ಕಾರವಾರ: ಹೊನ್ನಾವರದ ಕಾಸರಕೋಡಿನಲ್ಲಿ ಮೀನುಗಾರರು ಸಾಮೂಹಿಕ ಆತ್ಮಹತ್ಯೆಗೆ ಪ್ರಯತ್ನ ಮಾಡುವ ಮೂಲಕ ಖಾಸಗಿ ಬಂದರು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಖಾಸಗಿ ಬಂದರು ನಿರ್ಮಾಣಕ್ಕೆ ವಿರೋಧ ಏಕೆ? ಮೀನುಗಾರರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೇಕೆ? ವಿವರ ಇಲ್ಲಿದೆ.

ಇಂದು ನಡೆದಿದ್ದೇನು?
ಇಂದು ಹೊನ್ನಾವರ ತಾಲೂಕಿನ ಕಾಸರಕೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ ಟೊಂಕಾ ಸಮುದ್ರ ತೀರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜಿಸಿತು. ಕೈಯಲ್ಲಿ ಲಾಟಿ ಹಿಡಿದ 500ಕ್ಕೂ ಹೆಚ್ಚು ಪೊಲೀಸರು ಗ್ರಾಮದವರನ್ನು ಯಾವುದೇ ಮುನ್ಸೂಚನೆ ನೀಡದೇ ಸ್ಥಳದಿಂದ ಚದುರಿಸುವ ಕೆಲಸ ಮಾಡಿದರು. ಸ್ಥಳೀಯ ಆಡಳಿತದ ದೌರ್ಜನ್ಯ ಪ್ರಶ್ನಿಸಿ ಅಬ್ಬರಿಸಿ ಬರುತ್ತಿರುವ ಸಮುದ್ರದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಪ್ರಯತ್ನಿಸಿದ ಮೀನುಗಾರರನ್ನು ಪೊಲೀಸರು ರಕ್ಷಿಸಿದರು.

ಹಿನ್ನೆಲೆ ಏನು?
ಹೊನ್ನಾವರ ತಾಲೂಕಿನ ಕಾಸರಕೋಡು ಗ್ರಾಮದ ಟೊಂಕದಲ್ಲಿ ಆಂದ್ರ ಮೂಲದ ಖಾಸಗಿ ಮಾಲೀಕತ್ವದ ಹೊನ್ನಾವರ ಪೋರ್ಟ ಕಂಪನಿ ಖಾಸಗಿ ಬಂದರು ನಿರ್ಮಾಣಕ್ಕಾಗಿ 600 ಕೋಟಿ ವೆಚ್ಚದಲ್ಲಿ ಬಂದರು ಕಾಮಗಾರಿಗಾಗಿ 93 ಎಕರೆ ಪ್ರದೇಶವನ್ನು 10 ವರ್ಷದ ಹಿಂದೆ ರಾಜ್ಯ ಸರ್ಕಾರದ ಬಂದರು ಇಲಾಖೆಯಿಂದ ಪಡೆದಿದೆ. ಇದರಂತೆ ಕಾಸರಕೋಡು ಮೀನುಗಾರಿಕಾ ಬಂದರು ಪ್ರೇಶದಲ್ಲಿ ಹೂಳು ತೆಗೆದು ಜಟ್ಟಿ ನಿರ್ಮಿಸಿ ಖಾಸಗಿ ಬಂದರು ಕಾಮಗಾರಿ ಪ್ರಾರಂಭ ಮಾಡಬೇಕು. ಆದರೆ ಹೀಗೆ ಮಾಡದೇ ಮೀನುಗಾರರು ವಾಸವಿರುವ ಹಾಗೂ ಅರಣ್ಯ ಭೂಮಿ ಸೇರಿ ಒಟ್ಟು 235 ಎಕರೆ ಪ್ರದೇಶವನ್ನು ರಾಜಕೀಯ ಪ್ರಭಾವದ ಮುಲಕ ಪಡೆದುಕೊಳ್ಳಲು ಹೊರಟಿದ್ದು, ಟೊಂಕಾದಲ್ಲಿ ಮೀನುಗಾರರಿಗೆ ಯಾವುದೇ ಮಾಹಿತಿ ನೀಡದೇ ತೆರವುಗೊಳಿಸಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ ನಲ್ಲಿ ಮೀನುಗಾರರು ಸ್ಟೇ ಕೂಡ ತಂದಿದ್ದರು. ಇನ್ನು ಖಾಸಗಿ ಬಂದರು ನಿರ್ಮಾಣ ಆಗಬಾರದು ಎಂದು ಒಂದು ವರ್ಷದಿಂದ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಆದರೆ ಇಂದು ಏಕಾಏಕಿ ಗ್ರಾಮದಲ್ಲಿ ವಾಸವಿರುವ ಮೀನುಗಾರರಿಗೆ ಯಾವುದೇ ಮಾಹಿತಿ ನೀಡದೇ ತೆರವು ಕಾರ್ಯಕ್ಕೆ ಖಾಸಗಿ ಕಂಪನಿ ಜಿಲ್ಲಾಡಳಿತದ ಸಹಕಾರದಲ್ಲಿ ಮುಂದಾಗಿದೆ.

