ಭಾರತದ ಜೊತೆ ಪದೇ ಪದೆ ಕ್ಯಾತೆ ತೆಗೆಯುವ ಚೀನಾ ಇದೀಗ ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕಿದೆ. ಭಾರತದ ಗಡಿಯೊಳಗೆ ನುಗ್ಗಿ 17 ವರ್ಷದ ಯುವಕನನ್ನ ಚೀನಾ ಸೇನೆ ಕಿಡ್ನಾಪ್ ಮಾಡಿದೆ. ಹೀಗಂತಾ ಖುದ್ದು ಅರುಣಾಚಲ ಪ್ರದೇಶದ ಸಂಸದರೊಬ್ಬರು ಗಂಭೀರವಾದ ಆರೋಪ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಚೀನಾ.. ಭಾರತದ ಜೊತೆ ಸುಖಾಸುಮ್ಮನೇ ಕಿರಿಕ್ ಮಾಡಿಕೊಳ್ಳುವ ದೇಶ. ಗಡಿಯಲ್ಲಿ ಕಾಲು ಕೆರೆದುಕೊಂಡು ಕ್ಯಾತೆ ತೆಗೆಯೋ ಕುತಂತ್ರಿ ದೇಶ. ಭಾರತದ ಗಡಿಯೊಳಗೆ ನುಗ್ಗಿ ಇದೆಲ್ಲಾ ನಮ್ಮದು ಅನ್ನೋದು, ಅನಗತ್ಯವಾಗಿ ವಿವಾದ ಸೃಷ್ಟಿಸೋದು ಚೀನಾಗೆ ತಲೆತಲಾಂತರದಿಂದ ಬಂದ ಕುತಂತ್ರಿ ಬುದ್ಧಿ. ಈ ಎಲ್ಲಾ ಕುತಂತ್ರಿ ಆಟಕ್ಕೂ ಭಾರತ ತಿರುಗೇಟು ಕೊಟ್ಟಿದೆ, ಕೊಡುತ್ತಲೇ ಬಂದಿದೆ. ಇಷ್ಟಾದ್ರೂ ತನ್ನ ಕತಂತ್ರಿ ಬುದ್ಧಿಯನ್ನ ನಿಲ್ಲಿಸದ ಚೀನಾ ಇದೀಗ ಮತ್ತೊಂದು ಉದ್ಧಟತನ ಮೆರೆದಿದೆ. ಭಾರತದ ಗಡಿಯೊಳಗೆ ನುಸುಳಿ ಯುವನೊಬ್ಬನನ್ನ ಕಿಡ್ನಾಪ್ ಮಾಡಿ ಮತ್ತೆ ಬಾಲ ಬಿಚ್ಚಿದೆ.
ಯೆಸ್.. ಖುದ್ಧು ಭಾರತದ ಸಂಸದರೊಬ್ಬರು ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಅರುಣಾಚಲ ಪ್ರದೇಶ ಮೂಲದ ಯುವಕನನ್ನ ಚೀನಾ ಸೇನೆ ಕಿಡ್ನಾಪ್ ಮಾಡಿದೆ ಅಂತಾ ಆರೋಪಿಸಿದ್ದಾರೆ.
ಚೀನಾ ಸೇನೆಯ ಕೃತ್ಯನಾ?
ಅರುಣಾಚಲ ಪ್ರದೇಶದ ಝೀಡೋ ಗ್ರಾಮದಿಂದ ಮೀರಾಮ್ ಎಂಬ 17 ವರ್ಷದ ಯುವಕ ನಾಪತ್ತೆಯಾಗಿದ್ದಾನೆ. ಭಾರತ ಹಾಗೂ ಚೀನಾ ಗಡಿ ಬಳಿ ಇರುವ ಝೀಡೋ ಗ್ರಾಮದಲ್ಲಿ ಜನವರಿ 18ರಂದು ಮೀರಾಮ್ ತರೂನ್ ನಾಪತ್ತೆಯಾಗಿದ್ದ. ಸದ್ಯ ಯುವಕನನ್ನ ಚೀನಾ ಸೇನೆಯೇ ಕಿಡ್ನಾಪ್ ಮಾಡಿದೆ ಅಂತಾ ಅರುಣಾಚಲ ಪ್ರದೇಶದ ಪೂರ್ವ ಭಾಗದ ಸಂಸದ ತಾಪಿರ್ ಗಾವ್ ಗಂಭೀರ ಆರೋಪ ಮಾಡಿದ್ದಾರೆ. ಶೀಘ್ರವೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ತಾಪಿರ್ ಮನವಿ ಮಾಡಿದ್ದಾರೆ.
