‘ಗಟ್ಟಿಮೇಳ’ ಧಾರಾವಾಹಿಯ ಕಿಶನ್​ ಈಗ ಸಿನಿಮಾ ಹೀರೋ; ‘ನಾನೇ ನರರಾಕ್ಷಸ’ ಎಂದ ನಟ ರಾಜ್​ ಮನೀಶ್​ | Gattimela serial Kishan aka Raj Manish turns hero and director with Naane Nara Rakshasa film


‘ಗಟ್ಟಿಮೇಳ’ ಧಾರಾವಾಹಿಯ ಕಿಶನ್​ ಈಗ ಸಿನಿಮಾ ಹೀರೋ; ‘ನಾನೇ ನರರಾಕ್ಷಸ’ ಎಂದ ನಟ ರಾಜ್​ ಮನೀಶ್​

‘ನಾನೇ ನರರಾಕ್ಷಸ’ ಸಿನಿಮಾ ತಂಡ

ಕಿರುತೆರೆಯಲ್ಲಿ ಗುರುತಿಸಿಕೊಂಡ ಅನೇಕರು ನಂತರ ಚಿತ್ರರಂಗಕ್ಕೆ ಕಾಲಿಡುವುದು ವಾಡಿಕೆ. ‘ಗಟ್ಟಿಮೇಳ’ ಧಾರಾವಾಹಿಯಲ್ಲಿ (Gattimela Serial) ಕಿಶನ್​ ಎಂಬ ಪಾತ್ರವನ್ನು ಮಾಡಿರುವ ನಟ ರಾಜ್​ ಮನೀಶ್  (Raj Manish) ಕೂಡ ಅದೇ ಟ್ರೆಂಡ್​ ಫಾಲೋ ಮಾಡಿದ್ದಾರೆ. ಈಗ ಅವರು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ‘ನಾನೇ ನರರಾಕ್ಷಸ’  (Naane Nara Rakshasa Movie) ಚಿತ್ರಕ್ಕೆ ಅವರು ಹೀರೋ ಆಗಿದ್ದಾರೆ. ಅಷ್ಟೇ ಅಲ್ಲದೇ, ನಿರ್ದೇಶನವನ್ನೂ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್​ಗಳನ್ನು ಇತ್ತೀಚೆಗೆ ರಿಲೀಸ್​ ಮಾಡಲಾಯಿತು. ಅದರ ಜೊತೆಗೆ ಒಂದು ಲಿರಿಕಲ್​ ಸಾಂಗ್​ ಕೂಡ ಬಿಡುಗಡೆ ಆಗಿದೆ. ಹಾರರ್​ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ನೀತು ನಿನಾದ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್​ ಚಂದ್ರ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. 2021ರ ಡಿಸೆಂಬರ್​ನಲ್ಲಿ ‘ನಾನೇ ನರರಾಕ್ಷಸ’ ಚಿತ್ರಕ್ಕೆ ಶೂಟಿಂಗ್​ ಆರಂಭಿಸಲಾಗಿತ್ತು. ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಮೇ ತಿಂಗಳ ಮೊದಲ ವಾರದಲ್ಲಿ ಸಿನಿಮಾ ರಿಲೀಸ್​ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ.

ಗಟ್ಟಿಮೇಳ, ಹರಹರ ಮಹದೇವ, ಶನಿ, ಮಹಾಕಾಳಿ, ಸಂಘರ್ಷ ಸೇರಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ಅನುಭವ ರಾಜ್​ ಮನೀಶ್​ ಅವರಿಗೆ ಇದೆ. ಈಗ ಅವರು ಹೀರೋ ಆಗಿರುವ ‘ನಾನೇ ನರರಾಕ್ಷಸ’ ಸಿನಿಮಾಗೆ ಅವರ ತಾಯಿ ಬಿ. ರಾಧಾ ಅವರು ಬಂಡವಾಳ ಹೂಡಿದ್ದಾರೆ. ಸ್ವರ್ಣಾಂಬಾ ಪ್ರೊಡಕ್ಷನ್ಸ್ ಮೂಲಕ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

