ಕೋವಿಡ್-19 ಲಸಿಕೆಯ ವೆಬ್​​ಸೈಟ್​​ಗೆ ಕನ್ನ; ವ್ಯಾಕ್ಸಿನ್ ರಿಜಿಸ್ಟ್ರೇಷನ್​​ನಲ್ಲಿ ಆಗ್ತಿದೆ ವಂಚನೆ

ಕೋವಿಡ್-19 ಲಸಿಕೆಯ ವೆಬ್​​ಸೈಟ್​​ಗೆ ಕನ್ನ; ವ್ಯಾಕ್ಸಿನ್ ರಿಜಿಸ್ಟ್ರೇಷನ್​​ನಲ್ಲಿ ಆಗ್ತಿದೆ ವಂಚನೆ

ಲಸಿಕೆ ಬಂತು ಲಸಿಕೆ ಅಂತಾ ಆರಂಭದಲ್ಲಿ ಎಲ್ಲರೂ ಖುಷಿ ಪಟ್ಟಿದ್ದಾಯ್ತು. ನೋ ಸ್ಟಾಕ್ ಅನ್ನೋ ಬೋರ್ಡ್ ನೋಡಿ ಬೇಸರಗೊಂಡಿದ್ದೂ ಆಯ್ತು. ಈ ನಡುವೆ ಲಸಿಕೆ ವಿಚಾರದಲ್ಲೂ ಹೈಜಾಕ್ ಆಗ್ತಿದೆ ಅಂದ್ರೆ ನಂಬೋದಕ್ಕೆ ಅಸಾಧ್ಯವಾದ್ರೂ ನಂಬಲೇಬೇಕು. ಹಾಗಾದ್ರೆ ಲಸಿಕೆ ವಿಚಾರದಲ್ಲಿ ಏನಾಗ್ತಿದೆ? ಹಳ್ಳಿ ಹಳ್ಳಿಗೂ ಲಸಿಕೆ ನಿಜಕ್ಕೂ ತಲುಪ್ತಿದ್ಯಾ?

ಲಸಿಕೆ. ಇವತ್ತು ಕೊರೊನಾ ವಿರುದ್ದ ಹೋರಾಡಲು ಪ್ರತಿಯೊಬ್ಬರೂ ಪಡೆಯಲೇಬೇಕು. ದೇಶದ ಮೂಲೆ ಮೂಲೆಯಲ್ಲಿರೋ ಪ್ರತಿಯೊಬ್ಬರೂ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬೇಕು. ಈ ಮಾತನ್ನ ನಾವಲ್ಲ.. ಕೇಂದ್ರ ಸರ್ಕಾರವೇ ಸಾರಿ ಸಾರಿ ಹೇಳ್ತಿದೆ. ಆದ್ರೆ ಇಲ್ಲಿಯವರೆಗೂ ಯಾರೆಲ್ಲಾ ಲಸಿಕೆಯನ್ನ ಪಡೆದುಕೊಂಡಿದ್ದಾರೆ.. ಅವರೆಲ್ಲಾ ಯಾರು? ಯಾವ ಕಾರಣಕ್ಕಾಗಿ ನಗರದವರನ್ನ ಹೊರತುಪಡಿಸಿ ಗ್ರಾಮೀಣ ಭಾಗದ ಜನರಿಗೆ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ? ಅನ್ನೋ ಪ್ರಶ್ನೆಗಳು ಈಗ ಸಾಮಾನ್ಯವಾಗಿ ಉದ್ಭವವಾಗಿದೆ.

