ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ 2 ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ಮನೆಗೂ ದಿನಸಿ ಕಿಟ್ ಗಳ ವಿತರಣೆಗೆ ಬುಧವಾರ ಕ್ಷೇತ್ರದ ಶಾಸಕರು, ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಆಯೋಗದಲ್ಲಿ ಬಾಕಿ ಉಳಿದ ಅನುದಾನ ಹಾಗೂ ಸರ್ಕಾರದ ಪ್ರತಿ ಗ್ರಾಪಂಗೆ ನೀಡಲಾಗಿರುವ ತಲಾ 50 ಸಾವಿರ ರೂಪಾಯಿ ಅನುದಾನದಲ್ಲಿ ಆರ್ಥಿಕವಾಗಿ ಹಿಂದುಳಿದವರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸೂಲಿಕೆರೆ ಗ್ರಾಮ ಪಂಚಾಯಿತಿಯ ಸೂಲಿಕೆರೆ ಗ್ರಾಮ ಹಾಗೂ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ದೊಡ್ಡೇರಿ ಗ್ರಾಮದಲ್ಲಿ ಸಚಿವರು ಸಾಂಕೇತಿಕವಾಗಿ ಚಾಲನೆ ನೀಡಿದರು.

ಸಾರ್ವಜನಿಕರ ರಕ್ಷಣೆಗೆ ಅನುದಾನ ಬಳಕೆ
ಕೋವಿಡ್ ಸಂಕಷ್ಟ ಕಾಲದಲ್ಲಿ ಗ್ರಾಮೀಣ ಭಾಗದ ನಾಗರಿಕರ ರಕ್ಷಣೆಗೆ ಗ್ರಾಮ ಪಂಚಾಯಿತಿಗೆ ಬಲ ತುಂಬಿರುವ ರಾಜ್ಯ ಸರ್ಕಾರವು ತಲಾ 50 ಸಾವಿರ ರೂಪಾಯಿಯನ್ನು ಘೋಷಣೆ ಮಾಡಿತ್ತು. ಇದರ ಜೊತೆಯಲ್ಲಿ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಆಯೋಗದಿಂದ ಬಿಡುಗಡೆಯಾದ ಅನುದಾನದಲ್ಲಿ ಬಾಕಿ ಉಳಿದ ಹಣವನ್ನು ಸಾರ್ವಜನಿಕ ರಕ್ಷಣೆಗಾಗಿ ಬಳಸಿಕೊಳ್ಳುವ ಕೆಲಸವನ್ನು ನಮ್ಮ ಕ್ಷೇತ್ರದ ಸೂಲಿಕೆರೆ ಹಾಗೂ ಚಿಕ್ಕನಹಳ್ಳಿ ಗ್ರಾಮ ಪಂಚಾಯಿಗಳು ಮಾಡುತ್ತಿದ್ದು, ಲಭ್ಯ ಅನುದಾನಗಳನ್ನು ನೋಡಿಕೊಂಡು ಕ್ಷೇತ್ರದ ಇತರ ಗ್ರಾಮ ಪಂಚಾಯಿತಿಗಳು ಇಂತಹ ಕ್ರಮಗಳನ್ನು ಕೈಗೊಳ್ಳಲಿ ಎಂದು ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ, ಸೋಮಶೇಖರ್ ತಿಳಿಸಿದರು.

ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರ ಸೇವೆ ಶ್ಲಾಘನೀಯ; ಸಚಿವ ಸೋಮಶೇಖರ್
ಪ್ರಸಕ್ತ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನ ಬಿಜೆಪಿಗೆ ಭಾರಿ ಬೆಂಬಲವನ್ನು ನೀಡಿದ್ದು, 16 ಪಂಚಾಯಿತಿಯಲ್ಲಿಯೂ ಗೆಲುವಿಗೆ ಆಶೀರ್ವದಿಸಿದ್ದಾರೆ. ಇಂಥ ಸಂಕಷ್ಟ ಕಾಲದಲ್ಲಿ ಆಶೀರ್ವಾದ ಮಾಡಿದ ಮತದಾರರ ಕೈಹಿಡಿಯುವ ಕೆಲಸವನ್ನು ನಮ್ಮ ಬಿಜೆಪಿ ಬೆಂಬಲಿತ ಸದಸ್ಯರು ಮಾಡುತ್ತಿದ್ದು, ಅವರ ಸೇವಾ ಮನೋಭಾವ ಶ್ಲಾಘನೀಯ ಎಂದು ಸಚಿವರು ತಿಳಿಸಿದರು.

ಎಲ್ಲರೂ ಸುರಕ್ಷಿತವಾಗಿರಿ
ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಕಾರಣ, ಅನವಶ್ಯಕವಾಗಿ ಯಾರೂ ಸಹ ಹೊರಗೆ ಬರಕೂಡದು. ಅಲ್ಲದೆ, ಎಲ್ಲರೂ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕು. ಇನ್ನು ನಾಗರಿಕರ ಸುರಕ್ಷತೆಗಾಗಿ ಸರ್ಕಾರ ಸಹ ಅನೇಕ ಕ್ರಮ ಹಾಗೂ ಅನುದಾನಗಳನ್ನು ಬಿಡಗಡೆ ಮಾಡುತ್ತಿದೆ. ಈ ಕಾರಣದಿಂದ ಜನ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಲಿ, ಯಾವುದೇ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಅವರ ಮನೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ದಿನಸಿ ಕಿಟ್ ಗಳನ್ನು ನೀಡಲಾಗುತ್ತಿದೆ. ಎಲ್ಲರ ಸುರಕ್ಷತೆ ನಮಗೆ ಮುಖ್ಯವಾಗಿದ್ದು, ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಸಚಿವರಾದ ಸೋಮಶೇಖರ್ ಕಿವಿ ಮಾತು ಹೇಳಿದರು.

The post ಕೋವಿಡ್ ಸಂಕಷ್ಟ, ಮನೆ ಮನೆಗೂ ದಿನಸಿ ಕಾರ್ಯಕ್ರಮಕ್ಕೆ ಸಚಿವ ಎಸ್‍ಟಿಎಸ್ ಚಾಲನೆ appeared first on Public TV.

Source: publictv.in

Source link