ಕೋವಿಡ್ ಸೋಂಕಿಗೆ ಒಳಗಾಗಿದ್ದ ಯುವಕನೊಬ್ಬ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಗುಣಮುಖನಾಗಿದ್ದರೂ ಮಡಿಕೇರಿ ಕೋವಿಡ್ ಆಸ್ಪತ್ರೆಯ ವೈದ್ಯರು ನನ್ನನು ಆಸ್ಪತ್ರೆಯಿಂದ ಕಳುಹಿಸುತ್ತಿಲ್ಲ ಎಂದು ಬೇಸರಗೊಂಡ ಸೋಂಕಿತ ಯುವಕ ಬುಧವಾರ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ.

ಯುವಕ ತಪ್ಪಿಸಿಕೊಂಡಿರುವ ಬಗ್ಗೆ ವೈದ್ಯಾಧಿಕಾರಿಗಳು ಮಡಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಘಟನೆ ನಡೆದ ಬಳಿಕ ಸೋಂಕಿತ ಯುವಕ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಸುತ್ತಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವುತ್ತರಾದ ಪೊಲೀಸರು, ಯುವಕನನ್ನು ಸಿದ್ದಾಪುರ ಸಮೀಪದ ಅರೆಕಾಡು ಎಂಬಲ್ಲಿ ಪತ್ತೆ ಹಚ್ಚಿ ಆತನನ್ನು ಮತ್ತೆ ಮಡಿಕೇರಿ ಆಸ್ಪತ್ರೆಗೆ ಕಳುಹಿಸಲು ಆಂಬುಲೆನ್ಸ್ ಕರೆಸಿದ್ದಾರೆ. ಆದರೆ ಆಂಬುಲೆನ್ಸ್‌ ಬರುತ್ತಿರುವಂತೆಯೇ ಸೋಂಕಿತ ವ್ಯಕ್ತಿ ಪೊಲೀಸರ ಕಣ್ತಪ್ಪಿಸಿ ಅಲ್ಲಿಂದಲೂ ಪರಾರಿಯಾಗಿದ್ದ.

ಹಲವು ಗಂಟೆಗಳ ಶೋಧದ ಬಳಿಕ ಪೋಲಿಸರು ಸೋಂಕಿತ ವ್ಯಕ್ತಿಯನ್ನ ವಿರಾಜಪೇಟೆ ಮುಖ್ಯರಸ್ತೆಯಲ್ಲಿ ಕಂಡು ಆತನನ್ನು ಸುತ್ತುವರಿದು ಸೆರೆ ಹಿಡಿದ್ದಿದ್ದಾರೆ. ನಂತರ ಆತನನ್ನು ಆಂಬ್ಯುಲೆನ್ಸ್ ಮೂಲಕ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದ್ಯ ವ್ಯಸನಿಯಾಗಿದ್ದ ಈ ಯುವಕ ಮೈಲ್ಡ್ ವಿತ್ ಡ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದ. ಆಸ್ಪತ್ರೆಯಲ್ಲಿ ಆತನಿಗೆ ಮದ್ಯ ಸಿಗದಿದ್ದಕ್ಕೆ ಈ ರೀತಿ ಪರಾರಿಯಾಗಿದ್ದಾನೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

The post ಕೋವಿಡ್​​ ಸೋಂಕಿತ ಆಸ್ಪತ್ರೆಯಿಂದ ನಾಪತ್ತೆ.. ಹರಸಾಹಸ ಪಟ್ಟು ವಾಪಸ್​ ಕರೆತಂದ ಪೊಲೀಸರು appeared first on News First Kannada.

Source: newsfirstlive.com

Source link