ಕ್ವಾಡ್​ ಶಕ್ತಿಯಿಂದ ಇಂಡೊ ಪೆಸಿಫಿಕ್ ವಲಯದಲ್ಲಿ ಸುಧಾರಣೆ: ಟೊಕಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯ | Quad Makes Indo Pacific Better PM Modi At Tokyo Summit on the backdrop of aggression from China


ಕ್ವಾಡ್​ ಶಕ್ತಿಯಿಂದ ಇಂಡೊ ಪೆಸಿಫಿಕ್ ವಲಯದಲ್ಲಿ ಸುಧಾರಣೆ: ಟೊಕಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯ

ಜಪಾನ್​ನ ಟೋಕಿಯೊದಲ್ಲಿ ನಡೆಯುತ್ತಿರುವ ಕ್ವಾಡ್ ಸಮಾವೇಶದಲ್ಲಿ ಪಾಲ್ಗೊಂಡಿರುವ ನಾಯಕರು

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಮತ್ತು ಆಸ್ಟ್ರೇಲಿಯಾದ ನೂತನ ಪ್ರಧಾನಿ ಅಂತೋನಿ ಅಲ್​ಬೆನೀಸ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಟೋಕಿಯೊ: ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಟೋಕಿಯೊದಲ್ಲಿ ಇಂದು ಎರಡನೇ ಬಾರಿಗೆ ಮಾತುಕತೆ ನಡೆಸಿದರು. ಕ್ವಾಡ್ ಸಮಾವೇಶದಲ್ಲಿ (Quad Summit) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸದಸ್ಯ ರಾಷ್ಟ್ರಗಳು ಪರಸ್ಪರ ನಂಬಿಕೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಪ್ರಜಾಪ್ರಭುತ್ವಕ್ಕೆ ಹೊಸ ಬಲ ಸಿಗುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಮತ್ತು ಆಸ್ಟ್ರೇಲಿಯಾದ ನೂತನ ಪ್ರಧಾನಿ ಅಂತೋನಿ ಅಲ್​ಬೆನೀಸ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಕೊವಿಡ್-19ರ ಕಾರಣದಿಂದ ಉಂಟಾದ ಹಲವು ಸಂಕಷ್ಟಗಳ ನಡುವೆಯೂ ಸದಸ್ಯ ರಾಷ್ಟ್ರಗಳು ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೆಚ್ಚಿಸಿದವು. ಲಸಿಕೆಗಳ ವಿತರಣೆ, ಹವಾಮಾನ ವೈಪರಿತ್ಯದ ಪರಿಣಾಮ ಕಡಿಮೆ ಮಾಡುವುದು, ಪೂರೈಕೆ ಸರಪಳಿಯನ್ನು ಸುಸ್ಥಿರವಾಗಿ ಕಾಪಾಡುವುದು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳು ಗಮನಾರ್ಹ ಕೊಡುಗೆ ನೀಡಿದವು. ಈ ಉಪಕ್ರಮಗಳು ಇಂಡೊ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ನೆರವಾದವು ಎಂದು ಮೋದಿ ಹೇಳಿದರು.

ಬಿಡೆನ್, ಕಿಶಿದಾ ಮತ್ತು ಅಲ್​ಬೆನೀಸ್ ಅವರೊಂದಿಗೆ ಮೋದಿ ಅವರು ಪ್ರತ್ಯೇಕವಾಗಿ ಮಾತುಕತೆಗಳನ್ನು ನಡೆಸಲಿದ್ದಾರೆ. ಚೀನಾ ಮತ್ತು ಇತರ ಕ್ವಾಡ್ ಸದಸ್ಯ ರಾಷ್ಟ್ರಗಳೊಂದಿಗೆ ಸಂಬಂಧ ಹದಗೆಡುತ್ತಿರುವ ಹೊತ್ತಿನಲ್ಲಿ ನಡೆಯುತ್ತಿರುವ ಸಭೆಯು ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಚೀನಾ ದೇಶವು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ವ್ಯಾಪಾರ ವಹಿವಾಟಿನ ರೀತಿಗಳಿಗೆ ಹಲವು ಬಾರಿ ಸವಾಲು ಹಾಕಿದೆ.

ಭಾರತ, ಅಮೆರಿಕ ಮತ್ತು ಇತರ ಹಲವು ಜಾಗತಿಕ ಶಕ್ತಿಗಳು ವ್ಯಾಪಾರ ಮತ್ತು ವಹಿವಾಟಿಗೆ ಮುಕ್ತ ಅವಕಾಶ ಇರಬೇಕು ಎಂದು ಪ್ರತಿಪಾದಿಸುತ್ತಿವೆ. ಇಂಡೊ-ಪೆಸಿಫಿಕ್ ವಲಯದಲ್ಲಿ ಚೀನಾದ ಮಿಲಿಟರಿ ಶಕ್ತಿ ಮತ್ತು ದಬ್ಬಾಳಿಕೆ ಮನೋಭಾವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಕ್ವಾಡ್ ಸಮಾವೇಶಕ್ಕೆ ಮಹತ್ವ ಬಂದಿದೆ.

TV9 Kannada


Leave a Reply

Your email address will not be published. Required fields are marked *