ಕೋಲಾರ: ಸರ್ಕಾರಿ ಜಾಗ ಉಳಿಸಲು ಗ್ರಾಮಸ್ಥರ ಹೋರಾಟ; 33 ಎಕರೆ ಗೋಮಾಳ ಭೂಮಿ ಉಳಿಸಿಕೊಂಡ ಜನರು | Farmers of Kolar Karnataka Govt Land Acquisition Protest against Land Mafia details here


ಕೋಲಾರ: ಸರ್ಕಾರಿ ಜಾಗ ಉಳಿಸಲು ಗ್ರಾಮಸ್ಥರ ಹೋರಾಟ; 33 ಎಕರೆ ಗೋಮಾಳ ಭೂಮಿ ಉಳಿಸಿಕೊಂಡ ಜನರು

ಕೋಲಾರ: ಸರ್ಕಾರಿ ಜಾಗ ಉಳಿಸಲು ಗ್ರಾಮಸ್ಥರ ಹೋರಾಟ

ಕೋಲಾರ: ಎಲ್ಲಾದರೂ ಸರ್ಕಾರಿ ಜಾಗ ಇದೆ ಅಂದರೆ ಸಾಕು ಏನಾದ್ರು ಗೋಲ್​ ಮಾಲ್​ ಮಾಡಿ ಭೂಮಿಯನ್ನು ನುಂಗಿಹಾಕಬೇಕು ಎಂದು ಬಹಳಷ್ಟು ಜನ ಹೊಂಚು ಹಾಕುತ್ತಾರೆ, ಆದರೆ ಇಲ್ಲೊಂದು ಗಡಿ ಗ್ರಾಮದ ಜನರು ಮಾತ್ರ ಸರ್ಕಾರಿ ಜಾಗವನ್ನು ಉಳಿಸಬೇಕು, ಕಾಲ ಕಾಲಕ್ಕೂ ಆ ಜಾಗ ಜನ ಜಾನುವಾರುಗಳಿಗೆ ಮೀಸಲಾಗಿರಬೇಕು ಎಂದು ವರ್ಷಾನುಗಟ್ಟಲೆ ಹೋರಾಟ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಹೋರಾಟಕ್ಕೆ ಸದ್ಯ ಜಯ ಸಿಕ್ಕಂತಾಗಿದೆ.

ಊರ ಹೊರಗಿನ 33 ಎಕರೆ ವಿಶಾಲವಾದ ಗೋಮಾಳ ಜಾಗ, ಅದರಲ್ಲಿ ನಿರ್ಭೀತಿಯಿಂದ ಕುರಿ ಮೇಕೆ ದನ ಕರುಗಳನ್ನು ಮೇಯಿಸುತ್ತಿರುವ ಗ್ರಾಮಸ್ಥರು. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಟಿ. ಕುರುಬರಹಳ್ಳಿ ಗ್ರಾಮದಲ್ಲಿ ಇಂತಹ ದೃಶ್ಯ ಕಂಡುಬಂದಿದೆ. ಮುಳಬಾಗಲು ತಾಲೂಕಿನ ಟಿ. ಕುರುಬರಹಳ್ಳಿ ಗ್ರಾಮದ ಸರ್ವೆ ನಂ.36 ರಲ್ಲಿ 33 ಎಕರೆ ಗೋಮಾಳ ಜಮೀನನ್ನು ಅನಾದಿಕಾಲದಿಂದಲೂ ಗ್ರಾಮದ ಸುತ್ತ ಮುತ್ತಲಿನ ಜಾನುವಾರುಗಳಿಗಾಗಿ ಮೀಸಲಿಡಲಾಗಿದೆ. ಕುರುಬರಹಳ್ಳಿ ಗ್ರಾಮದಲ್ಲಿ ಬಹುತೇಕ ಜನರದ್ದು ಕುರಿ ಮೇಯಿಸುವುದು ಮೂಲ ವೃತ್ತಿ. ಈ ಗ್ರಾಮದ ಗ್ರಾಮಸ್ಥರು ಜಾನುವಾರುಗಳನ್ನು ಕುರಿ, ಮೇಕೆ ಮೇಯಿಸಲು ಇದೇ 33 ಎಕರೆ ಭೂಮಿಯನ್ನು ಉಳಿಸಿಕೊಡಬೇಕು ಎಂದು ಸತತ ಐದು ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ. ಮಾತ್ರವಲ್ಲದೆ ಜಾಗವನ್ನು ಉಳಿಸಿಕೊಂಡಿದ್ದಾರೆ.