ಲಸಿಕೆ ಡಿಜಿಟಲ್ ಹೈಜಾಕ್
ಸದ್ಯ ಲಸಿಕೆ ಯಾರಿಗೆಲ್ಲ ಲಭ್ಯವಾಗುತ್ತದೆಯೋ ಅವರೆಲ್ಲ ಮುಖ್ಯವಾಗಿ ಡಿಜಿಟಲ್ ಮೂಲಕ ಅಂದ್ರೆ ಆನ್​ಲೈನ್ ಮೂಲಕ ಹೆಸರನ್ನ ಮುಂಗಡವಾಗಿ ನೊಂದಣಿ ಮಾಡಿಕೊಂಡವರಿಗೆ ಮಾತ್ರ ಸಿಗುತ್ತಿದೆ. ಆದ್ರೆ ಬಹುಮುಖ್ಯವಾಗಿ ನೊಂದಣಿ ಮಾಡಿಕೊಳ್ಳಲು ಮುಂದಾಗ್ತಿರೋರಿಗೆ ಸೂಕ್ತ ಸಮಯದಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆಲ್ಲ ಕಾರಣ ಲಸಿಕೆ ಡಿಜಿಟಲ್ ಹೈಜಾಕ್ ಆಗಿದೆ ಅಂತಾ ಹೇಳಲಾಗುತ್ತಿದೆ.

ಹೌದು.. ಕೊನೆಗೂ ಈ ರಹಸ್ಯ ಈಗ ಬಯಲಾಗಿದೆ. ಕೊರೊನಾ ಲಸಿಕೆ ಪಡೆಯಲು ಆನ್​ಲೈನ್ ಮೂಲಕ ಮುಂಗಡವಾಗಿ ಹೆಸರು ನೊಂದಣಿಗೆ ಬಹಳಷ್ಟು ಜನಸಾಮಾನ್ಯರಿಗೆ ಸುಲಭವಾಗಿ ಸ್ಲಾಟ್ ಸಿಗುತ್ತಿಲ್ಲ. ಇದಕ್ಕೆಲ್ಲ ಪ್ರಮುಖವಾದ ಕಾರಣ ಏನು ಅನ್ನೋ ರಹಸ್ಯ ಕೊನೆಗೂ ರಿವೀಲ್ ಆಗಿದೆ. ಅದು ಹೆಸರು ನೊಂದಣಿ ಮಾಡಿಕೊಳ್ಳಲು ಇರುವಂತಹ ಕೋವಿನ್ ಆ್ಯಪ್​ ಮತ್ತು ಕೋವಿಡ್ ವೆಬ್​ಸೈಟ್​ಗಳ ಮೂಲಕ ನೊಂದಣಿ ಮಾಡಿಕೊಳ್ಳೋದಕ್ಕೆ ಈಗ ಕೆಲ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಿರೋರು ಎಲ್ಲರಿಗೂ ಗೊತ್ತೇ ಇದೆ. ಅದೇ ಸಣ್ಣ ಪುಟ್ಟ ದೋಷವನ್ನೇ ಬಳಸಿಕೊಂಡು ಹೈಜಾಕ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ವೆಬ್​ಸೈಟ್ ಹಾಗೂ ಕೊವಿನ್ ಆ್ಯಪ್​ಗಳಲ್ಲಿ ಕಂಡು ಬರುತ್ತಿರೋ ಸಣ್ಣ ಪುಟ್ಟ ದೋಷಗಳನ್ನ ಕೆಲವು ಟೆಕ್ಕಿಗಳು ಲಾಭ ಮಾಡಿಕೊಂಡಿದ್ದಾರೆ. ಇದನ್ನೇ ಬಳಸಿಕೊಂಡು ಕೆಲವು ಟೆಕ್ಕಿಗಳು ಅಭಿವೃದ್ಧಿಪಡಿಸಿರೋ ಅಲರ್ಟ್ ವ್ಯವಸ್ಥೆಗಳಿಂದಾಗಿ ಜನಸಾಮಾನ್ಯರಿಗೆ ಲಸಿಕೆ ಗಗನ ಕುಸುಮವಾಗಿ ಪರಿಣಮಿಸಿದೆ ಎನ್ನುತ್ತಿದ್ದಾರೆ. ಇಂಥಾ ಒಂದು ಆತಂಕಕಾರಿ ವಿಚಾರ ಈಗ ಬೆಳಕಿಗೆ ಬಂದಿದೆ. ಮುಖ್ಯವಾಗಿ ಟೆಕ್ಕಿಗಳು ಕೆಲವೊಂದು ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ.

