ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಅನುಮಾನನಾ ? ಟೆಸ್ಟ್ ಮಾಡ್ಸಬೇಕು ಆದರೆ ಟೆಸ್ಟಿಂಗ್ ಸೆಂಟರ್ನಲ್ಲಿ ತುಂಬ ದೊಡ್ಡ ಕ್ಯೂ ಇದೆ. ಇನ್ನು ಅದ್ರ ರಿಸಲ್ಟ್ ಬರೋದಕ್ಕೆ ಕನಿಷ್ಟ 2 ದಿನವಾದ್ರೂ ಬೇಕು. ರಿಸಲ್ಟ್ ಬರೋತನಕ ಒಂದೆ ಸಮನೆ ಟೆನ್ಷನ್. ಇದಕೆಲ್ಲಾ ಪರಿಹಾರ ಬಂದಿದೆ. ಇನ್ಮೇಲೆ ಕೊರೊನಾ ಪಾಸಿಟಿವ್ ಅಥವಾ ನೆಗಟಿವ್ ಎನ್ನುವುದನ್ನ ತಿಳಿಯಲು ಟೆಸ್ಟಿಂಗ್ ಸೆಂಟರ್ಗೆ ಹೋಗೋದೇ ಬೇಡ, ಮನೆಯಲ್ಲೆ ಇದ್ದು ಪರೀಕ್ಷೆ ಮಾಡ್ಕೊಬಹುದು. ಅದು ಕೇವಲ ಹತ್ತು ನಿಮಿಷದಲ್ಲಿ.

ಜ್ವರ ಕಾಣಿಸಿಕೊಂಡರೆ, ಶೀತದಿಂದ ಮೂಗು ಸೋರುತ್ತಿದ್ದರೆ, ಮೈಕೈ ನೋವು ಕಾಣಿಸಿದರೆ.. ಅದೆಲ್ಲ ಇರ್ಲಿ ಒಮ್ಮೆ ಸೀನಿದರೂ ನಮ್ಮ ತಲೆಗೆ ಮೊದಲು ಬರೋ ವಿಷಯವೇ ಕೊರೊನಾ ಪಾಸಿಟಿವ್ ಆಗಿರಬಹುದಾ ಎನ್ನುವ ಅನುಮಾನ. ಕೊರೊನಾ ತೀವ್ರತೆಯ ಭಯದಿಂದ ಮೊದಲ ಹಂತದಲ್ಲೆ ಪರೀಕ್ಷೆಗೆ ಧಾವಿಸುತ್ತೇವೆ. ಟೆಸ್ಟ್ ನೆಗಟಿವ್ ಬಂದರೆ ನಿರಾಳ. ಪಾಸಿಟಿವ್ ಬಂದರೆ ಆಸ್ಪತ್ರೆ ಹೋಗ್ಬೇಕಾ ? ಹೋಮ್ ಐಸೋಲೆಷನ್ ಆಗ್ಬೇಕಾ ? ಬೆಡ್ ಸಿಗುತ್ತಾ ? ಆಕ್ಸಿಜನ್ ಇಲ್ಲಾಂದ್ರೆ ಏನ್ ಮಾಡೋದು ಅನ್ನೋ ಪ್ರಶ್ನೆಗಳು ಶುರು ಆಗುತ್ತೆ. ಈ ಪಾಸಿಟಿವ್ ನೆಗೆಟಿವ್ ನಡುವೆ ರಿಸಲ್ಟ್ ಗಾಗಿ ಕಾಯೋ ಸಮಯ ಇದ್ಯಲ್ಲ ಅದು ಮಾತ್ರ ಎಲ್ಲದಕ್ಕಿಂತ ಕಷ್ಟ.

