ಖ್ಯಾತ ನಟಿ ಶ್ರುತಿ ಹಾಸನ್​ ಹೆಗಲೇರಲಿದೆ ಬಿಗ್​ ಬಾಸ್​ ನಿರೂಪಣೆ? | Shruti Haasan to Host Bigg Boss Tamil 5 after Kamal Hassan tested positive

ಖ್ಯಾತ ನಟಿ ಶ್ರುತಿ ಹಾಸನ್​ ಹೆಗಲೇರಲಿದೆ ಬಿಗ್​ ಬಾಸ್​ ನಿರೂಪಣೆ?

ಶ್ರುತಿ ಹಾಸನ್

ನಟ ಕಮಲ್​ ಹಾಸನ್​ (Kamal Hassan) ಅವರಿಗೆ ಕೊವಿಡ್​ (Covid 19) ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅವರಿಗೆ ಅನಾರೋಗ್ಯ ಆಗಿರುವುದರಿಂದ ‘ವಿಕ್ರಮ್​’ ಸಿನಿಮಾ ಕೆಲಸಗಳು ವಿಳಂಬವಾಗಿದೆ. ಇದರ ಜತೆಗೆ ‘ತಮಿಳು ಬಿಗ್​ ಬಾಸ್​ 5’ ನಿರೂಪಣೆ ಯಾರು ಮಾಡಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿದೆ. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಾಹಿನಿ ಅವರು ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕಳೆದ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಮಲ್​ ಹಾಸನ್​ ಅವರು ಈ ಸೀಸನ್​ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದರು. ಸಿನಿಮಾ ಕೆಲಸ, ಪ್ರವಾಸದ ಮಧ್ಯೆಯೂ ಅವರು ‘ಬಿಗ್​ ಬಾಸ್​’ ಶೂಟಿಂಗ್​ ತಪ್ಪಿಸುತ್ತಿರಲಿಲ್ಲ. ಇದು ನಡೆದುಕೊಂಡು ಬಂದೇ ಇತ್ತು. ಆದರೆ, ಈ ಬಾರಿ ಕಮಲ್​ ಹಾಸನ್​ಗೆ ಕೊವಿಡ್​ ಕಾಣಿಸಿಕೊಂಡಿದೆ. ಇದರಿಂದ ಚೇತರಿಸಿಕೊಳ್ಳೋಕೆ ಎರಡು ವಾರವಾದರೂ ಬೇಕು. ಕೊರೊನಾದಿಂದ ಗುಣಮುಖರಾದರೂ ಏಕಾಏಕಿ ಸಿನಿಮಾ ಕೆಲಸಗಳಿಗೆ ತೆರಳೋಕೆ ಸಾಧ್ಯವಾಗುವುದಿಲ್ಲ. ಸ್ವಲ್ಪ ವಿಶ್ರಾಂತಿ ಪಡೆಯಬೇಕಾಗುತ್ತದೆ. ಹೀಗಾಗಿ, ಬಿಗ್​ ಬಾಸ್​ ನಿರೂಪಣೆಯಿಂದ ಕೆಲ ಕಾಲ ದೂರ ಉಳಿಯುವುದು ಅವರಿಗೆ ಅನಿವಾರ್ಯವಾಗಿದೆ. ಈ ಕಾರಣಕ್ಕೆ ವಾಹಿನಿಯವರು ಪರ್ಯಾಯ ವ್ಯವಸ್ಥೆ ಹುಡುಕಿದ್ದಾರೆ.

ಕಮಲ್​ ಹಾಸನ್​ ಮಗಳು ಶ್ರುತಿ ಹಾಸನ್​ಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ ಎನ್ನಲಾಗುತ್ತಿದೆ. ಕಮಲ್​ ಹಾಸನ್​ ಬರುವವರೆಗೂ ಶ್ರುತಿ ಅವರೇ ಬಿಗ್​ ಬಾಸ್​ ನಿರೂಪಣೆ ನೋಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಶ್ರುತಿ ಅವರು ಸ್ಟಾರ್​ ನಟನ ಮಗಳಾದರೂ ತಮ್ಮದೇ ಟ್ಯಾಲೆಂಟ್​ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಿದೆ. ಹೀಗಾಗಿ, ಶ್ರುತಿಗೆ ಮಣೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವಾಹಿನಿ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ.

ಈಚೆಗಷ್ಟೇ ಕಮಲ್​ ಹಾಸನ್​ ಅಮೆರಿಕಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ಸಣ್ಣ ಪ್ರಮಾಣದ ಕೊವಿಡ್​ ಲಕ್ಷಣಗಳು ಅವರಿಗೆ ಕಾಣಿಸಿಕೊಂಡಿತ್ತು. ಹೀಗಾಗಿ, ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದರು ಕಮಲ್​. ಈ ವೇಳೆ ಕೊರೊನಾ ಪಾಸಿಟಿವ್ ಆಗಿರುವುದು ಖಚಿತಗೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಟ್ವೀಟ್​ ಮಾಡಿದ್ದ ಕಮಲ್​ ‘ಅಮೆರಿಕದಿಂದ ವಾಪಸ್ ಬಂದ ಬಳಿಕ ನನಗೆ ಸಣ್ಣದಾಗಿ ಕೆಮ್ಮು ಆರಂಭವಾಗಿತ್ತು. ಪರೀಕ್ಷೆ ಮಾಡಿಸಿದ ನಂತರ ಇದು ಕೋವಿಡ್-19 ಪಾಸಿಟಿವ್ ಎಂಬುದು ತಿಳಿದುಬಂತು. ನಾನೀಗ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದೇನೆ. ಒಂದು ಅರಿವಾಗಿದ್ದೇನೆಂದರೆ, ಈ ಮಹಾಮಾರಿ ನಮ್ಮನ್ನು ಬಿಟ್ಟು ಇನ್ನೂ ಹೋಗಿಲ್ಲ. ನಾವೆಲ್ಲ ಸುರಕ್ಷಿತವಾಗಿ ಇರಬೇಕಿದೆ’ ಎಂದಿದ್ದರು ಕಮಲ್​.

ಇದನ್ನೂ ಓದಿ: ಕಮಲ್​ ಹಾಸನ್​ ಆರೋಗ್ಯ ಸ್ಥಿತಿ ಈಗ ಹೇಗಿದೆ? ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡಿದ ವೈದ್ಯರು

‘ಬಿಗ್ ಬಾಸ್​ ಸೀಸನ್​ 5’ ಕಮಲ್​ ಹಾಸನ್ ಪಡೆಯುತ್ತಿರೋ ಸಂಭಾವನೆ ಎಷ್ಟು?

TV9 Kannada

Leave a comment

Your email address will not be published. Required fields are marked *