ಪ್ರಭಾವಿಗಳು ಗ್ರಾಮಸ್ಥರನ್ನು ಜೈಲಿಗೆ ಹಾಕಿಸಿದ್ರು ಬಿಟ್ಟಿಲ್ಲ

ಗಡಿ ಗ್ರಾಮವಾದರೂ ಭೂಮಿಗೆ ಮಾತ್ರ ಬಂಗಾರದ ಬೆಲೆ ಇದೆ ಅನ್ನೋದು ತಿಳಿಯುತ್ತಿದ್ದಂತೆ ಹಲವಾರು ಜನರು ಈ ಭೂಮಿಯ ಮೇಲೆ ಕಣ್ಣುಹಾಕಿದ್ದರು. ಅದನ್ನು ಎದುರಿಸಿದ ಗ್ರಾಮಸ್ಥರ ಮೇಲೆ ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸಿದರೂ ಗ್ರಾಮಸ್ಥರು ಯಾವುದನ್ನೂ ಲೆಕ್ಕಿಸಿಲ್ಲ. ಗ್ರಾಮಸ್ಥರು ಅಂತಿಮವಾಗಿ ತಮ್ಮೂರಿನ ಸರ್ಕಾರಿ ಗೋಮಾಳ ಜಾಗವನ್ನು ತಮ್ಮ ಗ್ರಾಮಕ್ಕೆಂದು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐದು ವರ್ಷಗಳ ಹಿಂದೆ ಹೊರಗಿನ ಪ್ರಭಾವಿ ವ್ಯಕ್ತಿಯೊಬ್ಬ ಬಂದು ಈ ಭೂಮಿಯ ಮೇಲೆ ಕಣ್ಣುಹಾಕಿದ್ದರು. ನಕಲಿ ದಾಖಲೆ ಸೃಷ್ಟಿಸಿಕೊಂಡು ಭೂಮಿ ಲಪಟಾಯಿಸಲು ಯತ್ನಿಸಿದ್ದರು. ಈ ವೇಳೆ ನಡೆದ ಗಲಾಟೆಯಲ್ಲಿ ಮುಂದೆ ಬಂದಿದ್ದ ಗ್ರಾಮಸ್ಥರ ಮೇಲೆ ಕೇಸ್​ ಹಾಕಿ ಜೈಲಿಗೆ ಕಳಿಸಿದ್ದರು. ಆದರೂ ಇದಕ್ಕೆ ಹೆದರದ ಗ್ರಾಮಸ್ಥರು ತಮ್ಮೂರಿಗೆ ಮೀಸಲಿದ್ದ ಗೋಮಾಳ ಭೂಮಿಯನ್ನು ಉಳಿಸಿಕೊಂಡಿದ್ದಾರೆ. ತಮ್ಮ ಹೋರಾಟದಲ್ಲಿ ಯಶಸ್ಸು ಕಂಡಿದ್ದಕ್ಕೆ ಗ್ರಾಮದ ರಾಮಕೃಷ್ಣಪ್ಪ, ಗಣೇಶ್​, ಸೇರಿದಂತೆ ಹಲವರು ಸಂತಸ ವ್ಯಕ್ತಪಡಿಸುತ್ತಾರೆ.