ಟೆಕ್ಕಿಗಳ ಕೈಚಳಕ
ಯಾರಾದರೂ ಲಸಿಕೆ ಪಡೆಯಬೇಕು ಅಂದುಕೊಂಡಿರೋರಿಗೆ ಈ ಟೆಕ್ಕಿಗಳು ಸುಲಭದ ದಾರಿಯನ್ನ ತೋರಿಸಿಕೊಟ್ಟಿದ್ದಾರೆ. ಯಾರು ಲಸಿಕೆ ಪಡೆಯಬೇಕು ಅವರಿಗೆ ಲಸಿಕೆ ಪಡೆಯುವ ಸಮಯಕ್ಕೆ ರಿಜಿಸ್ಟರ್ ಮಾಡಿಕೊಳ್ಳುವ ಸಮಯದ ಬಗ್ಗೆ ಮಾಹಿತಿಯನ್ನ ರವಾನಿಸುತ್ತಾರೆ. ಅದು ಮುಖ್ಯವಾಗಿ ಟೆಲಿಗ್ರಾಂ ಗ್ರೂಪ್​ ಮತ್ತು ಅವರ ಇ-ಮೇಲ್​ಗಳಿಗೆ ನೇರವಾಗಿ ಸಂದೇಶವನ್ನ ಕಳುಹಿಸಿಕೊಡುತ್ತಿದ್ದಾರೆ. ಹಾಗಾಗಿ ಇಂದು ಲಕ್ಷಾಂತರ ಮಂದಿ ಟೆಲಿಗ್ರಾಂ ಗ್ರೂಪ್​​ಗಳಲ್ಲಿ ಎಂಟ್ರಿ ಕೊಟ್ಟು ಅದನ್ನ ಬಳಕೆ ಮಾಡುತ್ತಿದ್ದಾರೆ. ಯಾಕಂದ್ರೆ ಲಸಿಕೆ ಲಭ್ಯತೆ ಬಗ್ಗೆ ಸರ್ಕಾರ ಸ್ಲಾಟ್​ ಅನ್ನ ವೆಬ್​ಸೈಟ್​ನಲ್ಲಿ ಓಪನ್ ಮಾಡುತ್ತಿದ್ದಂತೆ ಅದರ ಸಂದೇಶ ರವಾನಿಸಲಾಗುತ್ತದೆ.

ಯಾರೆಲ್ಲಾ ಲಸಿಕೆ ಪಡಿಬೇಕು ಅಂತಾ ರಿಜಿಸ್ಟರ್ ಮಾಡಿಕೊಳ್ಳಬೇಕು ಅಂತಾ ಕಾದು ಕುಳಿತಿರುತ್ತಾರೋ ಅವರಿಗೆ ಕೆಲ ಗ್ರೂಪ್​ಗಳ ಮೂಲಕ ಸಂದೇಶವನ್ನ ರವಾನೆ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆಲ್ಲ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಯಾವಾಗ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಗಾಗಿ ಸ್ಲಾಟ್​ ಅನ್ನು ಓಪನ್ ಮಾಡುತ್ತಿದ್ದಂತೆ ಅವರಿಗೆ ಮೆಸೆಜ್ ಹೋಗಿ ಬಿಡುತ್ತೆ. ಮೆಸೆಜ್ ಹೋಗುತ್ತಿದ್ದಂತೆ ಅವರೆಲ್ಲ ತಕ್ಷಣಕ್ಕೆ ಲಸಿಕೆ ಪಡೆಯಲು ನೊಂದಣಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಸ್ಲಾಟ್ ಓಪನ್ ಆಗಿರೋ ಮೆಸೆಜ್ ಬರುತ್ತಿದ್ದಂತೆ ಸ್ವತಃ ಟೆಕ್ಕಿಗಳೇ ಮಾಹಿತಿ ತುಂಬಿ ಓಟಿಪಿಯನ್ನು ಕೂಡ ಸ್ವಯಂ ಪ್ರೇರಿತರಾಗಿ ತುಂಬಿ ಸಮಯವನ್ನ ಕಾಯ್ದಿರಿಸುವ ವ್ಯವಸ್ಥೆ ರೂಪಿಸಿದ್ದಾರಂತೆ.

