ಚೆನ್ನೈ: ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ಹಣ ನೀಡಿದ್ದ 7 ವರ್ಷದ ಬಾಲಕನಿಗೆ ಸಿಎಂ ಸ್ಟಾಲಿನ್‍ರವರು ಸೈಕಲ್ ನೀಡುವುದರ ಮೂಲಕ ದೊಡ್ಡ ಬಹುಮಾನ ನೀಡಿದ್ದಾರೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಜನರು ಬಳಲುತ್ತಿರುವುದನ್ನು ಕಂಡು ಬೇಸರಗೊಂಡ ಮಧುರೈನ ಎಲೆಕ್ಟ್ರಿಷಿಯನ್ ಪುತ್ರನಾಗಿರುವ ಹರೀಶ್ ವರ್ಮನ್(7) ಎಂಬಾ ಬಾಲಕ ತನ್ನ ಪಿಗ್ಗಿ ಬ್ಯಾಂಕ್‍ನಲ್ಲಿ ಸಂಗ್ರಹಿಸಿಟ್ಟಿದ್ದ 1 ಸಾವಿರ ರೂ.ಗಳನ್ನು ಸಿಎಂ ಪರಿಹಾರ ನಿಧಿಗೆ ಕಳುಹಿಸಲು ನಿರ್ಧರಿಸುವುದರ ಜೊತೆಗೆ ಲೆಟರ್‍ವೊಂದನ್ನು ಬರೆದು ಕಳುಹಿಸುವ ಮೂಲಕ ಕೋವಿಡ್‍ನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವಂತೆ ಕೋರಿದ್ದನು.

ಭಾನುವಾರ ಸಂಜೆ ಮಧುರೈ ಶಾಸಕ ಕೆ.ತಲಪತಿ ಮತ್ತು ಪಕ್ಷದ ಕಾರ್ಯಕರ್ತರು ನೀಲಿ ಹಾಗೂ ಕೆಂಪು ಬಣ್ಣದ ಹೊಸ ಬೈಸಿಕಲ್‍ನನ್ನು ನೀಡುವುದರ ಮೂಲಕ ಬಾಲಕನಿಗೆ ಅಚ್ಚರಿ ನೀಡಿದ್ದಾರೆ. ಅಲ್ಲದೇ ಸಿಎಂ ಸ್ಟಾಲಿನ್ ಬಾಲಕನೊಟ್ಟಿಗೆ ಫೋನ್‍ನಲ್ಲಿ ಮಾತನಾಡಿ ದೇಣಿಗೆ ನೀಡಿದ್ದಕ್ಕಾಗಿ ಧನ್ಯವಾದ ಸಹ ತಿಳಿಸಿದ್ದಾರೆ.

ಈ ಬಗ್ಗೆ ಸಿಎಂ ಸ್ಟಾಲಿನ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಬಾಲಕ ಹರೀಶ್ ವರ್ಮಾನ್ ಕೋವಿಡ್-19 ತಡೆಗಟ್ಟುವಿಕೆಗಾಗಿ ಬೈಸಿಕಲ್ ಖರೀದಿಸಲು ಸಂಗ್ರಹಿಸಲು ಹಣವನ್ನು ಮುಖ್ಯಮಂತ್ರಿ ಸಂಗ್ರಹ ನಿಧಿಗೆ ಕಳುಹಿಸಿದ್ದಾನೆ ಎಂಬ ಸುದ್ದಿ ಕೇಳಿ ಆಶ್ಚರ್ಯ ಪಟ್ಟೆ. ಇದೀಗ ಬಾಲಕನಿಗೆ ಬೈಸಿಕಲ್ ನೀಡಿ ಆತನಿಗೆ ಧನ್ಯವಾದ ತಿಳಿಸಿರುವುದುದಾಗಿ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

The post ಕೋವಿಡ್ ಪರಿಹಾರ ನಿಧಿಗೆ ಹಣ ಕೊಟ್ಟ ಬಾಲಕ – ಸೈಕಲ್ ನೀಡಿದ ಸಿಎಂ ಸ್ಟಾಲಿನ್ appeared first on Public TV.

Source: publictv.in

Source link