ನವದೆಹಲಿ: ಕೊರೊನಾ ವೈರಸ್​​ ವಿರುದ್ಧ ಹೋರಾಡಿ ಗೆಲುವು ಪಡೆಯಲು ಲಸಿಕೆ ಸ್ವೀಕರಿಸುವುದು ಇರುವ ಏಕೈಕ ಮಾರ್ಗವಾಗಿದೆ. ಈ ನಡುವೆ ಲಸಿಕೆ ಪಡೆಯಲು ಜನರು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ವ್ಯಾಕ್ಸಿನೇಷನ್​ ಡ್ರೈವ್​​ಗೆ ವೇಗ ತುಂಬಲು ದೇಶದ ಹಲವು ಭಾಗಗಳಲ್ಲಿ ಜನರಿಗೆ ವಿವಿಧ ಆಫರ್​​ಗಳನ್ನು ನೀಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಉಚಿತ ಆಹಾರ ನೀಡಿದರೆ, ಡೇಟಿಂಗ್​ ಆ್ಯಪ್​ಗಳು ಬಳಕೆದಾರರಿಗೆ ವ್ಯಾಕ್ಸಿನೇಟೆಡ್​ ಎಂಬ ಬ್ಯಾಡ್ಜ್​​ಗಳನ್ನು ನೀಡಲಾಗುತ್ತಿದೆ. ಈ ನಡುವೆ ಕೋವಿಶೀಲ್ಡ್​​ ಎರಡೂ ಲಸಿಕೆ ಪಡೆದಿರೋ ವರನೇ ಬೇಕು ಎಂದು ನೀಡಿದ್ದ ಮ್ಯಾಟ್ರಿಮೋನಿ ಜಾಹೀರಾತು ಸಖತ್ ವೈರಲ್ ಆಗಿದೆ.

ಕಳೆದ ಎರಡು ದಿನಗಳಿಂದ ಮ್ಯಾಟ್ರಿಮೋನಿ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಜಾಹೀರಾತಿನಲ್ಲಿ 24 ವರ್ಷದ ಯುವತಿ ತಾನು ಎರಡು ಡೋಸ್​ ಕೋವಿಶೀಲ್ಡ್​ ಲಸಿಕೆಯನ್ನು ಪಡೆದಿದ್ದು, ಎರಡು ಡೋಸ್​ ಲಸಿಕೆ ಪಡೆದುಕೊಂಡಿರುವ ವರನ ಹುಡುಕಾಟದಲ್ಲಿದ್ದೇನೆ. ಆಸಕ್ತಿ ಇರುವವರು ಸಂಪರ್ಕಿಸಬಹುದು ಎಂದು ತಿಳಿಸಿದ್ದರು. ಇದರ ಫೋಟೋವನ್ನು ಕಾಂಗ್ರೆಸ್​ ನಾಯಕ ಶಶಿ ತರೂರ್​ ಕೂಡ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಹಲವರು ಜಾಹೀರಾತು ಕುರಿತು ಸಂಶಯ ವ್ಯಕ್ತಪಡಿಸಿದ್ದರು.

ಸದ್ಯ ವೈರಲ್​ ಆಗಿರುವ ಜಾಹೀರಾತು ಪ್ರತಿಯನ್ನ ಕೊರೊನಾ ವ್ಯಾಕ್ಸಿನೇಷನ್​​ ಡ್ರೈವ್​​ಗೆ ಪ್ರೇರಣೆ ನೀಡಲು ತಯಾರಿಸಲಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಗೋವಾದ ಅಲ್ಡೋನಾ ಪ್ರದೇಶದ ಸವಿಯೊ ಫಿಗುರೆಡೊ ಎಂಬಾತ ಜನರು ಲಸಿಕೆ ಪಡೆದುಕೊಳ್ಳುವಂತೆ ಪ್ರೇರಣೆ ನೀಡಲು ಪೋಸ್ಟ್​ ರಚಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಆತ ತನ್ನ ಅಧಿಕೃತ ಫೇಸ್​​ಬುಕ್​ ಖಾತೆಯಲ್ಲಿ ಫೋಟೋ ಸಮೇತ, ಲಸಿಕೆ ಪಡೆಲು ಲಸಿಕಾ ಕೇಂದ್ರದ ಫೋನ್​​ ನಂಬರ್​​ನೊಂದಿಗೆ ಪೋಸ್ಟ್​ ಮಾಡಿದ್ದಾರೆ.

ನನ್ನ ಪೋಸ್ಟ್​ ಇಷ್ಟೋದು ವೈರಲ್ ಆಗುತ್ತೆ ಎಂದುಕೊಂಡಿರಲಿಲ್ಲ. ಮಂಗಳೂರು, ಕೋಲ್ಕತ್ತಾ, ಒಡಿಸ್ಸಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಕರೆ ಮಾಡಿ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನನ್ನ ಪೋಸ್ಟ್​ ನೋಡಿದ ಕನಿಷ್ಠ 10 ಜನರಾದರೂ ವ್ಯಾಕ್ಸಿನ್​ ತೆಗೆದುಕೊಂಡಿದ್ದರೆ ಅಷ್ಟೇ ಸಾಕು. ನನ್ನ ಆಪ್ತ ಗೆಳೆಯ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಕಾರಣ ನನಗೆ ಯೋಚನೆ ಬಂತು ಎಂದು 58 ವರ್ಷದ ಸವಿಯೊ ಫಿಗುರೆಡೊ ಮಾಧ್ಯಮಗಳಿಗೆ ತಿಳಿಸಿದ್ದಾರೆ.

The post ‘ಕೋವಿಶೀಲ್ಡ್ ಲಸಿಕೆ ಪಡೆದಿರೋ ವರನೇ ಬೇಕು’- ಮ್ಯಾಟ್ರಿಮೋನಿ ಜಾಹೀರಾತಿನ ಅಸಲಿ ಕಹಾನಿ ಇಲ್ಲಿದೆ appeared first on News First Kannada.

Source: newsfirstlive.com

Source link