ಗ್ರಾಮೀಣದವರು ವ್ಯಾಕ್ಸಿನ್​​ನಿಂದ ವಂಚಿತರಾಗ್ತಿದ್ದಾರೆ
ಯಾವುದೇ ವ್ಯಕ್ತಿ ಲಸಿಕೆ ಪಡೆಯಲು ಕೊವಿನ್ ಆ್ಯಪ್​ನಲ್ಲಿ ಹೆಸರು ಮತ್ತು ಲಸಿಕೆ ಪಡೆಯಬೇಕಾದ ದಿನ ಮತ್ತು ಸಮಯವನ್ನ ನಿಗದಿ ಪಡಿಸಬೇಕು. ಆದ್ರೆ ವೆಬ್​ ಸೈಟ್​ನಲ್ಲಿ ಯಾವುದೇ ವ್ಯಕ್ತಿ ಲಸಿಕೆ ಪಡೆಯಲು ಕೋವಿನ್‌ ವೆಬ್‌ಸೈಟ್‌ನಲ್ಲಿ ಹೆಸರು, ಲಸಿಕೆ ಪಡೆಯಬೇಕಾದ ದಿನ ನಮೂದಿಸಬೇಕು.ಆದ್ರೆ ವೆಬ್​​​​​​​​​​ಸೈಟ್​​​​​​​​​​​​​​​​ನಲ್ಲಿ ನಿಗದಿತ ಅವಧಿಯ ದಿನಗಳು ಮಾತ್ರವೇ ಮುಂಗಡವಾಗಿ ಹೆಸರನ್ನ ಕಾದಿರಿಸಲು ಸಾಧ್ಯ. ಜೊತೆಗೆ ಸ್ಲಾಟ್​​​​​​​​​​ ಲಭ್ಯವಾಗುವ ಸಮಯ ಕೂಡ ಯಾವುದೋ ಸಮಯದಲ್ಲಿ ಬಹಿರಂಗ ಆಗುತ್ತದೆ. ಹೀಗಾಗಿ ಯಾವ ಸಮಯದಲ್ಲಿ ಸಿಗುತ್ತದೆ ಅಂತಾ ಕಾಯುವುದು ಅನಿವಾರ್ಯ ಜನಸಾಮಾನ್ಯರ ಮುಂದಿರೋ ದಾರಿ ಅಂತಾ ಹೇಳಲಾಗ್ತಾಯಿದೆ.

ಇದನ್ನ ಲಾಭವನ್ನಾಗಿ ಮಾಡಿಕೊಂಡಿರೋ ಟೆಕ್ಕಿಗಳು ಸಾರ್ವಜನಿಕವಾಗಿ ಲಭ್ಯವಿರುವಂತಹ ಎಪಿಐ ಅಂದ್ರೆ ಅಪ್ಲಿಕೇಷನ್​ ಪ್ರೋಗ್ರಾಮಿಂಗ್​​ ಇಂಟರ್​​​​ಫೇಸ್​​​ ಗಳನ್ನ ಬಳಸಿಕೊಂಡು ಕೋವಿನ್ ವೆಬ್​ಗೆ ಕೆಲವೊಂದು ಕೋಡ್​​​​ಗಳನ್ನ ಬರೆಯುತ್ತಿದ್ದಾರೆ. ಹೀಗೆ ಕೋಡ್​ ಗಳನ್ನ ಟೆಕ್ಕಿಗಳು ಬರೆಯುತ್ತಿರೋದ್ರಿಂದಲೇ ವೆಬ್​ ಸೈಟ್​ನಲ್ಲಿ ಸ್ಲಾಟ್​​​​ ಸಿಗುತ್ತಲೇ ಆ ಬಗ್ಗೆ ಕೋಡ್​ ಬರೆದವರಿಗೆ ಅಲರ್ಟ್​​​ ಹೋಗುತ್ತದೆ. ಹೀಗೆ ಕೋಡ್​​ ಬರೆಯುವವರು ಟೆಲಿಗ್ರಾಮ್​​​ ಆ್ಯಪ್​​​​​​​​ಗಳಲ್ಲಿ ಗ್ರೂಪ್​ಗಳನ್ನ ಮಾಡಿಕೊಂಡಿದ್ದಾರೆ. ಆ ಗ್ರೂಪ್​ಗಳಲ್ಲಿ ಲಕ್ಷಾಂತರ ಜನ ಸದಸ್ಯರಾಗಿದ್ದಾರೆ.