ಕೋವಿಡ್ ಪಾಸಿಟಿವ್ ಅಥವಾ ನೆಗೆಟಿವ್ ಅನ್ನೋದು ಕಂಡು ಹಿಡಿಯೋ ಮಾರ್ಗ ಒಂದೆರಡಲ್ಲ. ಮೊದಲಿಗೆ ಮೂಗಿನ ದ್ರವದಿಂದ ಪರೀಕ್ಷಿಸುತ್ತಿದ್ದರು. ಮುಂದೆ ಆಕ್ಯೂರೆಸಿಗಾಗಿ ಗಂಟಲ ದ್ರವದಿಂದ ಪರೀಕ್ಷೆ ಮಾಡಲು ಮುಂದಾದರು. ಈಗ ಎಕ್ಸ್ ರೇ, ಸಿ.ಟಿ ಸ್ಕ್ಯಾನ್ ಮೂಲಕ ಕೂಡ ಕೋವಿಡ್ ಪರೀಕ್ಷೆ ಮಾಡಲಾಗ್ತಾ ಇದೆ. ಮೂಗಿನ ದ್ರವ ಪರೀಕ್ಷೆಗೆ 700 ರೂಪಾಯಿ, ಗಂಟಲ ಸ್ವಾಬ್ ಪರೀಕ್ಷೆ ದರ ಸಾವಿರ ರೂಪಾಯಿಗಳಿದ್ದರೆ, ಎಕ್ಸ್ ರೇ ಹಾಗೂ ಸಿ.ಟಿ ಸ್ಕ್ಯಾನ್ ಮಾತ್ರ ಇದಕ್ಕಿಂತ ಡಬಲ್ ಆಗಿ ಹೋಗಿದೆ. ಇದೀಗ ಹೊಸದೊಂದು ಡಿವೈಸ್ ಮಾರುಕಟ್ಟೆಗೆ ಕಾಲಿಡ್ತಾ ಇದೆ. ಇದೊಂದಿದ್ದರೆ ಸಾಲುಗಟ್ಟಲೆ ಕ್ಯೂನಲ್ಲಿ ನಿಂತು ಕೋವಿಡ್ ಪರೀಕ್ಷೆ ಮಾಡಿಸುವಂತಿಲ್ಲ. ಕೇವಲ 15 ನಿಮಿಷದಲ್ಲಿ ನಿಮಗೆ ಕೊರೊನಾ ನೆಗೆಟಿವ್ ಇದ್ಯಾ ಅಥವಾ ಪಾಸಿಟಿವ್ ಇದ್ಯಾ ಅನ್ನೋದು ಮನೆಯಲ್ಲಿ ಕುಳಿತಲ್ಲೆ ತಿಳಿಯುತ್ತೆ.

ಮೊದಲ ಅಲೆ ತೀವ್ರಗತಿ ತಲುಪಿದಾಗ ಬಿ.ಬಿ.ಎಂ.ಪಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿ ಎಲ್ಲರೂ ಮನೆ ಮನೆಗೆ ಬಂದು ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡಿದ್ದರು. ಅದಲ್ಲದೆ ಪ್ರೈವೇಟ್ ಲ್ಯಾಬ್ಗಳು ಬುಕ್ ಮಾಡಿದ್ದರೆ ಮನೆಗೆ ಬಂದು ಸ್ವಾಬ್ ಕಲೆಕ್ಟ್ ಮಾಡಿಕೊಂಡು ಹೋಗುತ್ತಿದ್ದರು. ಇದುವರೆಗೂ ಮನೆಯಲ್ಲೆ ಕೋವಿಡ್ ಪರೀಕ್ಷೆ ಎಂದರೆ, ಕೂಡಲೆ ಇವೆರಡು ನೆನಪಿಗೆ ಬರೋದು. ಆದ್ರೆ ಈಗ ಯಾರ ಸಹಾಯವೂ ಇಲ್ಲದೆ ಮನೆಯಲ್ಲಿ ಕೂತು ಸಣ್ಣ ಪ್ರೊಸೀಜರ್ಸ್ ಫಾಲೋ ಮಾಡಿದರೆ ನೀವು ಕೋವಿಡ್ ಸೋಂಕಿದೆಯಾ ಇಲ್ಲವಾ ಅನ್ನೋದನ್ನ ಕಂಡುಹಿಡಿಯಬಹುದು. ಅದು ಕೇವಲ 10 ರಿಂದ 15 ನಿಮಷದ ಒಳಗೆ.

