ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳು ದಿನ ಕಳೆದಂತೆ ಕೊಂಚ ಇಳಿಮುಖಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವ ಸೋಂಕಿತರ ಯೋಗಕ್ಷೇಮ ವಿಚಾರಿಸಲು ತೆರಳಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಮಡಿಕೇರಿ ಸಮೀಪ ಇರುವ ನವೋದಯದ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶಾಸಕರು, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಯೋಗ ಹೇಳಿಕೊಟ್ಟರು. ಇತ್ತೀಚಿನ ದಿನಗಳಲ್ಲಿ ಸೋಂಕಿತರು ಉಸಿರಾಟದ ತೊಂದರೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ಬೆಳಗ್ಗೆ ಎದ್ದು ಯೋಗ ಧ್ಯಾನ ಮಾಡಬೇಕು ಎಂದರು.

ಅಲ್ಲದೆ ಕೋವಿಡ್ 19 ಮಹಾಮಾರಿ ಇಂದಿಗೆ-ನಾಳೆಗೆ ತೊಲಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ತಲೆನೋವು ಇತರೆ ತೊಂದರೆ ಉಂಟಾದಲ್ಲಿ ತಕ್ಷಣವೇ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ಪರೀಕ್ಷಿಕೊಳ್ಳಬೇಕು. ಆದರೆ ಆತಂಕಕ್ಕೆ ತುತ್ತಾಗಬಾರದು ಎಂದರು.

ಪ್ರತಿಯೊಬ್ಬರೂ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಿದಾಗ ಮಾತ್ರ ಕೋವಿಡ್ 19 ದೂರ ಇರಬಹುದಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರ ವಹಿಸುವುದು ಅಗತ್ಯ, ಸೋಂಕಿತರು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿ ಔಷಧಿ ಪಡೆಯಬೇಕು. ಧೈರ್ಯವಾಗಿರಬೇಕು, ವಾಕ್ (ನಡಿಗೆ) ಮತ್ತು ವ್ಯಾಯಾಮ ಮಾಡಬೇಕು, ಬಿಸಿಯಾದ ಆಹಾರ ಸೇವಿಸಬೇಕು. ಬಿಸಿ ನೀರು ಕುಡಿಯಬೇಕು ಎಂದು ಶಾಸಕರು ಸಲಹೆ ಮಾಡಿದರು.

ಬಳಿಕ ನವೋದಯ ಶಾಲೆಯ ಕೋವಿಡ್ ಆರೈಕೆ ಕೇಂದ್ರಕ್ಕೆ ಸರಸ್ವತಿ ಡಿಇಡಿ ಕಾಲೇಜಿನಿಂದ ಪೂರೈಕೆಯಾಗುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು, ಇಲ್ಲಿನ ಸ್ವಚ್ಚತೆ, ಅಡುಗೆ ತಯಾರಿ ಮಾಡುವುದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

The post ಕೋವಿಡ್ ಸೆಂಟರ್‌ನಲ್ಲಿರೋ ಸೋಂಕಿತರಿಗೆ ಯೋಗ ಹೇಳಿಕೊಟ್ಟ ಶಾಸಕ ಅಪ್ಪಚ್ಚು ರಂಜನ್ appeared first on Public TV.

Source: publictv.in

Source link