ಅವರೆಲ್ಲರಿಗೂ ಕ್ಷಣಾರ್ಧದಲ್ಲಿ ಮಾಹಿತಿ ತಲುಪಿಸಿ, ಅವರು ಆನ್​ಲೈನ್​ ಮೂಲಕ ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಕೊಂಡು ನಂತರ ಲಸಿಕೆಯನ್ನ ಸೂಕ್ತ ಸಮಯಕ್ಕೆ ಪಡೆಕೊಳ್ಳುತ್ತಿದ್ದಾರೆ. ಕೇವಲ ಟೆಲಿಗ್ರಾಮ್ ಆ್ಯಪ್​ಗಳಲ್ಲಿ ಅಷ್ಟೇ ಅಲ್ಲದೇ ಇ-ಮೇಲ್ ಮೂಲಕವೂ ಸಂದೇಶಗಳನ್ನ ಕಳುಹಿಸಿಕೊಡುತ್ತಿದ್ದಾರೆ ಕೆಲ ಟೆಕ್ಕಿಗಳು.

ಲಸಿಕೆ ಕೊರತೆಯ ನಡುವೆ ವ್ಯಾಕ್ಸಿನ್​ಗೆ ಕಳ್ಳರ ಕಾಟ
ಏನೆ ಹೇಳಿ ಎರಡು ಕೈ ಸೇರಿದರೆ ಚಪ್ಪಾಳೆ ಅನ್ನುವಂತೆ ಇಲ್ಲಿ ಕೇವಲ ಟೆಕ್ಕಿಗಳು ಮಾತ್ರ ವಲ್ಲ ಅವರ ಜೊತೆಯಲ್ಲಿ ಕಲೆ ಆ್ಯಪ್​ಗಳು ಕೂಡ ಕೆಲಸವನ್ನ ಮಾಡುತ್ತಿದೆ. ಹಾಗಾಗಿ ಇಂಥಾ ಸೇವೆ ನೀಡಲೇಂದೇ ಅಂಡರ್​​​ 45 ಡಾಟ್​​ ಇನ್​, ಗೆಟ್​​ ಜಾಬ್​ ಡಾಟ್​ ಇನ್​​​​, ಪೇಟಿ ವ್ಯಾಕ್ಸಿನ್​ ಸ್ಲಾಟ್ ಫೈಂಡರ್​​​​, ವ್ಯಾಕ್ಸಿನೇಟ್​​ ಮಿ ಡಾಟ್​ ಇನ್​​, ಫೈಂಡ್​ ಸ್ಲಾಟ್​​​​​​ ಡಾಟ್ ಇನ್​​, ಸೇರಿಂದತೆ ಹಲವಾರು ಗ್ರೂಪ್​ಗಳು ಇಂದು ರಚನೆಗೊಂಡಿದೆ. ಇವುಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಹೆಸರನ್ನ ನೊಂದಾಯಿಸಿಕೊಳ್ಳುತ್ತಿದ್ದಾರೆ.

