ಬೆಂಗಳೂರು: ಗಂಡ ಹೆಂಡತಿ ಮಧ್ಯೆಯೇ ಅಸಮಧಾನ ಇರುತ್ತದೆ. ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ. ಯಾರ್ಯಾರಿಗೆ ಅಸಮಾಧಾನ ಇದೆಯೋ ಅವರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಚರ್ಚೆ ಮಾಡುತ್ತಾರೆ ಎಂದು ಆರೋಗ್ಯ ಸಚಿವರಾದ ಡಾ.ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್ ಅವರು, ಮುಂದಿನ ವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದಾರೆ. ಅರುಣ್ ಸಿಂಗ್ ರಾಜ್ಯ ಉಸ್ತುವಾರಿಗಳು, ಹಿರಿಯ ರಾಷ್ಟ್ರೀಯ ನಾಯಕರು. ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಗೊಂದಲಗಳಿಗೆ ತೆರೆ ಎಳೆಯುತ್ತಾರೆ. ಅಸಮಾಧಾನ ಸರಿಪಡಿಸಿ ಸಮಾಧಾನ ಮಾಡುತ್ತಾರೆ. ಆಡಳಿತಕ್ಕೆ ಇನ್ನೂ ಯಾವ ರೀತಿ ಚುರುಕು ಮುಟ್ಟಿಸಬೇಕೆಂದು ಚರ್ಚೆ ಮಾಡುತ್ತಾರೆ. ಯಡಿಯೂರಪ್ಪನವರೇ ಮುಂದಿನ ಎರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಎಲ್ಲ ಹಿರಿಯ ನಾಯಕರೂ ಇದನ್ನೇ ಹೇಳಿದ್ದಾರೆ. ನಾಯಕತ್ವದ ಚರ್ಚೆ ಅನಾವಶ್ಯಕ ಎಂದರು. ಇದನ್ನೂ ಓದಿ:ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆ – ಮತ್ತೆ ದೆಹಲಿಗೆ ತೆರಳಿದ ಶಾಸಕ ಬೆಲ್ಲದ್

ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿರುವ ವಿಚಾರವಾಗಿ ಮಾತನಾಡಿ, ತುಂಬಾ ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಬಂದವರು ಮುನ್ನೆಚ್ಚರಿಕೆ ಕ್ರಮ ತಗೋಬೇಕು. ಟೆಸ್ಟಿಂಗ್ ಹೆಚ್ಚು ಮಾಡಿದ್ದೇವೆ. 14ರಿಂದ ಅನ್ಲಾಕ್ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ. ಸೋಂಕು ಇನ್ನೂ ಗಂಭೀರವಾಗಿದೆ. ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ. ಜನ ಎಚ್ಚರಿಕೆಯಿಂದ ಇರಬೇಕು ಕೋವಿಡ್ ನಿಯಮವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಕೆಲವು ಔಷಧ, ಮೆಡಿಕಲ್ ಪರಿಕರಗಳ ಜಿಎಸ್ಟಿಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ ಇದರಿಂದ ಸ್ವಾಭಾವಿಕವಾಗಿ ದರ ಇಳಿಯುತ್ತೆ. ಸರ್ಕಾರಕ್ಕೂ ದರ ಕಮ್ಮಿಯಾಗುತ್ತದೆ. ನಿನ್ನೆ 3.5 ಲಕ್ಷ ಡೋಸ್ ಲಸಿಕೆ ಕೇಂದ್ರದಿಂದ ಬಂದಿದೆ. ಈ ತಿಂಗಳಲ್ಲೇ 80 ಲಕ್ಷ ಡೋಸ್ ಹಾಕುತ್ತೇವೆ. ಇಲ್ಲಿಯವರೆಗೆ 1.68 ಕೋಟಿ ಡೋಸ್ ಹಾಕಿದ್ದೇವೆ. ದೇಶದಲ್ಲಿ ನಮ್ಮ ರಾಜ್ಯ ಆರನೇ ಸ್ಥಾನದಲ್ಲಿದೆ. ನಮಗೆ ಬಂದ ಲಸಿಕೆ ಪೈಕಿ ಶೇ.98ರಷ್ಟು ಲಸಿಕೆ ಕೊಟ್ಟಿದ್ದೇವೆ. ಮುಂದೆ ಕೇಂದ್ರವೇ ನಮಗೆ ಲಸಿಕೆ ಕೊಡಲಿದೆ ಎಂದು ಮಾಹಿತಿ ಹಂಚಿಕೊಂಡರು.  ಇದನ್ನೂ ಓದಿ: ಜೂನ್ 16ಕ್ಕೆ ಅರುಣ್ ಸಿಂಗ್ ರಾಜ್ಯ ಪ್ರವಾಸ ಫಿಕ್ಸ್: ಮೂರು ದಿನಗಳ ಭೇಟಿ ಕುತೂಹಲ

