ಖಾರಿಫ್ ಋತುವಿನಲ್ಲಿ ರಸಗೊಬ್ಬರಕ್ಕೆ ₹60,939 ಕೋಟಿ ಸಬ್ಸಿಡಿ; ಕೇಂದ್ರ ಸಂಪುಟ ಸಭೆ ಒಪ್ಪಿಗೆ | Kharif season Subsidy approved by the Cabinet is Rs.60939 crore for NBS


ಖಾರಿಫ್ ಋತುವಿನಲ್ಲಿ ರಸಗೊಬ್ಬರಕ್ಕೆ ₹60,939 ಕೋಟಿ ಸಬ್ಸಿಡಿ; ಕೇಂದ್ರ ಸಂಪುಟ ಸಭೆ ಒಪ್ಪಿಗೆ

ಪ್ರಾತಿನಿಧಿಕ ಚಿತ್ರ

ದೆಹಲಿ: ಪೂರೈಕೆ ಸರಪಳಿಯ ಅಡಚಣೆಗಳು ಮತ್ತು ದುಬಾರಿ ಕಚ್ಚಾ ಸಾಮಗ್ರಿಗಳಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಿಂದ ರೈತರನ್ನು ರಕ್ಷಿಸಲು ಏಪ್ರಿಲ್​​ನಿಂದ ಸೆಪ್ಟೆಂಬರ್​​ ವರೆಗಿರುವ ಶರತ್ಕಾಲ (ಖಾರಿಫ್) ಋತುವಿನಲ್ಲಿ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ (Nutrient Based Subsidy-NBS) ದರಗಳನ್ನು ಸಂಪುಟ ಸಭೆ ಅನುಮೋದಿಸಿದೆ. ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದಿಸಿದ ಪೋಷಕಾಂಶ ಆಧಾರಿತ ಸಬ್ಸಿಡಿಯು ರೂ. 60,939.23 ಕೋಟಿ ಆಗಿದ್ದು, ಇದರಲ್ಲಿ ಸ್ಥಳೀಯ ಉತ್ಪಾದನೆಗೆ ಬೆಂಬಲ ಜೊತೆಗೆ ಸರಕು ಸಾಗಣೆ ಸಬ್ಸಿಡಿ, ದೇಶೀಯ ರಸಗೊಬ್ಬರ ಉತ್ಪಾದನೆ ಹಾಗೂ ಡಿಎಪಿಯ ಆಮದುಗಳಿಗೆ ಬೆಂಬಲ ಕೂಡ ಸೇರಿದೆ.ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur)  ಅವರು ಸಬ್ಸಿಡಿ ಕೇವಲ ಖಾರಿಫ್ ಅವಧಿಗೆ (Kharif season) ಮಾತ್ರ ಎಂದು ಹೇಳಿದ್ದಾರೆ. ಏತನ್ಮಧ್ಯೆ 2021-2022 ರಲ್ಲಿಇದು ಇಡೀ ವರ್ಷಕ್ಕೆ 57,150 ಕೋಟಿ ರೂ ಆಗಿತ್ತು. ಡಿ-ಅಮೋನಿಯಂ ಫಾಸ್ಫೇಟ್ (DAP) ಮತ್ತು ಅದರ ಕಚ್ಚಾ ವಸ್ತುಗಳ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಹೆಚ್ಚಳವನ್ನು ಪ್ರಾಥಮಿಕವಾಗಿ ಕೇಂದ್ರ ಸರ್ಕಾರವು ಬರಿಸಿಕೊಳ್ಳುತ್ತದೆ. ಪ್ರತಿ ಚೀಲಕ್ಕೆ ಕಳೆದ ವರ್ಷ ನೀಡಿರುವ ರೂ.1650 ರ ಡಿಎಪಿ ಸಬ್ಸಿಡಿ ಬದಲಿಗೆ ಈ ವರ್ಷ ರೂ. 2501 ಗಳ ಸಹಾಯಧನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಕಳೆದ ವರ್ಷದ ಸಬ್ಸಿಡಿ ದರಗಳಿಗಿಂತ ಶೇ 50 ಅಧಿಕವಾಗಿದೆ. ಡಿಎಪಿ ಮತ್ತು ಅದರ ಕಚ್ಚಾ ವಸ್ತುಗಳ ಬೆಲೆಗಳಲ್ಲಿ ಹೆಚ್ಚಳವು ಅಂದಾಜು ಶೇ 80ರ ವ್ಯಾಪ್ತಿಯಲ್ಲಿದೆ. ಅಗತ್ಯವಿದ್ದರೆ, ಸಬ್ಸಿಡಿಯನ್ನು ಖಾರಿಫ್ ಅವಧಿಯ ನಂತರ ವಿಸ್ತರಿಸಬಹುದು ಎಂದು ಠಾಕೂರ್ ಹೇಳಿದರು.

ರಸಗೊಬ್ಬರ ತಯಾರಕರು/ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಯೂರಿಯಾ ಮತ್ತು 25 ದರ್ಜೆಯ ಪಿ ಆಂಡ್ ಕೆ ರಸಗೊಬ್ಬರಗಳನ್ನು ಲಭ್ಯವಾಗುವಂತೆ ಸರ್ಕಾರ ವ್ಯವಸ್ಥೆ ಮಾಡುತ್ತದೆ. ಈ ಯೋಜನೆಯ ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಪಿ ಆಂಡ್ ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 2010 ಏಪ್ರಿಲ್  1  ರಿಂದ ಎನ್.ಬಿ.ಎಸ್. ಯೋಜನೆಯಡಿಯಲ್ಲಿ ಸರ್ಕಾರ ನಿಯಂತ್ರಿಸುತ್ತಿದೆ. ಈ ಮೂಲಕ ಕೈಗೆಟಕುವ ಬೆಲೆಯಲ್ಲಿ ರೈತರಿಗೆ ಪಿ ಆಂಡ್ ಕೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ಗಳ ಅಂತರಾಷ್ಟ್ರೀಯ ಬೆಲೆಗಳಲ್ಲಿ ಹೆಚ್ಚಳ, ಗೊಬ್ಬರ ಮತ್ತು ಕಚ್ಚಾವಸ್ತುಗಳ ಒಳಹರಿವಿನ ವೆಚ್ಚದಲ್ಲಿ ಆಗಿರುವ ಹೆಚ್ಚಳದ ದೃಷ್ಟಿಯಿಂದ, ಡಿಎಪಿ ಸೇರಿದಂತೆ ಪಿ ಆಂಡ್ ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ ಹೆಚ್ಚಿದ ಬೆಲೆಗಳನ್ನು ಅಧಿಕ ಸಬ್ಸಿಡಿ ಮೂಲಕ ಕಡೆಮೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅನುಮೋದಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗುವುದು, ಇದರಿಂದ ಅವರು ಅಧಿಕ ಬೆಲೆಯ ರಸಗೊಬ್ಬರಗಳನ್ನು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಪೂರೈಕೆ ಮಾಡಬಹುದು.

TV9 Kannada


Leave a Reply

Your email address will not be published.