ನಿಮಗೆ ಈಗ ಅನ್ನಿಸಿರಬಹುದು ಯಾವ ಕಾರಣಕ್ಕಾಗಿ ಗ್ರಾಮಿಣ ಭಾಗದಲ್ಲಿರೋ ಜನರಿಗೆ ಯಾಕೆ ಸೂಕ್ತ ಸಮಯಕ್ಕೆ ಲಸಿಕೆ ಪಡೆಯಲು ವೆಬ್ ಸೈಟ್​ಗಳಲ್ಲಿ ಸ್ಲಾಟ್​ಗಳು ಸಿಗುತ್ತಿಲ್ಲ ಅನ್ನೋದು. ನಿಜಕ್ಕೂ ಇದು ಆತಂಕ ಪಡುವ ವಿಚಾರ ಆಗಿರೋದಂತು ಸುಳ್ಳಲ್ಲ. ಇವತ್ತು ನಗರ ಭಾಗದ ಜನ ಓದಿಕೊಂಡು ಬುದ್ದಿವಂತರಾಗಿ ಈ ರೀತಿಯಾಗಿ ಕೆಲ ಗ್ರೂಪ್​ಗಳಲ್ಲಿ ಬರುತ್ತಿರೋ ಸ್ಲಾಟ್​ ಟೈಮಿಂಗ್ ನೋಡಿಕೊಂಡು ರಿಜಿಸ್ಟರ್ ಮಾಡಿಕೊಂಡು ಸೂಕ್ತ ಸಮಕ್ಕೆ ಲಸಿಕೆಯನ್ನ ಪಡೆಯುತ್ತಿದ್ದಾರೆ. ಆದ್ರೆ ಗ್ರಾಮೀಣ ಭಾಗದ ಮಂದಿಗೆ ಲಸಿಕೆ ಪಡೆಯಲ ವೆಬ್​ ಸೈಟ್​ನಲ್ಲಿ ಸ್ಲಾಟ್ ಓಪನ್ ಆಗಿದೆ ರಿಜಿಸ್ಟರ್ ಮಾಡಿಕೊಳ್ಳಬೇಕು ಅನ್ನೋ ಮಾಹಿತಿ ತಿಳಿಯೋಕೆ ಮುನ್ನವೇ ಅಲ್ಲಿ ಫಿಲ್ ಆಗಿ ಹೋಗಿರುತ್ತದೆ. ಅದಕ್ಕಾಗಿಯೇ ಗ್ರಾಮೀಣ ಜನರು ಮತ್ತು ತಂತ್ರಜ್ಞಾನದ ಹೆಚ್ಚಿನ ಅರಿವು ಇಲ್ಲದವರು ಲಸಿಕೆ ಪಡೆಯುವದರಿಂದ ವಂಚಿತರಾಗುತ್ತಿದ್ದಾರೆ ಅನ್ನುವ ದೂರುಗಳು ಈಗ ಕೇಳಿ ಬಂದಿದೆ.

ಡಿಜಿಟಲ್ ಯುಗದಲ್ಲಿ ಏನೆಲ್ಲಾ ಎಂಟ್ರಿ ಕೊಡುತ್ತಿದೆ ಅನ್ನೋದಕ್ಕಿಂತ ಸಮಯಕ್ಕೆ ತಕ್ಕಂತೆ ಡಿಜಿಟಲ ಬಳಕೆ ಆಗ್ತಿದೆ ಅನ್ನಲೇಬೇಕು. ಇದೇ ಕಾರಣದಿಂದಾಗಿ ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯೋದ್ರಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅನ್ನೋದೇ ನಮ್ಮ ಆಶಯ.

The post ಕೋವಿಡ್-19 ಲಸಿಕೆಯ ವೆಬ್​​ಸೈಟ್​​ಗೆ ಕನ್ನ; ವ್ಯಾಕ್ಸಿನ್ ರಿಜಿಸ್ಟ್ರೇಷನ್​​ನಲ್ಲಿ ಆಗ್ತಿದೆ ವಂಚನೆ appeared first on News First Kannada.

Source: newsfirstlive.com

Source link