ಮಾರುಕಟ್ಟೆಗೆ ಕೋವಿಸೆಲ್ಫ್ ಕಿಟ್​
ಮನೆಯಲ್ಲೇ ಕೋವಿಡ್ ಪರೀಕ್ಷೆ ನಡೆಸುವ ಕೊವಿಸೆಲ್ಫ್ ಎಂಬ ಟೆಸ್ಟಿಂಗ್‌ ಕಿಟ್‌ ಅನ್ನು  ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸೆಲ್ಯೂಷನ್ ಎನ್ನುವ ಸಂಸ್ಥೆ ತಯಾರಿಸಿದೆ. ಇದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಒಪ್ಪಿಗೆ ನೀಡಿದೆ. ಇದೊಂದು ಱಪಿಡ್‌ ಆ್ಯಂಟಿಜೆನ್‌ ಮಾದರಿಯ ಟೆಸ್ಟ್‌ ಕಿಟ್​ ಆಗಿದ್ದು, ಈ ಕಿಟ್‌ನ ಬಳಕೆ ಬಗ್ಗೆ ಮಾಹಿತಿ ಇಲ್ಲಿದೆ.

ಏನಿರುತ್ತೆ ಕಿಟ್‌ನಲ್ಲಿ?
ಈ ಕಿಟ್ ಹೇಗೆ ಬಳಸಬೇಕೆಂಬ ಮಾಹಿತಿ ತಿಳಿಸಲು ಬಳಕೆದಾರರ ಮಾಹಿತಿ ಚೀಟಿಯನ್ನು ಕಿಟ್ ಒಳಗೆ ಇರಿಸಲಾಗಿದೆ. ಮೂಗಿನಿಂದ ಸ್ವಾಬ್ ಕಲೆಕ್ಟ್ ಮಾಡಲು ಉದ್ದನೆಯ ಹೈಜೀನ್ ಸ್ವಾಬ್, ಮೂಗಿನ ದ್ರವವನ್ನು ಸಂಗ್ರಹಿಸಲು ಪ್ರೀ-ಫಿಲ್ಡ್ ಎಕ್ಸ್ಟ್ರಾಕ್ಷನ್ ಟ್ಯೂಬ್ ಇರುತ್ತದೆ. ಮುಖ್ಯವಾಗಿ ರಿಸಲ್ಟ್ ತೋರಿಸೊ ಟೆಸ್ಟಿಂಗ್ ಸ್ಟ್ರಿಪ್ ಹಾಗೂ ಇದನ್ನೆಲ್ಲ ತ್ಯಾಜ್ಯವನ್ನಾಗಿ ಬಿಸಾಡಲು ಪುಟ್ಟ ಪ್ಲಾಸ್ಟಿಕ್ ಬ್ಯಾಗ್ ಇವಿಷ್ಟು ಕಿಟ್ನಲ್ಲಿ ಲಭ್ಯವಿರುತ್ತದೆ.

