ಬಳ್ಳಾರಿ: ತಜ್ಞರು ಕೊರೊನಾ ಮೂರನೇ ಅಲೆಯ ಮುನ್ಸೂಚನೆ ನೀಡಿದ ಬೆನ್ನಲ್ಲೇ ಬಳ್ಳಾರಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ತಿದೆ. ಈಗಿನಿಂದಲೇ ಮಕ್ಕಳಿಗಾಗಿ ವಿಶೇಷ ಬಾಲಚೈತನ್ಯ ಯೋಜನೆ ಜಾರಿ ಮಾಡಲು ಮುಂದಾಗಿದೆ. ಆ ಮೂಲಕ ಮೂರನೇ ಅಲೆಯಲ್ಲಿ ಮಕ್ಕಳನ್ನ ಕೊರೊನಾದಿಂದ ರಕ್ಷಿಸಲು ಕ್ರಮ ಕೈಗೊಂಡಿದೆ.

ಬಾಲಚೈತನ್ಯ ಯೋಜನೆ ಮೂಲಕ ಮಕ್ಕಳ ವಿಶೇಷ ಆರೈಕೆಗೆ ಕೇಂದ್ರಗಳ ಸ್ಥಾಪನೆ ಮಾಡಿರುವ ಜಿಲ್ಲಾಡಳಿತ, ಅಪೌಷ್ಟಿಕತೆ ಇರುವ ಮಕ್ಕಳನ್ನ ವಿಶೇಷ ಆರೈಕೆ ಮಾಡೋಕೆ ಮುಂದಾಗಿದೆ. ಈಗಾಗಲೇ ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ 827 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಗುರುತಿಸಿದೆ. ಇವರಿಗಾಗಿ ಜಿಲ್ಲೆಯಲ್ಲಿ 8 ಬಾಲಚೈತನ್ಯ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಿದೆ. ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಿರುವ ಜಿಲ್ಲಾಡಾಳಿತ, 14 ದಿನಗಳ ಕಾಲ ಅಪೌಷ್ಟಿಕತೆ ಇರುವ ಮಕ್ಕಳ ಆರೈಕೆ ಮಾಡಲಿದೆ.

ಬಾಲಚೈತನ್ಯ ಕೇಂದ್ರಗಳಲ್ಲಿ ತಾಯಂದಿರ ಸಮೇತವಾಗಿ ಅಪೌಷ್ಟಿಕತೆ ಇರುವ ಮಕ್ಕಳಿಗೆ ಆರೈಕೆ ನೀಡಲಾಗುತ್ತಿದೆ. ಆ ಮೂಲಕ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮುಂದಾಗಿದೆ. ಜೂನ್ 8 ರಂದು ಅವಿಭಜಿತ ಬಳ್ಳಾರಿಯಲ್ಲಿ 4 ಆರೈಕೆ ಕೇಂದ್ರ ಕಾರ್ಯಾರಂಭವಾಗಲಿದ್ದು, ಮೊದಲ ಹಂತವಾಗಿ 200ಕ್ಕೂ ಅಧಿಕ ಮಕ್ಕಳು ಬಾಲಚೈತನ್ಯ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಆಗಲಿದ್ದಾರೆ.
ಎರಡನೇ ಹಂತದಲ್ಲಿ ಜೂನ್ 10ರಂದು ನಾಲ್ಕು ಆರೈಕೆ ಕೇಂದ್ರಗಳು ಕಾರ್ಯಾರಂಭ ಮಾಡಲಿದ್ದು, ಬಳ್ಳಾರಿಯ ಒಟ್ಟು 8 ತಾಲೂಕು ಕೇಂದ್ರಗಳಲ್ಲಿ ಮಕ್ಕಳ ಪುನರ್ವಸತಿ ಕೇಂದ್ರ ಸ್ಥಾಪನೆ ಆಗಲಿದೆ. ತಾಯಿ, ಮಕ್ಕಳಿಗೆ ಊಟ ವಸತಿ ಉಚಿತವಾಗಿ ಪೊರೈಕೆ ಆಗಲಿದೆ.

ಉಳಿದಂತೆ ಸಾಧಾರಣ ಅಪೌಷ್ಟಿಕತೆ ಹೊಂದಿರೋ ಮಕ್ಕಳಿಗೆ ಮನೆಗಳಲ್ಲಿ ವಿಶೇಷ ನಿಗಾ ವಹಿಸುವ ಕ್ರಮ ಕೈಗೊಂಡಿದೆ. ಮಕ್ಕಳ ತಜ್ಞರ ಮೂಲಕ ವಸತಿ ಕೇಂದ್ರಗಳಲ್ಲಿ ವಿಶೇಷ ಚಿಕಿತ್ಸೆ ನೀಡಲಿದ್ದು, ಆರೋಗ್ಯದಲ್ಲಿ ಸಮಸ್ಯೆ ಇರುವ ಮಕ್ಕಳಿಗೆ ಬಳ್ಳಾರಿ ವಿಮ್ಸ್‌ಗೆ ಶಿಫ್ಟ್ ಮಾಡಲಿದೆ. ಮಕ್ಕಳ ಸಂಖ್ಯೆ ಹೆಚ್ಚಾದಂತೆ ಆರೈಕೆ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಆರೋಗ್ಯ ಇಲಾಖೆ ಚಿಂತನೆ ಹೊಂದಿದೆ ಎಂದು ನ್ಯೂಸ್​​ಫಸ್ಟ್​​ಗೆ ಬಳ್ಳಾರಿ ಡಿಎಚ್‌ಓ ಡಾ.ಜನಾರ್ಧನ್ ಹೇಳಿಕೆ ನೀಡಿದ್ದಾರೆ. ಮೂರನೇ ಅಲೆ ಮುಂಚೆಯೇ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಸಾವು ನೋವು ತಡೆಯುವುದು ಬಳ್ಳಾರಿ ಜಿಲ್ಲಾಡಳಿತದ ಉದ್ದೇಶವಾಗಿದೆ.

The post ಕೋವಿಡ್​​ 3ನೇ ಅಲೆ ಎಚ್ಚರಿಕೆ ಬೆನ್ನಲ್ಲೇ ಬಳ್ಳಾರಿ ಜಿಲ್ಲಾಡಳಿತದಿಂದ ಬಾಲಚೈತನ್ಯ ಯೋಜನೆ- ಏನಿದರ ವಿಶೇಷ? appeared first on News First Kannada.

Source: newsfirstlive.com

Source link