ಗಂಧದಗುಡಿ ಟೀಸರ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ರಾಜಮೌಳಿ: ಟ್ವೀಟ್​ ಮೂಲಕ ಶುಭ ಹಾರೈಕೆ | Indian film director rajamouli apprciate the ganadadagudi documentary teaser


ಗಂಧದಗುಡಿ ಟೀಸರ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ರಾಜಮೌಳಿ: ಟ್ವೀಟ್​ ಮೂಲಕ ಶುಭ ಹಾರೈಕೆ

ಗಂಧದಗುಡಿ ಟೀಸರ್​, ಪುನೀತ್​

ಚಂದವನದ ರಾಜಕುಮಾರ ಅಪ್ಪುವಿನ ಕನಸಿನ ಕೂಸು ಗಂಧದಗುಡಿ ಡಾಕ್ಯುಮೆಂಟರಿ ಟೀಸರ್​ ಬಿಡುಗಡೆಯಾಗಿ ಎಲ್ಲಡೆ ಮೆಚ್ಚುಗೆ ಗಳಿಸಿದೆ. ಗಂಧದಗುಡಿ ಟೀಸರ್​ ನೋಡಿ ಬಾಹುಬಲಿ ನಿರ್ದೇಶಕ ರಾಜಮೌಳಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಮಣ್ಣಿನ ಬಗ್ಗೆ ಇಂತಹ ಡಾಕ್ಯುಮೆಂಟರಿ ಮಾಡಿ ಜನರನ್ನು ತಲುಪುವುದು ಅಪ್ಪು ಅವರ ಕನಸಾಗಿತ್ತು. ಅಪ್ಪು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಕನಸು ನನಸಾಗುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ರಾಜಮೌಳಿ ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.

ಸೋಮವಾರ (ಡಿ.6)ರಂದು ಪುನೀತ್​ರಾಜ್​ಕುಮಾರ್​ ಅವರ ನಿರ್ಮಾಣದ ಗಂಧದಗುಡಿ ಸಾಕ್ಷ್ಯಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಕನ್ನಡನಾಡಿನ ಪ್ರಕೃತಿ ಸೌಂದರ್ಯದ ಬಗೆಗೆ ಹಾಗೂ ವನ್ಯ ಜೀವಿಗಳ ಕುರಿತು ಪುನೀತ್​ ರಾಜ್​ಕುಮಾರ್ ಗಂಧದಗುಡಿ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದರು. ನವೆಂಬರ್​.1ರಂದು ಅದನ್ನು ಬಿಡುಗಡೆ ಮಾಡಬೇಕು ಎನ್ನುವ ಕನಸನ್ನೂ ಕಂಡಿದ್ದರು. ಆದರೆ ವಿಧಿಯಾಟ, ನಾಡಿನ ಪ್ರೀತಿಯ ಅಪ್ಪು, ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್ ಅ.29 ರಂದೇ ನಿಧನರಾದರು. ಪುನೀತ್​ ಇಲ್ಲವಾದರೂ ಅವರ ಕನಸು ಸಾಯಬಾರದು ಎನ್ನುವ ಕಾರಣದಿಂದ ಪುನೀತ್ ಪತ್ನಿ ಅಶ್ವಿನಿ ಪುನೀತ್​ ಅವರು ಮುಂದಾಳತ್ವ ವಹಿಸಿ ಪಿಆರ್​ಕೆ ಆಡಿಯೋ ಮೂಲಕ ಟೈಟಲ್​ ಟೀಸರ್ ರಿಲೀಸ್​ ಮಾಡಿದ್ದರು. ಅಪ್ಪು ಡ್ರೀಮ್​ ಪ್ರಾಜೆಕ್ಟ್​ಅನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಟೀಸರ್​ ನೋಡಿದ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಗಂಧದಗುಡಿ ಟೀಸರ್​ ವೈರಲ್​ ಆಗಿದೆ.

ಕರ್ನಾಟಕದ ದಟ್ಟಅರಣ್ಯಗಳಲ್ಲಿ ಸುತ್ತಾಡಿ ಪ್ರಕೃತಿ ಸೌಂದರ್ಯವನ್ನು, ಕಾನನದಲ್ಲಿ ಜೀವಿಗಳ ನೈಜತೆಯನ್ನು ಸೆರೆಹಿಡಿಯಲಾಗಿದೆ. ಟೀಸರ್​ ನೋಡಿಯೇ ರೋಮಾಂಚನಗೊಂಡ ಅಭಿಮಾನಿಗಳು, ಸಾಕ್ಷ್ಯಚಿತ್ರವನ್ನು ಪೂರ್ಣಪ್ರಮಾಣದಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಟೀಸರ್​ ಅಂತ್ಯದಲ್ಲಿ ಡಾ. ರಾಜ್​ ನಟನೆಯ ಗಂಧದಗುಡಿ ಚಿತ್ರದ ಡೈಲಾಗ್​ ಕೇಳಿಬರುತ್ತದೆ. ಹೀಗಾಗಿ ಅಭಿಮಾನಿಗಳು ಇನ್ನಷ್ಟು ಉತ್ಸಾಹದಿಂದ ಟೀಸರ್​ ಅನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಗಂಧದಗುಡಿ ಸಾಕ್ಷ್ಯಚಿತ್ರವನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ. ಹೀಗಾಗಿ 2022ರ ವೇಳೆಗೆ ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಥಿಯೇಟರ್​ಗಳಲ್ಲಿ ನೋಡಬಹುದಾಗಿದೆ.

TV9 Kannada


Leave a Reply

Your email address will not be published. Required fields are marked *