ಟೆಸ್ಟ್​ ಮಾಡೋದು ಹೇಗೆ?
ಈ ಕಿಟ್ ಹಿಡಿದು ಕೊರೊನಾ ಟೆಸ್ಟ್ ಹೇಗೆ ಮಾಡಬೇಕು ಎನ್ನುವ ಸಹಜ ಅನುಮಾನ ಇದ್ದೆ ಇರುತ್ತದೆ. ಟೆಸ್ಟ್‌ಗೂ ಮೊದಲು ಮೊಬೈಲ್‌ನಲ್ಲಿ ಮೈಲ್ಯಾಬ್‌ ಕೊವಿಸೆಲ್ಫ್ ಎನ್ನುವ ಆ್ಯಪ್‌ ಅನ್ನು ಪ್ಲೇಸ್ಟೋರ್ ಅಥವಾ ಆ್ಯಪ್ ಸ್ಟೋರ್ ಮೂಲಕ ಡೌನ್‌ಲೋಡ್‌ ಮಾಡಬೇಕು. ಆ್ಯಪ್‌ನಲ್ಲಿ ಪರೀಕ್ಷೆಗೊಳಪಡುವವರ ಹೆಸರು, ವಯಸ್ಸು ಇತ್ಯಾದಿ ಮಾಹಿತಿ ತುಂಬಬೇಕು. ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಸ್ವತ್ಛವಾದ ಟೇಬಲ್‌ ಮೇಲೆ ಕಿಟ್‌ಗಳಲ್ಲಿನ ವಸ್ತುಗಳನ್ನು ಹೊರತಗೆಯಬೇಕು. ಕೊವಿಸೆಲ್ಫ್ ಕಿಟ್ನೊಂದಿಗೆ ಅದರ ಮೂಲಕ ಕೊರೊನಾ ಪರೀಕ್ಷೆ ನಡೆಸುವ ವಿಧಾನದ ವಿವರಣೆ ಇರುವ ಮ್ಯಾನುವಲ್ ಕೂಡ ಲಭ್ಯವಿರಲಿದೆ. ಕೊವಿಸೆಲ್ಫ್ ಮೂಲಕ ಪರೀಕ್ಷೆ ನಡೆಸಲು, ಬಳಕೆದಾರರು ತಮ್ಮ ಮೊಬೈಲ್​​​ನಲ್ಲಿ ಮೈಲ್ಯಾಬ್ ಅಪ್ಲಿಕೇಷನ್ ಹೊಂದಿರಬೇಕಿದೆ. ಮೂಗಿನ ದ್ರವವನ್ನ ಹೈಜೀನ್ ಸ್ವಾಬ್ ಎಂಬ ಉದ್ದನೆಯ ಕಡ್ಡಿಯಾಕಾರದ ಪರಿಕರದ ಸಹಾಯದಿಂದ ತೆಗೆದು ಟ್ಯೂಬ್​​ಗೆ ಅದನ್ನು ಹಾಕಬೇಕು. ಟ್ಯೂಬ್​​ನಲ್ಲಿ ಮೂಗಿನ ದ್ರವ ಇಳಿದುಕೊಳ್ಳುವಂತೆ ನೋಡಿಕೊಳ್ಳಬೇಕು.

 

ಟ್ಯೂಬ್ನ ಒಳಗೆ ಇರುವ ಸ್ವಾಬ್  ಸುರಕ್ಷತವಾಗಿ ಇರುವಂತೆ ಕಾಪಾಡಿಕೊಳ್ಳಬೇಕು. ಆ ಟ್ಯೂಬ್ ನಿಂದ ಟೆಸ್ಟಿಂಗ್ ಸ್ಟ್ರಿಪ್ನಲ್ಲಿ ಇರವ ಜಾಗದಲ್ಲಿ ಹನಿ ಹನಿಯಾಗಿ ಹಾಕಿದರೆ, ಸ್ಟ್ರಿಪ್ ಮೇಲೆ ಗೆರೆ ರೂಪುಗೊಳ್ಳುತ್ತದೆ. ಕೇವಲ ಒಂದೇ ಒಂದು ಗೆರೆ ರೂಪುಗೊಂಡರೆ ನೆಗೆಟಿವ್ ಹಾಗೂ ಸೇಫ್ ಎಂದು ಅರ್ಥ. ಒಂದು ವೇಳೆ ಸ್ಟ್ರಿಪ್ ಮೇಲೆ ಎರಡು ಗೆರೆ ಫಾರ್ಮ್​​​ ಆದರೆ ಪರೀಕ್ಷೆ ಮಾಡಿದವರಿಗೆ ಸೋಂಕಿದೆ ಎನ್ನುವುದು ತಿಳಿಯಬೇಕು.

ಟೆಸ್ಟ್ ಬಳಿಕೆ ಪಾಸಿಟಿವ್ ಬರಲಿ ನೆಗೆಟಿವ್ ಬರಲಿ ಆ್ಯಪ್ ಸ್ಟ್ರಿಪ್​​ನ ಫೋಟೋವನ್ನು ಅಪ್ಲೋಡ್ ಮಾಡುವಂತೆ ಕೊರಿಕೆ ಇಟ್ಟಿರುತ್ತದೆ. ಆ ಸ್ಟ್ರಿಪ್ ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ, ಸಂಪೂರ್ಣ ಸ್ಕ್ಯಾನ್ ಮಾಡಲಾಗುತ್ತದೆ. ರೂಪುಗೊಂಡಿರುವ ಗೆರೆಗಳನ್ನು ಗುರುತಿಸಿ ಆ್ಯಪ್ನಲ್ಲಿ ಪಾಸಿಟಿವ್ ಹಾಗೂ ನೆಗಟಿವ್ ವರದಿ ಬರುತ್ತದೆ. ಪಾಸಿಟಿವ್ ವರದಿಯನ್ನು ನೇರವಾಗಿ ಐ.ಸಿ.ಎಮ್ .ಆರ್ ವೆಬ್ಸೈಟ್ಗೆ ಕಳಿಸಲಾಗುವುದು. ಈ ರಿಪೋರ್ಟ್ ಆಧಾರದ ಮೇಲೆ ಬಿಯು ನಂಬರ್  ಜನರೇಟ್ ಮಾಡಲಾಗುತ್ತದೆ. ಈ ವರದಿಯನ್ನು ಹಿಡಿದು ಎಲ್ಲ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮುಂದಾಗಬಹುದು ಎನ್ನಲಾಗಿದೆ.

