ಖರ್ಗೆ ಶೂನ್ಯದಿಂದ ಸಾವಿರ ಕೋಟಿಯ ಒಡೆಯರಾಗಿದ್ದಾರೆ, ಅಷ್ಟೊಂದು ಹಣ ಗಳಿಸಲು ಹೇಗೆ ಸಾಧ್ಯ?: ನಳಿನ್ ಕುಮಾರ್ ಕಟೀಲ್ | Katil’s barrage against Mallikarjun Kharge


ಖರ್ಗೆ ಶೂನ್ಯದಿಂದ ಸಾವಿರ ಕೋಟಿಯ ಒಡೆಯರಾಗಿದ್ದಾರೆ, ಅಷ್ಟೊಂದು ಹಣ ಗಳಿಸಲು ಹೇಗೆ ಸಾಧ್ಯ?: ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಖರ್ಗೆ ಶೂನ್ಯದಿಂದ ಸಾವಿರ ಕೋಟಿಯ ಒಡೆಯರಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಶೂನ್ಯದಿಂದ ಸಾವಿರ ಕೋಟಿಯ ಒಡೆಯರಾಗಿದ್ದಾರೆ. ಖರ್ಗೆ ಅವರಿಗೆ ಅಷ್ಟು ಹಣ ಗಳಿಸಲು ಹೇಗೆ ಸಾಧ್ಯ ಆಯ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin kumar kateel) ಪ್ರಶ್ನಿಸಿದ್ದಾರೆ. ಇಂದು ನಳಿನ್ ಕುಮಾರ್ ಕಟೀಲ್ ಅವರು ಕಲಬುರಗಿ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಲ್ಲಿ ಭ್ರಷ್ಟಾಚಾರ (Corruption) ಹೆಚ್ಚಾಗಿ ನಡೆದಿದೆ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಕಟೀಲ್, ರಾಜ್ಯ ಕಾಂಗ್ರೆಸ್​​​​ನಲ್ಲಿ ಒಳ ಜಗಳ ಆರಂಭವಾಗಿದೆ. ಸಿಎಂ ಆಗಲು ಇಬ್ಬರು ಶರ್ಟ್​ ಹೊಲಿಸಿ ಇಟ್ಟಿದ್ದಾರೆ. ಬಿಜೆಪಿ ವ್ಯಕ್ತಿ ಪೂಜೆ ಮಾಡಲ್ಲಾ, ವಿಚಾರಧಾರೆ, ಸಿದ್ದಾಂತವನ್ನು ಪೂಜೆ ಮಾಡುತ್ತದೆ. ಇಂಡಿಯಾ ಅಂದ್ರೆ ಇಂಡಿಯಾ ಅನ್ನುವಂತಿತ್ತು. ಆದರೆ, ಇದೀಗ ಕಾಂಗ್ರೆಸ್ ವಿರೋಧ ಪಕ್ಷವಾಗಲು ನಾಲಾಯಕ್ ಪಾರ್ಟಿಯಾಗಿದೆ. ಭಾರತ ಇದೀಗ ಕಾಂಗ್ರೆಸ್ ಮುಕ್ತವಾಗಿದೆ ಎಂದರು.

ರಾಜ್ಯದ ಹಲವು ಗಲಾಟೆಗಳ ಹಿಂದೆ ಕಾಂಗ್ರೆಸ್

ರಾಜ್ಯದಲ್ಲಿ ನಡೆದ ಹಲವು ಗಲಬೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದ ಹಲವು ಗಲಾಟೆ ಪ್ರಕರಣಗಳ ಹಿಂದೆ ಕಾಂಗ್ರೆಸ್ ಇದೆ, ಹುಬ್ಬಳಿ ಗಲಬೆಯ ಹಿಂದೆ ಕಾಂಗ್ರೆಸ್ ಇದೆ. ಶಿವಮೊಗ್ಗ ಗಲಾಟೆಯ ಹಿಂದೆ ಕಾಂಗ್ರೆಸ್ ಇದೆ. ರಾಜ್ಯದಲ್ಲಿ ಕಾಂಗ್ರೆಸ್​ನವರು ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ. ಹೈದರಾಬಾದ್​ನಲ್ಲಿ ದಲಿತ ವ್ಯಕ್ತಿಯ ಕೊಲೆ ಆಗಿದೆ. ಈ ಬಗ್ಗೆ ಕಾಂಗ್ರೆಸ್​ನವರು ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ, ಭಯೋತ್ಪಾದನೆ, ಪರಿವಾರ ಇವು ಮೂರು ಕಾಂಗ್ರೆಸ್ ಈ ದೇಶಕ್ಕೆ ನೀಡಿದ ಕೊಡುಗೆಗಳಾಗಿವೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ. ಪ್ರಧಾನಿ ನರೇಂದ್ರ ಮೋದಿಯವರು ಆಡಳಿದಲ್ಲಿ ಭಯೋತ್ಪಾದನೆ ನಿಗ್ರಹವಾಗಿದೆ ಎಂದರು.

