ನವದೆಹಲಿ: ಕೇಂದ್ರ ಸರ್ಕಾರ ಕಳೆದ ವಾರ ಮತ್ತೊಮ್ಮೆ ಕೋವಿಶೀಲ್ಡ್​​ ಲಸಿಕೆಯ ಮೊದಲ ಡೋಸ್ ಹಾಗೂ ಎರಡನೇ ಡೋಸ್​​​ ಪಡೆಯುವುದರ ನಡುವಿನ ಗ್ಯಾಪ್​​ ಹೆಚ್ಚಿಸಿದೆ. ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ಜನರಲ್ಲಿ ಕುತೂಹಲವಿತ್ತು. ಅದಕ್ಕೀಗ ಐಸಿಎಂಆರ್​ ಮುಖ್ಯಸ್ಥರು ಉತ್ತರ ನೀಡಿದ್ದಾರೆ.

ಕೇಂದ್ರ ಕೋವಾಕ್ಸಿನ್​ನ ಎರಡು ಡೋಸ್​​ಗಳ ಅಂತರವನ್ನ ಹೆಚ್ಚಿಸಿಲ್ಲ. ಬದಲಿಗೆ ಕೋವಿಶೀಲ್ಡ್​ಗೆ ಮಾತ್ರ ಎರಡು ಬಾರಿ ಡೋಸ್​​ಗಳ ನಡುವಿನ ಗ್ಯಾಪ್​​ ಹೆಚ್ಚಿಸಿದೆ. ಯಾಕಂದ್ರೆ ಕೋವ್ಯಾಕ್ಸಿನ್​ಗಿಂತ ಕೋವಿಶೀಲ್ಡ್​ ಮೊದಲ ಡೋಸ್​​ನಲ್ಲಿ ಬಲವಾದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಎನ್ನಲಾಗಿದೆ. ಈ ಬಗ್ಗೆ ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ್ ಮಾಹಿತಿ ನೀಡಿದ್ದಾರೆ.

ಆಕ್ಸ್​​ಫರ್ಡ್ ವಿ.ವಿ ಮತ್ತು ಆಸ್ಟ್ರಾಝೆನೆಕಾ  ಸಂಸ್ಥೆ ಅಭಿವೃದ್ದಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನ ಭಾರತದಲ್ಲಿ ಸೀರಮ್ ಇನ್ಸ್​ಟಿಟ್ಯೂಟ್​ ಆಫ್ ಇಂಡಿಯಾ ಉತ್ಪಾದಿಸುತ್ತಿದೆ. ಕಳೆದ ಜನವರಿಯಲ್ಲಿ ಭಾರತದ ಮೊದಲ ಹಂತದ ವ್ಯಾಕ್ಸಿನೇಷನ್ ಆರಂಭವಾದಾಗ, ವ್ಯಕ್ತಿ ಕೋವಿಶೀಲ್ಡ್ ಮೊದಲ​ ಡೋಸ್​​ ಪಡೆದ ಬೆನ್ನಲ್ಲೇ 4-6 ವಾರಗಳ ಬಳಿಕ ಎರಡನೇ ಡೋಸ್​ ಪಡೆಯಬೇಕು ಎನ್ನಲಾಗಿತ್ತು.  ಬಳಿಕ 4 ರಿಂದ 8 ವಾರಗಳ ಅಂತರದಲ್ಲಿ ಎರಡು ಡೋಸ್ ತೆಗೆದುಕೊಳ್ಳಬೇಕು ಎನ್ನಲಾಯ್ತು. ಈಗ ಕಳೆದ ವಾರ ಮತ್ತೊಮ್ಮೆ ಈ ಅಂತರವನ್ನ 12-16 ವಾರಗಳಿಗೆ ಏರಿಸಲಾಗಿದೆ. ಆದರೆ ಭಾರತ್​ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರೋ ಭಾರತದ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್‌ನ ಡೋಸೇಜ್ ಅಂತರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೋವ್ಯಾಕ್ಸಿನ್​ ಡೋಸೇಜ್​ ಅಂತರ ಮೊದಲಿನಿಂದ ನಾಲ್ಕು ವಾರಕ್ಕೆ ಸೀಮಿತಗೊಳಿಸಲಾಗಿದೆ.

ಕೋವಿಶೀಲ್ಡ್​​ನ ಎರಡು ಡೋಸ್​​ಗಳ ಅಂತರ ಮಾತ್ರ ಹೆಚ್ಚಿಸಲು ಮುಖ್ಯ ಕಾರಣ ಏನೆಂದರೆ ಕೋವಿಶೀಲ್ಡ್ ​​ಮೊದಲ ಡೋಸ್ ಹಾಕಿಸಿಕೊಂಡ ನಂತರ ವ್ಯಕ್ತಿಯಲ್ಲಿ ಬಲವಾದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಮೊದಲ ಡೋಸ್ ನಂತರ ರೋಗನಿರೋಧಕ ಶಕ್ತಿ ಪ್ರಬಲವಾಗುತ್ತದೆ. ಇದು 12 ವಾರಗಳವರೆಗೆ ಎಫೆಕ್ಟೀವ್ ಆಗಿರುತ್ತದೆ. ಎರಡು ಡೋಸ್​ ನಡುವೆ ಮೂರು ತಿಂಗಳ ಅಂತರವಿದ್ರೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆದ್ರೆ ಕೋವ್ಯಾಕ್ಸಿನ್ ವಿಚಾರದಲ್ಲಿ ಹೀಗಿಲ್ಲ ಅಂತ ಡಾ. ಭಾರ್ಗವ್ ರಾಷ್ಟ್ರೀಯ ಪತ್ರಿಕೆಯ ಸಂದರ್ಶನದಲ್ಲಿ ತಿಳಿಸಿದ್ದಾರೆ.

 

The post ಕೋವ್ಯಾಕ್ಸಿನ್​​​​ಗಿಲ್ಲ, ಕೋವಿಶೀಲ್ಡ್​​ ಡೋಸ್​​ಗಳ ಅಂತರ ಮಾತ್ರ ಹೆಚ್ಚಿಸಿದ್ದು ಯಾಕೆ ಗೊತ್ತಾ? appeared first on News First Kannada.

Source: newsfirstlive.com

Source link