ಇನ್ನು ಈ ಕಿಟ್ ಖರೀದಿಸುವ ಮೊದಲು ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಕೋವಿಡ್ ಗುಣಲಕ್ಷಣಗಳಿರುವವರು ಮಾತ್ರ ಈ ಕಿಟ್‌ ಬಳಸತಕ್ಕದ್ದು. ವಿವೇಚನಾ ರಹಿತವಾಗಿ ಸುಮ್ಮಸುಮ್ಮನೇ ಬಳಸುವಂತಿಲ್ಲ. ಕೋವಿಡ್ ದೃಢಪಟ್ಟಿರುವವರ ಪ್ರಾಥಮಿಕ ಸಂಪರ್ಕದಲ್ಲಿರುವವರು ಕೂಡ ಇದನ್ನು ಬಳಸಬಹುದು. ಯಾವ ಮೊಬೈಲ್‌ ಸಂಖ್ಯೆಯಿಂದ ಮೈಲ್ಯಾಬ್‌ ಕೊವಿಸೆಲ್ಫ್ ಆ್ಯಪ್‌ ಡೌನ್‌ಲೋಡ್‌ ಮಾಡಲಾಗಿದೆಯೋ ಅದೇ ಮೊಬೈಲ್‌ ಸಂಖ್ಯೆಯಿಂದ ಸ್ಟ್ರಿಪ್‌ ಫೋಟೋ ಅಪ್‌ಲೋಡ್‌ ಮಾಡಬೇಕು. ಕೋವಿಡ್ ಗುಣಲಕ್ಷಣಗಳಿದ್ದರೂ ಈ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೆ ಅಂಥವರು ತಕ್ಷಣವೇ ಆರ್‌ಟಿ-ಪಿಸಿಆರ್‌ ಟೆಸ್ಟ್‌ಗೆ ಒಳಗಾಗಬೇಕು.

ಸೆಲ್ಫ್ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದವರನ್ನು ಶಂಕಿತ ಕೊರೊನಾ ಸೋಂಕಿತರೆಂದು ಪರಿಗಣಿಸಲಾಗುತ್ತದೆ. ಅಂಥವರು, ಐಸಿಎಂಆರ್‌ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ಟೆಸ್ಟ್‌ ಕಿಟ್‌ಗೆ ಐಸಿಎಂಆರ್‌ ಅನುಮತಿ ನೀಡಿದ್ದು ಇದರ ವಿಧಾನದ ಮೂಲಕ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ತಮಗೆ ತಾವೇ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. 2 ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಹಿರಿಯರ ಸಹಾಯದಿಂದ ಈ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.

