ಲಖನೌ: ಉತ್ತರ ಪ್ರದೇಶದಲ್ಲಿ ಈ ಹಿಂದೆ ಗಂಗಾ ನದಿಯಲ್ಲಿ ಮೃತದೇಹಗಳು ತೇಲುತ್ತಿದ್ದದ್ದು ಹಾಗೂ ಗಂಗಾ ತಟದಲ್ಲಿ ನೂರಾರು ಮೃತದೇಹಗಳನ್ನ ಅಂತ್ಯ ಸಂಸ್ಕಾರ ಮಾಡಿದ್ದರ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಕೊರೊನಾ ಸೋಂಕಿತನ ಮೃತದೇಹವೊಂದನ್ನ ಸೇತುವೆಯ ಮೇಲಿಂದ ನದಿಗೆ ಎಸೆಯುತ್ತಿರುವ ವಿಡಿಯೋವೊಂದು ಹರಿದಾಡಿದೆ.

ಉತ್ತರ ಪ್ರದೇಶದ ಬಲ್ರಾಮ್​ಪುರ್​ ಜಿಲ್ಲೆಯ ಬಳಿ ಘಟನೆ ನಡೆದಿದೆ ಎನ್ನಲಾಗಿದ್ದು ಬೈಕ್​ನಲ್ಲಿ ಹೋಗ್ತಿದ್ದ ಯುವಕರು ಈ ದೃಶ್ಯವನ್ನ ವಿಡಿಯೋ ಮೂಲಕ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಮೃತದೇಹವೊಂದನ್ನ ಸೇತುವೆಯ ಮೇಲಿಂದ ಎತ್ತಿ ರಾಪ್ತಿ ನದಿಗೆ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ.

ಇನ್ನು ನದಿಗೆ ಎಸೆಯಲಾದ ಮೃತದೇಹ ಕೋವಿಡ್ ಸೋಂಕಿತನದ್ದೇ ಎಂದು ಬಲ್ರಾಮ್​ಪುರದ ಚೀಫ್ ಮೆಡಿಕಲ್ ಆಫೀಸರ್ ದೃಢಪಡಿಸಿದ್ದಾರೆ. ಅಲ್ಲದೇ ಕುಟುಂಬಸ್ಥರೇ ಶವವನ್ನ ನದಿಗೆ ಎಸೆದಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಘಟನೆ ಹಿನ್ನೆಲೆ ಕುಟುಂಬಸ್ಥರ ವಿರುದ್ಧ ಕೇಸ್ ದಾಖಲಿಸಲಾಗಿದ್ದು ಮೃತದೇಹವನ್ನ ವಾಪಸ್ ಅವರಿಗೇ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ವೈದ್ಯಕೀಯ ಅಧಿಕಾರಿ.. ಪ್ರಾಥಮಿಕ ತನಿಖೆಯಲ್ಲಿ ಮೇ 25 ರಂದು ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದ, ಮೇ 28 ರಂದು ಸಾವನ್ನಪ್ಪಿದ್ದ ಎಂಬುದು ತಿಳಿದುಬಂದಿದೆ. ಕೋವಿಡ್​ ಪ್ರೋಟೋಕಾಲ್​ನಂತೆ ಮೃತದೇಹವನ್ನ ಸಂಬಂಧಿಕರಿಗೆ ನೀಡಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಕುಟುಂಬಸ್ಥರೇ ಮೃತದೇಹವನ್ನ ನದಿಗೆ ಎಸೆದಿರುವುದು ಬೆಳಕಿಗೆ ಬಂದಿದೆ. ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಅಂತಲೂ ಹೇಳಿದ್ದಾರೆ.

The post ಕೋವಿಡ್ ಮೃತದೇಹವನ್ನ ಸೇತುವೆ ಮೇಲಿಂದ ನದಿಗೆ ಬಿಸಾಡಿದ ಸಂಬಂಧಿಕರು.. ಎಲ್ಲಿ? appeared first on News First Kannada.

Source: newsfirstlive.com

Source link