ಖಾಸಗಿ ಬಂದರು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ತಲೆ ತಲಾಂತರದಿಂದ 400ಕ್ಕೂ ಹೆಚ್ಚು ಮೀನುಗಾರ ಕುಟುಂಬಗಳು ವಾಸಿಸುತ್ತಿವೆ. ಇದರ ಜೊತೆಗೆ ಈ ಭಾಗದಲ್ಲಿ ದೋಣಿಗಳನ್ನು ನಿಲ್ಲಿಸುವ ಸ್ಥಳ ಕೂಡ ಆಗಿದೆ. ಇನ್ನು ಈ ಭಾಗದಲ್ಲಿ ದಾಖಲೆ ಹೊಂದಿದ ಹಾಗೂ ಒತ್ತುವರಿ ಮಾಡಿಕೊಂಡು ಬದುಕು ಕಟ್ಟಿಕೊಂಡ ಅನೇಕ ಕುಟುಂಬಗಳಿವೆ. ಹೀಗಿರುವಾಗ ಖಾಸಗಿ ಕಂಪನಿ ತನ್ನ ಲಾಭಕ್ಕೆ ಪ್ರಭಾವ ಬಳಸಿ ಸಾವಿರಾರು ಮೀನುಗಾರರನ್ನು ಬೀದಿಗೆ ನಿಲ್ಲಿಸಲು ಹೊರಟಿದೆ.

ಒಂದು ವೇಳೆ ತೆರವು ಕಾರ್ಯಾಚರಣೆ ಮುಂದುವರಿದಲ್ಲಿ ಮೀನುಗಾರರು ವಿಧಾನಸೌಧ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ. ಸದ್ಯ ಮೀನುಗಾರರ ಪ್ರತಿಭಟನೆಗೆ ಜೆಸಿಬಿಗಳು ಸದ್ದು ನಿಲ್ಲಿಸಿದೆ. ಒಂದು ವೇಳೆ ರಾಜಕೀಯ ಮೇಲಾಟದಲ್ಲಿ ಮತ್ತೆ ಮೀನುಗಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಸಾಗಿದಲ್ಲಿ ದೊಡ್ಡ ದುರಂತ ನೆಡೆದು ಹೋಗುವ ಎಚ್ಚರಿಕೆಯನ್ನು ಮೀನುಗಾರರು ನೀಡಿದ್ದಾರೆ.

The post ಖಾಸಗಿ ಬಂದರು ನಿರ್ಮಾಣಕ್ಕೆ ವಿರೋಧ- ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ಮುಂದಾದ ಮೀನುಗಾರರು appeared first on Public TV.

Source: publictv.in

Source link