ಬೆಂಗಳೂರು: ಇಂದಿನ‌ ಪರಿಸ್ಥಿತಿಗೆ ಸೋಕಾಲ್ಡ್ ಹುಲಿ, ಬಾಹುಬಲಿಯನ್ನ ಸಿಎಂ ಖುರ್ಚಿ ಮೇಲೆ ಕೂರಿಸಿದ್ದೇ ಕಾರಣ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಈಗ ರಾಜ್ಯದ ಎದುರಿಗೆ ಇರುವುದು ನಾಯಕತ್ವದ ಪ್ರಶ್ನೆಯೋ? ಅಥವಾ ಜನರ ಹಿತದ ಪ್ರಶ್ನೆಯೋ? ರಾಜ್ಯದಲ್ಲಿ ಚಿತೆಗಳಿಗೆ ಹಚ್ಚಿದ ಜ್ವಾಲೆ ಇನ್ನೂ ಆರಿಲ್ಲ, ಅದು ಎಂದು ಆರುತ್ತದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಕ್ಷುಲ್ಲಕ ರಾಜಕಾರಣ ಅಗತ್ಯವಿದೆಯೇ? ಅಂತ ಹೆಚ್​.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರ.

ರಾಜ್ಯ ಸರ್ಕಾರ ಕೋವಿಡ್‌ ಸ್ಥಿತಿಯನ್ನು ನಿಭಾಯಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇನ್ನಾದರೂ ಸರ್ಕಾರ ಈ ಬಗ್ಗೆ ತಿದ್ದಿಕೊಳ್ಳಲಿದೆ ಎಂದು ನಾವು ಭಾವಿಸಿದ್ದೆವು. ಆದ್ರೆ, ಇಂಥ ಸಂದರ್ಭದಲ್ಲಿ ಸರ್ಕಾರವನ್ನ ಟೀಕಿಸಿ ರಾಜಕೀಯ ಮಾಡುವುದು ಬೇಡ ಎಂದು ಜೆಡಿಎಸ್‌ ನಿರ್ಧರಿಸಿತ್ತು. ಆದರೆ, ಬಿಜೆಪಿ ಅಧಿಕಾರದ ಲಾಲಸೆ ಪ್ರದರ್ಶಿಸಿದರೆ ಹೇಗೆ ಸುಮ್ಮನಿರುವುದು?

ಬಿಎಸ್‌ ಯಡಿಯೂರಪ್ಪನವರು ತಾವು ಖರೀದಿಸಿ ತಂದ ಕುದುರೆಗಳ ಮೇಲೆ ತಾವೇ ಸವಾರಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ. ಅದರ ಬದಲಿಗೆ ‘ಸೋಕಾಲ್ಡ್‌ ಹುಲಿ, ಬಾಹುಬಲಿ‘ ಮುಂತಾದವರನ್ನು ಮುಖ್ಯಮಂತ್ರಿ ಸೀಟಿನ ಮೇಲೆ ಕೂರಿಸಿದ್ದೇ ಸದ್ಯದ ರಾಜಕೀಯ ದುಸ್ಥಿತಿಗೆ ಕಾರಣ. ಇದು ಯಡಿಯೂರಪ್ಪನವರ ಸ್ವಯಂಕೃತ ಅಪರಾಧ. ಆರೋಗ್ಯ ತುರ್ತು ಪರಿಸ್ಥಿತಿಯ ನಡುವೆ ಕನ್ನಡ, ಕರ್ನಾಟಕದ ಅಸ್ಮಿತೆ ಪ್ರಶ್ನೆ ಮಾಡುವಂಥ ಘಟನೆಗಳು ಒಂದರ ಹಿಂದೊಂದರಂತೆ ನಡೆದವು. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್‌ ಏನು ಮಾಡಿದವು? ಇವರೆಲ್ಲ ರಾಜಕೀಯ ಮಾಡುತ್ತಿರುವುದು ಕರ್ನಾಟಕದಲ್ಲೇ ಅಲ್ಲವೇ? ಆದರೆ, ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಇವರೆಲ್ಲ ಅದ್ಯಾವ ಬಿಲದಲ್ಲಿ ಅಡಗಿದ್ದರು? ಅಂತ ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಪ್ರಶ್ನೆ ಮಾಡುತ್ತಾ ಆಕ್ರೋಶ ಹೊರಹಾಕಿದ್ದಾರೆ.

The post ಖರೀದಿಸಿ ತಂದ ಕುದುರೆಗಳ ಮೇಲೆ ತಾವೇ ಸವಾರಿ ಮಾಡಿದ್ರೆ ಬಿಎಸ್​ವೈಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ appeared first on News First Kannada.

Source: newsfirstlive.com

Source link