ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಎರಡನೇ ಅಲೆಯ ವಿರುದ್ಧ ಜಾಗೃತಿ ಮೂಡಿಸಲು ಚಿತ್ರರಂಗದ ತಾರೆಯರಿಗೆ ನಟ ರವಿಶಂಕರ್ ಕರೆ ನೀಡಿದ್ದಾರೆ.

ಸೋಮವಾರ ಟ್ವಿಟರಿನಲ್ಲಿ ಕೋವಿಡ್ ಅಟ್ಟಹಾಸದ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು, ‘ನಮ್ಮನ್ನು ಅಭಿಮಾನದಿಂದ ಅನುಸರಿಸುವವರು ತುಂಬಾ ಜನ ಇದ್ದಾರೆ . ಅವರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ದಯಮಾಡಿ ನಮ್ಮ ಕನ್ನಡಿಗರನ್ನು ಕೋವಿಡ್ ಕರ್ಮದಿಂದ ಎಚ್ಚೆತ್ತುಕೊಳ್ಳುವ ಸಂದೇಶವನ್ನು ನೀಡೋಣ’ ಎಂದು ತಮ್ಮ ಚಿತ್ರರಂಗದ ಸ್ನೇಹಿತರಲ್ಲಿ ಕೇಳಿಕೊಂಡಿದ್ದಾರೆ ರವಿಶಂಕರ್.

ಇದೆ ವೇಳೆ ಜನರಿಗೆ ಕಿವಿ ಮಾತು ಹೇಳಿರುವ ಅವರು, ‘ದಯಮಾಡಿ ಶಿಷ್ಟಾಚಾರವನ್ನು ( protocol ) ಪಾಲನೆ ಮಾಡಿ. ಕಡ್ಡಾಯವಾಗಿ ಮಾಸ್ಕ್ ಹಾಕಿ, ಆಗಾಗ ಕೈ ತೊಳೆಯುವುದನ್ನು ಮರೆಯಬೇಡಿ. ದಿನಕ್ಕೆ ಮೂರು ಬಾರಿಯಾದರೂ ಬಿಸಿನೀರಿನ ಆವಿ ತೆಗೆದುಕೊಳ್ಳಿ. ನನ್ನವರಿಗಾಗಿ ನನಗೆ ತಿಳಿದಿರುವಷ್ಟು ಹೇಳಿದ್ದೇನೆ’ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ರಾಜ್ಯಧಾನಿ ಬೆಂಗಳೂರಿನಲ್ಲಂತೂ ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.

ಸಿನೆಮಾ – Udayavani – ಉದಯವಾಣಿ
Read More