ಸೋಂಕಿನ ಲಕ್ಷಣವುಳ್ಳ ವ್ಯಕ್ತಿಗಳಿಗೆ ಮಾತ್ರ ಈ ಕಿಟ್‌ ಬಳಸಿ ಹೋಮ್‌ ಟೆಸ್ಟ್‌ ಮಾಡಲು ಅನುಮತಿ ನೀಡಲಾಗಿದೆ. ಪಾಸಿಟಿವ್‌ ಪತ್ತೆಯಾದ ಬಳಿಕ ಅಂಥವರು ದೃಢೀಕರಣಕ್ಕಾಗ ಪ್ರಯೋಗಾಲಯವನ್ನು ಸಂಪರ್ಕಿಸಬಹುದು ಎಂದು ಐ.ಸಿ.ಎಂ.ಆರ್‌ ಸಲಹೆ ನೀಡಿದೆ. ಈ ಕಿಟ್​ಗಳು ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯ ಆಗಲಿವೆ. ಈ ಟೆಸ್ಟ್ಂಗ್ ಕಿಟ್ ಮನೆಯಲ್ಲೇ ಬಳಸಬಹುದಾದ್ದರಿಂದ ಆಸ್ಪತ್ರೆಗೆ ಹೋಗುವ ಅಗತ್ಯವಿರುವುದಿಲ್ಲ. ಅಲ್ಲದೆ ವಯಸ್ಸಾದವರಿಗೆ, ಸುಸ್ತಾದವರಿಗೆ ಈ ಕಿಟ್ ಹೆಚ್ಚು ಅನುಕೂಲವಾಗಲಿದೆ.

ಈ ಕಿಟ್ ನ ದರ ಕೇವಲ 250 ರೂಪಾಯಿಗಳಿದ್ದು ಒಂದು ಕಿಟ್ ಒಮ್ಮೆ ಮಾತ್ರ ಬಳಸುವ ಅವಕಾಶವಿರುತ್ತದೆ. ವೇಗವಾಗಿ ಫಲಿತಾಂಶ ತಿಳಿಯುವುದರಿಂದ ಸೋಂಕಿನ ಹರಡುವಿಕೆಯನ್ನು ಸಹ ನಿಯಂತ್ರಿಸ ಬಹುದು. ಅಲ್ಲದೆ ದಿನವೆಲ್ಲ ಟೆಸ್ಟಿಂಗ್ಗೆ ಸಾಲು ಸಾಲಾಗಿ ನಿಂತು, ರಿಪೋರ್ಟ್ ಬರುವ ತನಕ ಹೆದರಿ ಕುಳಿತುಕೊಳ್ಳುವ ಅನಿವಾರ್ಯವಿಲ್ಲ. ಈ ಟೆಸ್ಟ್ಂಗ್ ಕಿಟ್ ಎಲ್ಲ ರೀತಿಯಲ್ಲೂ ಸೇಫ್ ಆ್ಯಂಡ್ ಆಕ್ಯೂರೇಟ್ ಎನ್ನುವುದು ತಿಳದುಬಂದಿದ್ದು, ಇದರ ಸದುಪಯೋಗವನ್ನು ಎಲ್ಲರು ಬಳಸಬಹುದಾಗಿದೆ.

ಕೊರೊನಾ ಪಾಸಿಟಿವ್ ಆಗಿದೆಯೋ ಇಲ್ವೊ ಎನ್ನುವ ಗೊಂದಲವನ್ನು ಶೀಘ್ರವಾಗಿ ಬಗೆಹರಿಸಬಹುದು. ಸೋಂಕಿತರಿಂದ ಪ್ರೈಮರಿ ಕಾಂಟ್ಯಾಕ್ಟ್ ಆಗಿದೆ ಎನ್ನುವುದು ತಿಳಿದ ಕೂಡಲೆ ಅಥವಾ ರೋಗಲಕ್ಷಣಗಳು ಕಂಡ ಕೂಡಲೇ ನೀವೆ ನಿಮ್ಮ ಮನೆಯಲ್ಲಿ ಈ ಪರೀಕ್ಷೆಯನ್ನು ಮಾಡಿಕೊಂಡು, ಪಾಸಿಟಿವ್ ಇದ್ದರೆ ಚಿಕಿತ್ಸೆ ಪಡೆದು, ನೆಗೆಟಿವ್ ಇದ್ದರೆ ನಿರಾಳದಿಂದ ಜೀವಿಸಿ. ಕೊರೊನಾದಿಂದ ನಿರಂತರವಾಗಿ ಸೇಫ್ ಆಗಿರಿ.

The post ಕೋವಿಸೆಲ್ಫ್​ ಕಿಟ್​ನಿಂದ ಮನೆಯಲ್ಲೇ ಕೊರೊನಾ ಟೆಸ್ಟ್ ಮಾಡಿಕೊಳ್ಳೋದು ಹೇಗೆ? appeared first on News First Kannada.

Source: newsfirstlive.com

Source link