ಅರವಿಂದ್ ಬೆಲ್ಲದ್ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ದೆಹಲಿಗೆ ಹೋಗಿ ಬರುವುದರಲ್ಲಿ ಏನು ವಿಶೇಷ ಇಲ್ಲ. ಏನೇನೋ ಕೆಲಸ ಇರುತ್ತೆ ಅಂತ ದೆಹಲಿಗೆ ಹೋಗ್ತಾರೆ. ದೆಹಲಿಗೆ ಹೋಗಿ ಬರೋದೇ ಅಪರಾಧ ಆದ್ರೆ ನಮ್ಮಂಥೋರು ದೆಹಲಿದೆ ಹೋಗೋದಾ ಬೇಡವಾ ಎಂದು ಯೋಚಿಸ್ಬೇಕಾಗುತ್ತೆ. ನಾನು ದೆಹಲಿಗೆ ಹೋಗಿ ಒಂದೂವರೆ ವರ್ಷ ಆಯ್ತು ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹಂಗಾಮಿ ಉಪಕುಲಪತಿ ನೇಮಕ ಆಗಿದೆ. ರಾಜ್ಯಪಾಲರು ರಾಜೀವ್ ಗಾಂಧಿ ವಿವಿಗೆ ಹಂಗಾಮಿ ಉಪಕುಲಪತಿ ನೇಮಿಸಿದ್ದಾರೆ. ಈ ಬಗ್ಗೆ ನಾನು ಎರಡು ಮೂರು ವಾರಗಳ ಹಿಂದೆ ಭೇಟಿ ಮಾಡಲು ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ಕೋವಿಡ್ ನಿಂದಾಗಿ ರಾಜ್ಯಪಾಲರು ಯಾರ ಭೇಟಿಯೂ ಮಾಡುತ್ತಿಲ್ಲ. ಮೊದಲ ಬಾರಿಗೆ ಖಾಸಗಿ ಕಾಲೇಜಿನ ಒಬ್ಬರು ರಾಜೀವ್ ಗಾಂಧಿ ವಿವಿಗೆ ಹಂಗಾಮಿ ಉಪಕುಲಪತಿಯಾಗಿ ನೇಮಕವಾಗಿದ್ದಾರೆ. ರಾಜೀವ್ ಗಾಂಧಿ ವಿವಿಯಲ್ಲಿ ಯಾರೂ ಹಂಗಾಮಿ ಉಪಕುಲಪತಿ ಇರ್ಲಿಲ್ಲ. ಇದರ ಬಗ್ಗೆ ರಾಜ್ಯಪಾಲರ ಜೊತೆ, ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಈ ನೇಮಕ ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.

The post ಗಂಡ ಹೆಂಡತಿ ಮಧ್ಯೆಯೇ ಅಸಮಾಧಾನ ಇರುತ್ತೆ, ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ – ಸುಧಾಕರ್ appeared first on Public TV.

Source: publictv.in

Source link