ಸಕ್ಸಲ್​​ಫುಲ್​ ಆಗಿ ಸಾಗ್ತಿದ್ದ ಕಲರ್​ಫುಲ್​ ಟೂರ್ನಿ ಐಪಿಎಲ್​ಗೆ ಲಗಾಮು ಹಾಕಿದ ಕೊರೊನಾ, ಅನಿರ್ಧಾಷ್ಟವಧಿಗೆ ಮುಂದೂಡುವಂತೆ ಮಾಡಿದೆ. ಆಟಗಾರರು, ಗ್ರೌಂಡ್​​ಸ್ಟಾಪ್​ ಮತ್ತು ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡದ್ದರಿಂದ ಪರಿಣಾಮ ಆಡಳಿತ ಮಂಡಳಿ ಮಹತ್ವದ ಈ ನಿರ್ಧಾರಕ್ಕೆ ತೆಗೆದುಕೊಳ್ತು. ವರ್ಲ್ಡ್​​ ಬೆಸ್ಟ್​​ ರಿಚೆಸ್ಟ್​ ಟೂರ್ನಿ ರದ್ದುಗೊಂಡು 20 ದಿನಗಳೇ ಕಳೆದಿದೆ. 29 ಪಂದ್ಯಗಳನ್ನು ಈಗಾಗಲೇ ಆಯೋಜಿಸಿರುವ BCCI ಬಿಗ್​ಬಾಸ್​ಗಳು, ಉಳಿದ 31 ಪಂದ್ಯಗಳನ್ನು ಯಾವಾಗ..? ಎಲ್ಲಿ..? ಹೇಗೆ ನಡೆಸ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇದೀಗ ಅದಕ್ಕೆ ಸಂಬಂಧಿಸಿದ ಸಿಹಿಸುದ್ದಿ ಹೊರ ಬಿದ್ದಿದ್ದು, ಈ ಕುರಿತು ಎದ್ದಿದ್ದ ಹಲವು ಗೊಂದಲಗಳಿಗೆ ಬಿಸಿಸಿಐ ಉತ್ತರ ಕಂಡುಕೊಳ್ಳಲು ಮುಂದಾಗಿದೆ.

ಬಾಕಿ ಪಂದ್ಯಗಳ ಆಯೋಜನೆಗೆ ಬಿಸಿಸಿಐ ಬಿಗ್​​​ ಪ್ಲಾನ್​..!
ಏಪ್ರಿಲ್​​ 9ರಂದು ಆರಂಭವಾದ 14ನೇ ಆವೃತ್ತಿಯ ಶ್ರೀಮಂತ ಲೀಗ್​​​, ಮೇ 2ರವರೆಗೂ ಯಶಸ್ವಿಯಾಗಿ ನಡೀತು. ವರುಣ್​ ಚಕ್ರವರ್ತಿಗೆ ಪಾಸಿಟಿವ್​ ಬಂದಿದ್ದರಿಂದ ಮೇ 3ರಂದು ನಡೆಯಬೇಕಿದ್ದ RCB-ಕೆಕೆಆರ್​ ನಡುವಿನ ಪಂದ್ಯ ಕೊರೊನಾಗೆ ಆಹುತಿಯಾಯ್ತು. ಅದಾದ ಬಳಿಕ ಹಲವರು ಆಟಗಾರರು, ಸಿಬ್ಬಂದಿಗೆ ಸೋಂಕು ತಗುಲಿದ ಪರಿಣಾಮ ಟೂರ್ನಿಯನ್ನ ಮುಂದಕ್ಕೆ ಹಾಕಲಾಯ್ತು. ಹಾಗಾಗಿ 2500 ಕೋಟಿ ನಷ್ಟ ಅನುಭವಿಸ್ತಿರುವ ಬಿಸಿಸಿಐ, ನಷ್ಟವನ್ನು ತುಂಬಿಕೊಳ್ಳಲು ಉಳಿದ 31 ಪಂದ್ಯಗಳ ಮರು ಆಯೋಜನೆಗೆ ಬಿಗ್​ ಪ್ಲಾನ್​ ರೂಪಿಸಿದೆ. ಆ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸಲು ತಂತ್ರಗಾರಿಕೆ ರೂಪಿಸಿದೆ.

