ಕೋಲಾರ ಜಿಲ್ಲೆಯಲ್ಲಿ ರಂಗೇರಿದ ಕನ್ನಡ ಸಾಹಿತ್ಯ ಪರಿಷತ್​ ಚುನಾವಣಾ ಕಣ; ಸಂಪೂರ್ಣ ವಿವರ ಇಲ್ಲಿದೆ | Kolar Kannada Sahitya Parishat Election News special report here


ಕೋಲಾರ ಜಿಲ್ಲೆಯಲ್ಲಿ ರಂಗೇರಿದ ಕನ್ನಡ ಸಾಹಿತ್ಯ ಪರಿಷತ್​ ಚುನಾವಣಾ ಕಣ; ಸಂಪೂರ್ಣ ವಿವರ ಇಲ್ಲಿದೆ

ಕೋಲಾರ ಜಿಲ್ಲೆಯಲ್ಲಿ ರಂಗೇರಿದ ಕನ್ನಡ ಸಾಹಿತ್ಯ ಪರಿಷತ್​ ಚುನಾವಣಾ ಕಣ

ಕೋಲಾರ: ಆಂಧ್ರ ಮತ್ತು ತಮಿಳುನಾಡಿಗೆ ಹೊಂದಿಕೊಂಡಂತಿರುವ ಕೋಲಾರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರ ಚುನಾವಣಾ ಕಣ ರಂಗೇರುತಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತುಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಹಾಲಿ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷ ಆರೋಪ ಪ್ರತ್ಯಾರೋಪಗಳ ಕದನ ಕೂಡಾ ತಾರಕಕ್ಕೇರಿದೆ.

ಜಿಲ್ಲೆಯಲ್ಲಿ ಕನ್ನಡವನ್ನು ಉಳಿಸುವ, ಬೆಳೆಸುವ ಉದ್ದೇಶವನ್ನು ಹೊಂದಿರುವ ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇದೇ ತಿಂಗಳ 21ನೇ ತಾರೀಖಿನಂದು ಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ಅಭ್ಯರ್ಥಿಗಳಿದ್ದಾರೆ. ಕೋಲಾರ ಕಸಾಪ ಜಿಲ್ಲಾಧ್ಯಕ್ಷ ಸ್ಥಾನ ಚುನಾವಣೆಯ ಅಂತಿಮ ಕಣದಲ್ಲಿ ನಾಲ್ವರು ಅಭ್ಯರ್ಥಿಗಳು ಉಳಿದಿದ್ದಾರೆ. ನಾಲ್ವರು ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ. ಅಂತಿಮ ಕಣದಲ್ಲಿ ಇರುವ ಅಭ್ಯರ್ಥಿಗಳ್ಯಾರು ಅಂತ ನೋಡೋದಾದ್ರೆ, ಕಸಾಪ ಹಾಲಿ ಅಧ್ಯಕ್ಷರಾದ ನಾಗಾನಂದ ಕೆಂಪರಾಜ್ ಮತ್ತು ಖಾಸಗಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಗೋಪಾಲಗೌಡರ ನಡುವೆ ಮುಖಾಮುಖಿ ಪೈಪೋಟಿ ಏರ್ಪಟ್ಟಿದೆ. ಇನ್ನು ಉಳಿದಂತೆ ಶಿವಕುಮಾರ್ ಹಾಗೂ ನಾರಾಯಣಸ್ವಾಮಿ ಎಂಬುವರು ಕಣದಲ್ಲಿದ್ದಾರೆ.

ಪ್ರಚಾರ ಕಾರ್ಯ ಚುರುಕುಗೊಳಿಸಿದ ಅಭ್ಯರ್ಥಿಗಳು
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು ಪ್ರಚಾರ ಜೋರಾಗಿದೆ. ನಾಗಾನಂದ್​ ಕೆಂಪರಾಜ್ ಹಾಗೂ ಗೋಪಾಲಗೌಡ ಅವರು ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದು, ಪ್ರತಿಯೊಂದು ತಾಲೂಕುಗಳಿಗೆ ಭೇಟಿ ನೀಡಿ ಮತ ಮತಯಾಚನೆ ಮಾಡುತ್ತಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಜೆ.ಜಿ. ನಾಗರಾಜ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಿಂದಾಗಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಚುನಾವಣಾ ಕಣದಿಂದ ಜೆ.ಜಿ. ನಾಗರಾಜ್ ಅವರು ನಾಮಪತ್ರ ವಾಪಸ್ ಪಡೆದು ಕಣದಿಂದ ಹಿಂದೆ ಸರಿದು, ಗೋಪಾಲಗೌಡರಿಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ನಾಗಾನಂದ್ ಹಾಗೂ ಗೋಪಾಲಗೌಡರ ನಡುವೆ ಪ್ರಬಲ ಪೈಪೋಟಿ ಏರ್ಪಡುವ ಎಲ್ಲಾ ಸಾಧ್ಯತೆಗಳಿವೆ.

