ಬೆಂಗಳೂರು: ಚಂದನವನದ ನಟಿ ಮೇಘನಾ ರಾಜ್ ಕೋವಿಡ್ ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಎಲ್ಲರೂ ಎಚ್ಚರಿಕೆ ವಹಿಸಿ, ನಿಮ್ಮ ಆರೋಗ್ಯ ಚನ್ನಾಗಿ ನೋಡಿಕೊಳ್ಳಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಇದೇ ವೇಳೆ ಕೋವಿಡ್‍ನಿಂದ ತಾವು ಆತಂಕಕ್ಕೆ ಒಳಗಾದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.

‘ನಾನು ಮಾಡಿದ ಸಣ್ಣ ತಪ್ಪಿನಿಂದಾಗಿ ಮತ್ತೊಮ್ಮೆ ಕೋವಿಡ್ ಭಯ ಅನುಭವಿಸುವಂತಾಯಿತು ಎಂದಿರುವ ಮೇಘನಾ, ಇತ್ತೀಚೆಗೆ ನನ್ನ ಗೆಳೆಯರೊಬ್ಬರೊಂದಿಗೆ ಸಂಪರ್ಕದಲ್ಲಿದ್ದೆ. ಆದರೆ ಅವರಿಗೆ ಕೋವಿಡ್‍ ಪಾಸಿಟಿವ್ ಆಯಿತು. ಕೂಡಲೇ ನಾನು ಸೆಲ್ಫ್ ಐಸೋಲೇಷನ್‌ಗೆ ಒಳಗಾದೆ. ಆದರೆ ಆ ಸಮಯದಲ್ಲಿ ನನ್ನ ಸಣ್ಣ ಮಗು, ನನ್ನ ತಂದೆ-ತಾಯಿಯ ಆರೋಗ್ಯದ ಬಗ್ಗೆ ಯೋಚಿಸಿ ತೀವ್ರವಾಗಿ ಆತಂಕಗೊಂಡಿದ್ದೆ. ತೀವ್ರ ಮಾನಸಿಕ ಒತ್ತಡ ಅನುಭವಿಸಿದೆ’ ಎಂದು ಹೇಳಿಕೊಂಡಿದ್ದಾರೆ.

ನನಗೆ ಯಾವುದೇ ರೋಗಲಕ್ಷಣಗಳು ಇರಲಿಲ್ಲ ಆದರೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡೆ. ನೆಗೆಟಿವ್ ವರದಿ ಬಂತು. ಆದರೆ ಐಸೋಲೇಷನ್‌ನಲ್ಲಿದ್ದ ಕೆಲವು ದಿನಗಳು ವಿಪರೀತ ಆತಂಕಕ್ಕೆ ಒಳಗಾಗಿದ್ದೆ ಎಂದಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನನ್ನ ತಂದೆ-ತಾಯಿ, ನನಗೆ ಕೋವಿಡ್ ಪಾಸಿಟಿವ್ ಆಗಿತ್ತು. ಆ ಸಮಯದಲ್ಲಿ ಕೋವಿಡ್ ನಮ್ಮನ್ನು ಹೈರಾಣು ಮಾಡಿಬಿಟ್ಟಿತ್ತು. ಆ ಸಂಕಷ್ಟದ ಸ್ಥಿತಿಯಲ್ಲಿ ನಾವುಗಳು ಬಹಳ ಆತಂಕಕ್ಕೆ ಒಳಗಾಗಿದ್ದೆವು, ಸಾಕಷ್ಟು ಮಾನಸಿಕ ಒತ್ತಡವನ್ನು ಅನುಭವಿಸಿದ್ದೆವು ಎಂದಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More