‘ನಿಜಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೊಳಗೂ ಒಬ್ಬ ರಾಕ್ಷಸ ಇರುತ್ತಾನೆ. ಅದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಸಮಯ ಬಂದಾಗ ಹೇಗೆ ರಾಕ್ಷಸರಾಗಿ ಬದಲಾಗ್ತಾರೆ ಎನ್ನುವುದೇ ಈ ಕಥೆಯ ಹೈಲೈಟ್​. ಮುಂದೆ ಏನಾಗುತ್ತದೆ ಎಂದು ಪ್ರೇಕ್ಷಕರು ಊಹಿಸಲು ಸಾಧ್ಯವಾಗದ ರೀತಿಯ ಕಥೆ ನಮ್ಮ ಸಿನಿಮಾದಲ್ಲಿದೆ’ ಎಂದಿದ್ದಾರೆ ರಾಜ್​ ಮನೀಶ್​. ಮೈಸೂರು, ಬನ್ನೂರು ಸುತ್ತಮುತ್ತಲಿನ ಕಾಡಿನಲ್ಲಿ ಚಿತ್ರೀಕರಣ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಕೊಳ್ಳೆಗಾಲ ಮೂಲದ ದಿವ್ಯ ಕುಮಾರ್ ಅವರು ‘ನಾನೇ ನರರಾಕ್ಷಸ’ ಚಿತ್ರದಲ್ಲಿ ಸ್ನೇಕ್‌ ಶಂಕರ್​ ಎಂಬ ವಿಲನ್​ ಪಾತ್ರ ಮಾಡಿದ್ದಾರೆ. ಈವರೆಗೆ ಏಳಕ್ಕೂ ಅಧಿಕ ಸಿನಿಮಾ ಮಾಡಿರುವ ಅವರಿಗೆ ಇದೇ ಮೊದಲ ಬಾರಿಗೆ ಮೇನ್​ ವಿಲನ್​ ಪಾತ್ರ ಸಿಕ್ಕಿದೆ. ಪತ್ರಕರ್ತನಾಗಿ ಸೇತುರಾಮ್, ಸಿಐಡಿ ಅಧಿಕಾರಿ ಪಾತ್ರದಲ್ಲಿ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಮೈಸೂರು ಮೂಲದ ರಾಘವೇಂದ್ರ ಅವರು ಈ ಚಿತ್ರತಂಡಕ್ಕೆ ಅನೇಕ ವಿಚಾರಗಳಲ್ಲಿ ನೆರವಾಗುತ್ತಿದ್ದಾರೆ. ‘ನಾನೇ ನರರಾಕ್ಷಸ’ ಸಿನಿಮಾಗೆ ಸಂಗೀತ ನೀಡುತ್ತಿರುವ ನೀತು ನಿನಾದ್ ಅವರು ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿದ್ದರು. ಈಗ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿನ 4 ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ರಾಜ್​ಕುಮಾರ್​ ಕುರಿತಾಗಿಯೂ ಒಂದು ಸಾಂಗ್​ ಇದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಣ್ಣಾವ್ರ ಕುರಿತ ಹಾಡನ್ನು ಅವರ ಜನ್ಮದಿನದ ಪ್ರಯುಕ್ತ ರಿಲೀಸ್​ ಮಾಡಬೇಕು ಎಂದು ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ.

ಸುನಿಲ್ ಸ್ವಾಮಿರಾಜು ಅವರು ಈ ಚಿತ್ರದಲ್ಲಿ ಎರಡನೇ ಹೀರೋ ಆಗಿ ನಟಿಸಿದ್ದಾರೆ. ರಂಗಾಯಣದಲ್ಲಿ ನಟನೆ ಕಲಿತಿರುವ ಅವರು ಆರಂಭದಲ್ಲಿ ಈ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಸೇರಿಕೊಂಡಿದ್ದರು. ಬಳಿಕ ಅವರ ಅಭಿನಯದ ವಿಡಿಯೋವೊಂದನ್ನು ನೋಡಿದ ನಿರ್ದೇಶಕರು ಎರಡನೇ ಹೀರೋ ಆಗಿ ನಟಿಸುವ ಚಾನ್ಸ್​ ನೀಡಿದರು.

TV9 Kannada


Leave a Reply

Your email address will not be published.