ಇದೇ 29ರಂದು ನಡೆಯಲಿದೆ BCCI ವಿಶೇಷ ಸಾಮಾನ್ಯ ಸಭೆ
ಮೊಟುಕುಗೊಂಡ 14ನೇ ಆವೃತ್ತಿಯ ಮಿಲಿಯನ್​ ಡಾಲರ್​ ಟೂರ್ನಿ ಮರು ಆಯೋಜನೆಗೆ BCCI ತಂತ್ರಗಾರಿಕೆ ಜೊತೆಗೆ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಹಾಗಾಗಿ ಯಾವಾಗ, ಎಲ್ಲಿ, ಹೇಗೆ..? IPL​​ ನಡೆಸಬೇಕು ಅನ್ನೋ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳಲು ಮೇ 29ರಂದು ವಿಶೇಷ ಸಾಮಾನ್ಯ ಸಭೆ ನಡೆಸಲಿದೆ. ಅಂದು BCCI ಅಧಿಕಾರಿಗಳು IPL​ ಮರು ಆಯೋಜನೆ ಬಗ್ಗೆ ಚರ್ಚೆ ನಡೆಸಲು ವೇದಿಕೆ ಸಿದ್ಧವಾಗಿದೆ.

ಸೆಪ್ಟೆಂಬರ್​​-ಅಕ್ಟೋಬರ್​​ ನಡುವೆ IPL ಪುನರಾರಂಭ..?
ಅಕ್ಟೋಬರ್​​ 18ರಿಂದ ಟಿ20 ವಿಶ್ವಕಪ್​​ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನವೇ ಶ್ರೀಮಂತ ಲೀಗ್​ ಮುಗಿಸುವ ಯೋಜನೆಯಲ್ಲಿದ್ದಾರೆ ಬಿಸಿಸಿಐ ಬಿಗ್​​ಬಾಸ್​ಗಳು…! ಹಾಗಾಗಿ ಸೆಪ್ಟೆಂಬರ್​​ – ಅಕ್ಟೋಬರ್​ ನಡುವೆ 14ನೇ ಆವೃತ್ತಿಯ IPL ಅನ್ನು ಪುನರಾರಂಭಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ ಎನ್ನಲಾಗ್ತಿದೆ. ಈ ಬಗ್ಗೆ ಬಿಸಿಸಿಐ ಕಡೆಯಿಂದ ಅಧಿಕೃತ ಹೊರಬಾರದಿದ್ದರೂ, ಮೂಲಗಳು ಇದೇ ಸತ್ಯ ಎನ್ನುತ್ತಿವೆ. IPL ರದ್ದಾದ ಸಂದರ್ಭದಲ್ಲೇ BCCI ನಮ್ಮ ಬಳಿ ಪ್ಲಾನ್​ ಬಿ ಇದೆ ಎಂದು ಹೇಳಿತ್ತು. ಇದೀಗ ಆ ಪ್ಲಾನ್​ನಂತೆಯೇ ಹೆಜ್ಜೆ ಇಡುತ್ತಿದೆ.

UAEನಲ್ಲಿ IPL ಆಯೋಜನೆಗೆ ನಿರ್ಧಾರ ಸಾಧ್ಯತೆ..?
ಕಲರ್​​ಫುಲ್​ ಟೂರ್ನಿಯ ಉಳಿದರ್ಧ ಭಾಗವನ್ನು ಎಲ್ಲಿ ಆಯೋಜಿಸಬೇಕೆನ್ನುವ ಸಂದರ್ಭದಲ್ಲಿ ಮೊದಲು ಮುಂದೆ ಬಂದಿದ್ದು, ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​​..! ಯೆಸ್​​​.. ಆದರೆ ಇಲ್ಲಿ ಲೀಗ್​ ಆಯೋಜನೆ ಮಾಡಬೇಕೆಂದರೆ ದುಬಾರಿ ವೆಚ್ಚ ಭರಿಸಬೇಕಾಗುತ್ತೆ. ಹೀಗಾಗಿ ಯಶಸ್ವಿಯಾಗಿ ನಡೆದಿದ್ದ 13ನೇ ಆವೃತ್ತಿ IPLನಂತೆಯೇ UAEನಲ್ಲಿ ಈ ಬಾರಿಯ ಉಳಿದರ್ಧ ಭಾಗವನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಜೊತೆಗೆ ಕಳೆದ IPL​ನಲ್ಲಿ ಒಂದು ಕೊರೊನಾ ಪ್ರಕರಣ ಕೂಡ ಕಾಣಿಸಿಕೊಳ್ಳದೇ ಸುಸೂತ್ರವಾಗಿ ನಡೆದಿತ್ತು. ಹಾಗಾಗಿ ಬಿಗ್​ಬಾಸ್​ಗಳು UAEಯೇ ಸೂಕ್ತ ಸ್ಥಳ ಅಂತಿದ್ದಾರೆ ಎಂದು ತಿಳಿದು ಬಂದಿದೆ.

