯಕ್ಕೆ ಹಿಂದೇಟು ಹಾಕುವಂತಾಗಿದೆ. 2 ದಿನದ ಹಿಂದೆಯಷ್ಟೇ ಮೀಸಲು ಪೊಲೀಸ್ ಪಡೆಯ ಸಹಾಯಕ ಸಬ್ ಇನ್‍ಸ್ಪೆಕ್ಟರ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪಿಎಸ್‍ಐ ಶಾಮಿಲಿ ಅವರು ಕೋವಿಡ್‍ನಿಂದ ಜಿಲ್ಲೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಲಾಕ್‍ಡೌನ್ ಜಾರಿಗೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯನ್ನು ಸೋಂಕು ಬೆಂಬಿಡದೆ ಕಾಡುತ್ತಿದೆ. ಪರಿಣಾಮ ಕೊರೊನಾ ಸೋಂಕು ಇಲಾಖೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ಸೋಂಕಿತರು ಚಿಕಿತ್ಸೆಗಾಗಿ ರಜೆ ಪಡೆದಿರುವುದರಿಂದ ಸಿಬ್ಬಂದಿ ಕೊರತೆ ಎದುರಾಗಿದೆ. ಹಾಲಿ ಸಿಬ್ಬಂದಿ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ. ಕೊರೊನಾ ಸೋಂಕಿತ ಸಿಬ್ಬಂದಿ ಪೈಕಿ ಹಲವರು ಚೇತರಿಸಿಕೊಳ್ಳುತ್ತಿದ್ದಾರೆ. ಸೋಂಕಿತ ಸಿಬ್ಬಂದಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ.

ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಭಯದಲ್ಲೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಜಿಲ್ಲೆಯಲ್ಲಿ 18 ಅಂತರ್ ರಾಜ್ಯ ಚೆಕ್ ಪೋಸ್ಟ್, ಹಲವು ಅಂತರ್ ತಾಲೂಕು ಚೆಕ್ ಪೋಸ್ಟ್ ಸೇರಿದಂತೆ ಹಗಲಿರುಳು ಬಂದೋಬಸ್ತ್ ಮಾಡಬೇಕಾಗಿದೆ. ಪರಿಣಾಮ ಇತರೆ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

ಜಿಲ್ಲೆಯಲ್ಲಿ ಕೋಲಾರ ಜಿಲ್ಲೆ ಮತ್ತು ಕೆಜಿಎಫ್ ಪೊಲೀಸ್ ಜಿಲ್ಲೆ ವ್ಯಾಪ್ತಿ ಎಂದು ಎರಡು ವಿಭಾಗಗಳಿದೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯ ವ್ಯಾಪ್ತಿಯ ಕೋಲಾರ, ಮುಳಬಾಗಿಲು, ಮಾಲೂರು ಮತ್ತು ಶ್ರೀನಿವಾಸಪುರ ತಾಲೂಕಿನಲ್ಲಿ 7 ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 64 ಸಿಬ್ಬಂದಿಗೆ ಸೋಂಕು ಬಂದಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 61 ಮಂದಿ ಮನೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ. ಇನ್ನೂ ಕೆಜಿಎಫ್ ಪೊಲೀಸ್ ಜಿಲ್ಲೆ ವ್ಯಾಪ್ತಿಯ ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕಿನಲ್ಲಿ 34 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಎಲ್ಲರೂ ತಮ್ಮ ಮನೆಗಳಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

The post ಕೋಲಾರದಲ್ಲಿ 98 ಪೊಲೀಸರಿಗೆ ಕೊರೊನಾ- ಇಬ್ಬರು ಅಧಿಕಾರಿಗಳು ಸಾವು appeared first on Public TV.

Source: publictv.in

Source link