ಪ್ರಚಾರಕ್ಕೆ ಡಿಜಿಟಲ್​ ಮಾಧ್ಯಮದ ಬಳಕೆ, ಜೊತೆಗೆ ಮನೆ ಮನೆ ಪ್ರಚಾರ
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ತಾಲೂಕು, ಹೋಬಳಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಮತದಾರರ ಮನಸ್ಸು ಗೆಲ್ಲಲು ಮನೆ ಮನೆ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇನ್ನು ವಿಶೇಷವಾಗಿ ಕಸಾಪ ಚುನಾವಣೆ ಪ್ರಚಾರಕ್ಕೆ ಡಿಜಿಟಲ್ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಮತದಾರರಿಗೆ ಖುದ್ದು ಕರೆ ಮಾಡಿ ಹಾಗೂ ಸಂದೇಶದ ಮೂಲಕ ಅಭ್ಯರ್ಥಿಯ ಪರವಾಗಿ ಮತಯಾಚಿಸುತ್ತಿದ್ದಾರೆ. ಇದರೊಂದಿಗೆ ತಮ್ಮನ್ನು ಗೆಲ್ಲಿಸಿದರೆ ಕೈಗೊಳ್ಳುವ ಕೆಲಸಗಳ ಕುರಿತಂತೆಯೂ ಪ್ರಣಾಳಿಕೆಗಳನ್ನು ಹೊರಡಿಸುತ್ತಿದ್ದಾರೆ.

ಕೋಲಾರ, ಮುಳಬಾಗಿಲು ತಾಲ್ಲೂಕಿನ ಮತದಾರರೇ ನಿರ್ಣಾಯಕ
ಜಿಲ್ಲಾ ಕೇಂದ್ರ ಕೋಲಾರ ಹಾಗೂ ಮುಳಬಾಗಿಲು ತಾಲೂಕುಗಳಲ್ಲಿಯೇ ಶೇ. 50 ರಷ್ಟು ಮತದಾರರು ಇರುವುದರಿಂದ ಅಭ್ಯರ್ಥಿಗಳು ಎರಡು ತಾಲೂಕುಗಳಲ್ಲಿಯೇ ಹೆಚ್ಚಿನ ಪ್ರಚಾರ ಕೈಗೊಳ್ಳುತ್ತಿರುವುದು ಕಂಡುಬಂದಿದೆ. ಕೋಲಾರ ತಾಲೂಕಿನಲ್ಲಿ 3,393 ಹಾಗೂ ಮುಳಬಾಗಿಲು ತಾಲೂಕಿನಲ್ಲಿ 2,291 ಮತದಾರರಿದ್ದಾರೆ. ಹಾಗಾಗಿ ಅಭ್ಯರ್ಥಿಗಳ ಗಮನ ಹೆಚ್ಚಾಗಿ ಮುಳಬಾಗಿಲು ಹಾಗೂ ಕೋಲಾರ ತಾಲ್ಲೂಕಿನ ಮತದಾರರ ಮೇಲಿದೆ.

ಇನ್ನು ಹಾಲಿ ಕಸಾಪ ಅಧ್ಯಕ್ಷರಾಗಿರುವ ನಾಗಾನಂದ್​ ಕೆಂಪರಾಜು ಅವರು ತಮ್ಮ ಅವದಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಜೊತೆಗೆ ಮತ್ತೊಂದು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ, ಜೊತೆಗೆ ಮತ್ತೊಂದು ಅವಕಾಶ ನೀಡಿದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮತ್ತಷ್ಟು ಕನ್ನಡ ಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ

ಇದೇ ಮೊದಲ ಬಾರಿಗೆ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಗೋಪಾಲಗೌಡ ಅವರು ಹೊಸಬರಿಗೆ ಒಮ್ಮೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದು, ತಮಗೆ ಅವಕಾಶ ನೀಡಿದರೆ ತಾಲ್ಲೂಕಿಗೊಂದು ಸಾಹಿತ್ಯ ಭವನ ಹಾಗೂ ಜಿಲ್ಲಾ ಸಾಹಿತ್ಯ ಭವನ ನಿರ್ಮಾಣ ಮಾಡಿ, ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಭರವಸೆ ನೀಡುತ್ತಿದ್ದಾರೆ.

ಮತದಾರರ ವಿವರ
ತಾಲೂಕು ಮತದಾರರ ಸಂಖ್ಯೆ ಹೀಗಿದೆ
ಕೋಲಾರ- 3,393
ಬಂಗಾರಪೇಟೆ- 1,125
ಮುಳಬಾಗಿಲು- 2,291
ಶ್ರೀನಿವಾಸಪುರ- 1,222
ಕೆಜಿಎಫ್​- 7,22
ಮಾಲೂರು- 1,281
ಒಟ್ಟು ಮತದಾರರು- 10.043

ವಿಶೇಷ ವರದಿ: ರಾಜೇಂದ್ರಸಿಂಹ, ಟಿವಿ9 ಕನ್ನಡ

ಇದನ್ನೂ ಓದಿ: ಟೀಕಿಸುವ ಭರದಲ್ಲಿ ಹಿರಿಯ ಸಾಹಿತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಆಡಿಯೋ ವೈರಲ್

ಇದನ್ನೂ ಓದಿ: ಕೋಲಾರ: ಭಾರೀ ಮಳೆಗೆ ಕೊಳೆಯುತ್ತಿರುವ ಹೂವಿನ ಬೆಳೆ; ರೈತರು ಕಂಗಾಲು

TV9 Kannada


Leave a Reply

Your email address will not be published. Required fields are marked *