IPL ಆಯೋಜನೆಗೆ ಬಿಸಿಸಿಐ ಪ್ಲಾನ್​ ಏನು.?
– UAEನಲ್ಲಿ ಸೆ.​15 ರಿಂದ ಅ.15ರವರೆಗೆ ಆಯೋಜನೆ ಸಾಧ್ಯತೆ
– ವಿಕೇಂಡ್​ನಲ್ಲಿ ಡಬಲ್​ ಹೆಡ್ಡರ್​ ಪಂದ್ಯಗಳ ಆಯೋಜನೆ
– ಶನಿವಾರ-ಭಾನುವಾರ ಸೇರಿ 4 ವೀಕೆಂಡ್​​​ನಲ್ಲಿ 16 ಮ್ಯಾಚ್​​​
– ಉಳಿದ 24 ದಿನಗಳಲ್ಲಿ 27 ಲೀಗ್​ ಪಂದ್ಯಗಳ ಆಯೋಜನೆ
– ನಾಕೌಟ್​ ಪಂದ್ಯ-ಫೈನಲ್​ ಪಂದ್ಯಗಳಿಗೆ ಸಿಗಲಿದೆ ಗ್ಯಾಪ್​

GFX: ಅಂದುಕೊಂಡಂತೆ ಆಗಬೇಕೆಂದ್ರೆ, ಬೇಕು ಇಂಗ್ಲೆಂಡ್​ ಒಪ್ಪಿಗೆ..?
ಬಿಸಿಸಿಐ ಅಂದುಕೊಂಡಿರುವ ಈ ಅವಧಿಯಲ್ಲಿ IPL​ ನಡೆಸಲು, ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯ ಒಪ್ಪಿಗೆ ಕೂಡ ಮಹತ್ವದ ಪಾತ್ರವಹಿಸಿದೆ. ಈ ಸವಾಲು ಗೆದ್ದರೆ IPL ನಡೆಯೋದು ಬಹುತೇಕ ಕನ್ಫರ್ಮ್​ ಆದಂತೆ. ಇಂಗ್ಲೆಂಡ್​-ಭಾರತ ಟೆಸ್ಟ್​ ಸರಣಿ ಆಗಸ್ಟ್​ 4 ರಿಂದ ಸೆಪ್ಟೆಂಬರ್​ 14ರವರೆಗೂ ನಡೆಯಲಿದೆ. ಮರುದಿನ ಅಂದರೆ ಸೆಪ್ಟೆಂಬರ್​ 15ಕ್ಕೇ IPL​ ನಡೆಸೋಕೆ ಕಷ್ಟವಾಗುತ್ತೆ. ಜೊತೆಗೆ ಕ್ವಾರಂಟೀನ್​ ನಿಯಮ ಕೂಡ ಅಡ್ಡಗಾಲಾಗಿದೆ. ಹೀಗಾಗಿ BCCI ಇಂಗ್ಲೆಂಡ್​ ಕ್ರಿಕೆಟ್ ಮಂಡಳಿ ಜೊತೆಗೆ ಮಾತುಕತೆ ನಡೆಸಿದ್ದು, 2 ಮತ್ತು 3ನೇ ಟೆಸ್ಟ್​ ಪಂದ್ಯಕ್ಕೆ ಇರುವ ಅಂತರವನ್ನು ಕಡಿತಗೊಳಿಸಲು ಮನವಿ ಮಾಡಿದೆ. ಒಂದು ವೇಳೆ ಇಂಗ್ಲೆಂಡ್​ ಒಪ್ಪದಿದ್ದರೆ IPL​ ನಡೆಸೋದು ಕಷ್ಟ…!

