ಗಡಿಪ್ರದೇಶದಲ್ಲಿ ಚೀನಾದ ಚಟುವಟಿಕೆಯನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯ | India carefully monitoring China’s developments along border areas says MEA


ಗಡಿಪ್ರದೇಶದಲ್ಲಿ ಚೀನಾದ ಚಟುವಟಿಕೆಯನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಅರಿಂದಮ್ ಬಾಗ್ಚಿ

ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವವನ್ನು ಕಾಪಾಡಲು ಸರ್ಕಾರವು ಎಲ್ಲಾ ಸಮರ್ಪಕ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ

ದೆಹಲಿ: ಪಶ್ಚಿಮ ವಲಯದಲ್ಲಿ ಚೀನಾದ (China) ಮೂಲಸೌಕರ್ಯ ನಿರ್ಮಾಣ ಸೇರಿದಂತೆ ಗಡಿ ಪ್ರದೇಶಗಳಲ್ಲಿನ ಚಟುವಟಿಕೆಗಳನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವವನ್ನು ಕಾಪಾಡಲು ಸರ್ಕಾರವು ಎಲ್ಲಾ ಸಮರ್ಪಕ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ(Arindam Bagchi) ಹೇಳಿದ್ದಾರೆ. ಲಡಾಖ್ ಪ್ರದೇಶದಲ್ಲಿ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನೀ ಚಟುವಟಿಕೆ ಆತಂಕ ಹುಟ್ಟಿಸುವಂತದ್ದು ಎಂದು ಅಮೆರಿಕದ ಹಿರಿಯ ಜನರಲ್ ಹೇಳಿದ ನಂತರ ಎಂಇಎಯ ಈ ಹೇಳಿಕೆ ಬಂದಿದೆ. ಅಮೆರಿಕ ಆರ್ಮಿ ಪೆಸಿಫಿಕ್‌ನ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ ಫ್ಲಿನ್ (Charles A Flynn) ಅವರು ಹಿಮಾಲಯದ ಗಡಿಯಲ್ಲಿ ಚೀನಾದ ಮೂಲಸೌಕರ್ಯ ನಿರ್ಮಾಣದ ಕುರಿತು ಮಾತನಾಡಿದ್ದು, ಚೀನಾದ್ದು ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ನಡವಳಿಕೆ ಎಂದಿದ್ದಾರೆ. “ಚಟುವಟಿಕೆಗಳು ಗಾಬರಿ ಹುಟ್ಟಿಸುತ್ತವೆ. ವೆಸ್ಟರ್ನ್ ಥಿಯೇಟರ್ ಕಮಾಂಡ್‌ನಲ್ಲಿ ರಚಿಸಲಾಗುತ್ತಿರುವ ಕೆಲವು ಮೂಲಸೌಕರ್ಯಗಳು ಆತಂಕಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಅವರ ಎಲ್ಲಾ ಮಿಲಿಟರಿ ಶಸ್ತ್ರಾಗಾರದಂತಿರುವ ಅದನ್ನು ಯಾಕೆ ಎಂದು ಕೇಳಬೇಕು ಎಂದು ಏಷ್ಯಾ-ಪೆಸಿಫಿಕ್ ಪ್ರದೇಶವನ್ನು ನೋಡಿಕೊಳ್ಳುವ ಜನರಲ್ ಆಯ್ದ ಪತ್ರಕರ್ತರ ಗುಂಪಿಗೆ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿತ್ತು.

ಮೇ 31 ರಂದು ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯಾಚರಣಾ ಕಾರ್ಯವಿಧಾನವು ವರ್ಚುವಲ್ ಆಗಿ ಭೇಟಿಯಾಗಿತ್ತು. ಲಡಾಖ್‌ನಲ್ಲಿ ಎಲ್ಎಸಿ ಉದ್ದಕ್ಕೂ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ಮುಂದುವರಿಸಲು ಒಪ್ಪಿಕೊಂಡಿತು.
ಭಾರತದ ತಂಡಕ್ಕೆ ಹೆಚ್ಚುವರಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್ ಶ್ರೀವಾಸ್ತವ ನೇತೃತ್ವ ವಹಿಸಿದ್ದು ಚೀನಾವನ್ನು ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ವ್ಯವಹಾರಗಳ ವಿಭಾಗದ ಮಹಾನಿರ್ದೇಶಕ ಹಾಂಗ್ ಲಿಯಾಂಗ್ ನೇತೃತ್ವ ವಹಿಸಿದ್ದರು.

ಇಬ್ಬರು ವಿದೇಶಾಂಗ ಮಂತ್ರಿಗಳ ಸೂಚನೆಯಂತೆ “ದ್ವಿಪಕ್ಷೀಯ ಸಂಬಂಧಗಳಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ಪರಿಸ್ಥಿತಿಗಳನ್ನು ಸೃಷ್ಟಿಸಲು ಎಲ್ಎಸಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ರಾಜತಾಂತ್ರಿಕ ಮತ್ತು ಮಿಲಿಟರಿ ಚಾನೆಲ್ಗಳ ಮೂಲಕ ಚರ್ಚೆಗಳನ್ನು ಮುಂದುವರಿಸಬೇಕು” ಎಂದು ಎರಡೂ ಕಡೆಯವರು ಒಪ್ಪಿಕೊಂಡರು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

TV9 Kannada


Leave a Reply

Your email address will not be published.