ಗ್ರಾಮಸ್ಥರ ಒಗ್ಗಟ್ಟಿನ ಹೋರಾಟಕ್ಕೆ ಕಟ್ಟುಬಿದ್ದ ಸರ್ಕಾರ

ಕುರುಬರಹಳ್ಳಿ ಗ್ರಾಮದ ಹೊರಗೆ ಇದ್ದ 33 ಎಕರೆ ಭೂಮಿಯನ್ನು ಸತತವಾಗಿ ಐದು ವರ್ಷಗಳ ಕಾಲ ಹೋರಾಟ ಮಾಡಿದ್ದರ ಫಲವಾಗಿ ಇಂದು ಸರ್ಕಾರಿ ಭೂಮಿ ಸರ್ಕಾರಕ್ಕೆ ಉಳಿದಿದೆ. ಅದು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಗೋಮಾಳ ಭೂಮಿಯಾಗಿಯೇ ಉಳಿದಿದೆ. ಅಷ್ಟೇ ಯಾಕೆ, ಆ ಭೂಮಿಯನ್ನು ಯಾರಿಗೂ ಮಂಜೂರು ಮಾಡಲಾಗಲೀ, ಮಂಜೂರು ಮಾಡುವಂತೆ ಅರ್ಜಿ ಹಾಕುವುದನ್ನು ನಿಷೇದ ಮಾಡಿದ್ದು, ಈ ಭೂಮಿ ಕುರುಬರಹಳ್ಳಿ ಗ್ರಾಮಕ್ಕಾಗಿಯೇ, ಗ್ರಾಮದ ಜಾನುವಾರುಗಳಿಗಾಗಿಯೇ ಮೀಸಲಿಟ್ಟ ಪ್ರದೇಶ ಎಂದು ಆದೇಶ ಹೊರಡಿಸಿ ಅಲ್ಲಿ ಬೋರ್ಡ್​ ಹಾಕಿದ್ದಾರೆ.

Kolar Govt Land Notice

ಭೂಮಿಯನ್ನು ಬಂದೋಬಸ್ತ್​ ಮಾಡಿಕೊಡಲು ಮನವಿ

ಹೀಗೆ ಸರ್ಕಾರಿ ಭೂಮಿಯನ್ನು ಸರ್ಕಾರದ ಲೆಕ್ಕದಲ್ಲಿ ಉಳಿಸಿಕೊಡಲು ಹಲವು ವರ್ಷಗಳ ಕಾಲ ಗ್ರಾಮಸ್ಥರೇ ಹೋರಾಟ ಮಾಡಬೇಕಾದ ಸ್ಥಿತಿ ಬಂದಿತ್ತು. ಹಾಗಾಗಿ ಈ 33 ಎಕರೆ ಭೂಮಿಯನ್ನು ಸರ್ಕಾರ ಹೀಗೆ ಕೇವಲ ಬೋರ್ಡ್​ ಹಾಕುವ ಜೊತೆಗೆ ಇಡೀ ಭೂ ಪ್ರದೇಶಕ್ಕೆ ಮುಳ್ಳುತಂತಿ ಹಾಕಿ ಹೊರಗಿನ ಶಕ್ತಿಗಳು ಭೂಮಿಯನ್ನು ಒತ್ತುವರಿ ಮಾಡದಂತೆ ಬಂದೋಬಸ್ತ್​ ಮಾಡಬೇಕು. ಜೊತೆಗೆ ಇಲ್ಲಿ ಜಾನುವಾರುಗಳು ಕುಡಿಯಲು ನೀರಿನ ವ್ಯವಸ್ಥೆ ಮಾಡಲು, ನೀರಿನ ತೊಟ್ಟಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯ ಮುಖಂಡ ನಾರಾಯಣಗೌಡ ಮನವಿ ಮಾಡಿದ್ದಾರೆ. ಒಟ್ಟಾರೆ ಸರ್ಕಾರಿ ಜಾಗ ಸಿಕ್ಕರೆ ಸಾಕು ತಿಂದುಹಾಕುವ ಜನರೇ ಹೆಚ್ಚಿರುವಾಗ ಸದ್ಯ ಸರ್ಕಾರಿ ಜಾಗವನ್ನು ಸರ್ಕಾರಕ್ಕೆ ಉಳಿಸಬೇಕು. ಅದು ಯಾವುದೇ ಕಾರಣಕ್ಕೂ ಪ್ರಭಾವಿಗಳ ಪಾಲಾಗದಂತೆ ಉಳಿಸಲು ಹೋರಾಡಿದ ಕುರುಬರಹಳ್ಳಿ ಗ್ರಾಮಸ್ಥರ ಆಶಯ ನಿಜಕ್ಕೂ ಎಲ್ಲರೂ ಮೆಚ್ಚುವಂತದ್ದು.

ವಿಶೇಷ ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

TV9 Kannada


Leave a Reply

Your email address will not be published.