ಭಾರತದಲ್ಲಿ ವಿಶ್ವಕಪ್​ ಆಯೋಜನೆ ಬಗ್ಗೆಯೂ ಅಂದೇ ನಿರ್ಧಾರ..?
ಭಾರತದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನ ಹೆಚ್ಚಾಗಿದ್ದು, ಇದೇ ಕಾರಣದಿಂದ IPL​ ಅನ್ನೂ ಮುಂದೂಡಲಾಗಿದೆ. ಸದ್ಯ ಇದರ ಕರಿನೆರಳು ಟಿ20 ವಿಶ್ವಕಪ್​ ಮೇಲೂ ಬಿದ್ದಿದ್ದು, ಅನಾಹುತಗಳು ಸಂಭವಿಸೋಕು ಮುನ್ನವೇ ಇಡೀ ಟೂರ್ನಿಯನ್ನು ಭಾರತದಿಂದ UAEಗೆ ಸ್ಥಳಾಂತರಿಸಲು ಒತ್ತಾಯಗಳು ಕೇಳಿ ಬರ್ತಿವೆ. ಮೇ 29ರಂದು ನಡೆಯುವ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲೇ ವಿಶ್ವಕಪ್​ ಅನ್ನು ಸ್ಥಳಾಂತರಿಸಬೇಕೆ, ಬೇಡವೇ ಅನ್ನೋ ನಿರ್ಧಾರ ಕೈಗೊಳ್ಳಲಾಗ್ತದೆ. ಬಳಿಕ ಜೂನ್​ 1ರಂದು ICC ಮಹತ್ವದ ಸಭೆ ನಡೆಸಲಿದ್ದು, ತಮ್ಮ ನಿರ್ಧಾರವನ್ನು ಪ್ರಕಟಿಸಲಿದೆ.

UAEನಲ್ಲೇ ನಡೆಯಲಿದೆ ಐಪಿಎಲ್​, ವಿಶ್ವಕಪ್​ ಟೂರ್ನಿಗಳು..?
ವಿಶ್ವಕಪ್​​ಗೂ ಭಾರತವೇ ಆತಿಥ್ಯ ವಹಿಸಿರುವ ಕಾರಣ, ಐಪಿಎಲ್​-ವಿಶ್ವಕಪ್​ ಟೂರ್ನಿಯನ್ನು ಸಕ್ಸಸ್​​ಫುಲ್​ ಆಗಿ ನಡೆಸೋಕೆ ರಣತಂತ್ರ ರೂಪಿಸಿದೆ. ಟಿ20 ವಿಶ್ವಕಪ್​​ ಅಕ್ಟೋಬರ್​ 18ರಿಂದ ಪ್ರಾರಂಭವಾಗಲಿದೆ. ಅತ್ತ 2ನೇ ಹಂತದ IPL​ ಅಕ್ಟೋಬರ್ 15ಕ್ಕೆ ಮುಗಿಯಲಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಮತ್ತೊಂದು ದೇಶಕ್ಕೆ ಮರಳಿ, ಆಟಗಾರರು ಕ್ವಾರಂಟೀನ್​ಗೆ ಒಳಪಡುವುದು ಅಸಾಧ್ಯ. ಹೀಗಾಗಿ ಎರಡೂ ಟೂರ್ನಿಗಳನ್ನು ಒಂದೆಡೆಯೇ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಈ ಡಿಸಿಷನ್​ಗೆ ಐಸಿಸಿ ಅಂಕಿತ ಹಾಕುವ ಸಾಧ್ಯತೆಯೂ ಇದೆ.

ಒಟ್ನಲ್ಲಿ ಬಹುದಿನಗಳಿಂದ ಕಾಯ್ತಿದ್ದ ಕ್ರಿಕೆಟ್​ ಫ್ಯಾನ್ಸ್​ಗೆ ಸಿಹಿ ಸುದ್ದಿಯೇನೋ ಸಿಕ್ಕಿದೆ. ಆದರೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸಲು ಮುಂದಾಗಿರೋ ಬಿಸಿಸಿಐ ದಾಳಕ್ಕೆ, ICC ಒಪ್ಪಿಗೆ ನೀಡುತ್ತೋ ಇಲ್ಲವೋ ಎಂಬುದು ಕಾದುನೋಡಬೇಕಷ್ಟೆ.!!

The post ಕ್ರಿಕೆಟ್​ ಫ್ಯಾನ್ಸ್​ಗೆ ಗುಡ್​​ನ್ಯೂಸ್​..!- ಮತ್ತೆ ಐಪಿಎಲ್ ನಡೆಯೋದು ಯಾವಾಗ ಗೊತ್ತಾ..? appeared first on News First Kannada.

Source: newsfirstlive.com

Source link