ದೇಶ ಭಕ್ತಿ ಕುರಿತ ಎಲ್ಲಾ ಪಾಠಗಳನ್ನು ಕಲಿಸುವ ಅಗತ್ಯ ಇದೆ

ಪಠ್ಯದಲ್ಲಿ RSS​ ಸಂಸ್ಥಾಪಕರ ಭಾಷಣ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಸಿದ ಕಟೀಲ್, ದೇಶಭಕ್ತಿ ಕುರಿತ ಎಲ್ಲಾ ಪಾಠಗಳನ್ನು ಕಲಿಸುವ ಅಗತ್ಯ ಇದೆ ಎಂದರು. ಬಜರಂಗದಳದಿಂದ ತ್ರಿಶೂಲ ದೀಕ್ಷೆ ಬಗ್ಗೆ ಮಾತನಾಡಿ, ಎಲ್ಲಿಯೂ ಶಾಲಾ ಮಕ್ಕಳಿಗೆ ತರಬೇತಿ ನೀಡಿಲ್ಲ. ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ನೀಡಲಾಗುತ್ತದೆ. ಅಭ್ಯಾಸ ವರ್ಗದಲ್ಲಿ ಬೇರೆ ಬೇರೆ ರೀತಿಯ ತರಬೇತಿ ನೀಡಲಾಗುತ್ತದೆ. ತರಬೇತಿಗಾಗಿ ಶಾಲೆಯ ಆವರಣ ಬಳಸಿಕೊಂಡಿರಬಹುದು. ಇದರಲ್ಲಿ ತಪ್ಪು ಏನೂ ಇಲ್ಲ, ಆದರೂ ಸರ್ಕಾರ ನೋಟಿಸ್ ನೀಡಿದೆ ಎಂದರು.

ನ್ಯಾಯಾಲಯದ ತೀರ್ಮಾನದಂತೆ ಸರ್ವೇಕ್ಷಣೆ

ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯರು, ನ್ಯಾಯಾಲಯದ ತೀರ್ಮಾನದಂತೆ ಸರ್ವೇಕ್ಷಣೆ ನಡೆದಿದೆ. ಏನೆಲ್ಲಾ ಅಲ್ಲಿ ಸಿಗುತ್ತದೆ, ನ್ಯಾಯಾಲಯ ಏನು ಹೇಳುತ್ತದೆ ನೋಡೋಣ. ಕೇಂದ್ರ ಸರ್ಕಾರ ಸಂವಿಧಾನಾತ್ಮಕವಾಗಿ ನಡೆಯುತ್ತಿದೆ. ದತ್ತಪೀಠದಲ್ಲಿ ನಡೆದ ಬೆಳವಣಿಗೆಯನ್ನು ಸರ್ಕಾರ ಸೂಕ್ಷವಾಗಿ ಗಮನಿಸುತ್ತಿದೆ. ಘಟನೆ ಪರಿವರ್ತನೆಯಾದರೆ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತದೆ ಎಂದರು. ಅಲ್ಲದೆ, ಮಸೀದಿಗಳಲ್ಲಿ ರಾಷ್ಟ್ರಗೀತೆ ಕಡ್ಡಾಯದ ಬಗ್ಗೆ ಮಾತನಾಡಿ, ಎಲ್ಲಕಡೆ ರಾಷ್ಟ್ರಗೀತೆ ಹಾಡಬೇಕು, ಅದರಲ್ಲಿ ತಪ್ಪೇನಿದೆ. ಈ ವಿವಾದಗಳು ಬಿಜೆಪಿ ಸರ್ಕಾರ ಎಬ್ಬಿಸಿರೋದಲ್ಲ ಎಂದರು.

TV9 Kannada


Leave a Reply

Your email address will not be published. Required fields are marked *