ಸದ್ಯ ನಾಪತ್ತೆಯಾದ ಯುವಕನನ್ನ ಕರೆತರೋಕೆ ಭಾರತೀಯ ಸೇನೆ ಪ್ರಯತ್ನಿಸುತ್ತಿದ್ದು, ಚೀನಾ ಸೇನೆಯನ್ನ ಸಂಪರ್ಕಿಸಿದೆ ಅಂತಾ ಸೇನಾ ಉನ್ನತ ಮೂಲಗಳು ತಿಳಿಸಿವೆ. ಈ ಮಧ್ಯೆ ಯುವಕ ಚೀನಾ ಗಡಿ ಬಳಿ ಹೋಗಿದ್ದ ಎಂಬ ಮಾತುಗಳೂ ಕೇಳಿ ಬರ್ತಿವೆ. ಈ ಬಗ್ಗೆ ಖುದ್ದು ಸಂಸದ ತಾಪಿರ್ ಗಾವ್ ಅವರೇ ಸ್ಪಷ್ಟನೆ ನೀಡಿದ್ದು, ಯುವಕ ಚೀನಾ ಗಡಿ ಬಳಿ ಹೋಗಿದ್ದು ನಿಜ ಆದ್ರೆ ಗಡಿ ದಾಟಿರಲಿಲ್ಲ ಅಂತಾ ತಿಳಿಸಿದ್ದಾರೆ.
ಚೀನಾ ಸೇನೆ ಅಪಹರಿಸಿದೆ ಎಂದ ಸಂಸದ
ಈ ಸಂಬಂಧ ಆ ಭಾಗದ ಶಾಸಕರ ಜೊತೆ ನಾನು ಮಾತನಾಡಿದ್ದೇನೆ. ಆ ಯುವಕ ಚೀನಾದ ಗಡಿ ಬಳಿ ಹೋಗಿದ್ದ ನಿಜ. ಆದ್ರೆ ಚೀನಾ ಗಡಿಯನ್ನ ದಾಟಿರಲಿಲ್ಲ. ಚೀನಾ ಗಡಿ ಬಳಿ ನಿಷೇದಾಜ್ಞೆ ಜಾರಿ ಇದೆ. ಆದ್ರೂ ಆ ಯುವಕ ಗಡಿಯನ್ನ ದಾಟಿ ಹೋಗಿರಲಿಲ್ಲ. ಆದ್ರೆ ಚೀನಾ ಸೇನೆ 17 ವರ್ಷದ ಮೀರಾಮ್ ತರೂನ್ ಕಿಡ್ನ್ಯಾಪ್ ಮಾಡಿದೆ. ಈ ಬಗ್ಗೆ ನಾನು ಕೇಂದ್ರ ಸರ್ಕಾರದ ಅಧಿಕಾರಿಗಳನ್ನ ಸಂಪರ್ಕ ಮಾಡಿ ಮಾಹಿತಿ ನೀಡಿದ್ದೇನೆ ಎಂದರು ಸಂಸದ ತಾಪಿರ್ ಗಾವ್.
ಇನ್ನು ಯುವಕನ ನಾಪತ್ತೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ. ಪ್ರಧಾನಿ ಅವರ ಮೌನವೇ ಅವರ ಹೇಳಿಕೆ. ಅವರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ಅಂತ ವಾಗ್ಧಾಳಿ ನಡೆಸಿದಿದ್ದಾರೆ.
‘ಪ್ರಧಾನಿ ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ’
ಗಣರಾಜ್ಯೋತ್ಸವ ದಿನಕ್ಕೆ ಕೆಲವು ದಿನಗಳು ಇರುವಾಗಲೇ ಭಾರತದ ಭವಿಷ್ಯವಾದ ಯುವಕನನ್ನ ಚೀನಾ ಅಪಹರಿಸಿದೆ. ಮಿರಾಮ್ ತರೊನ್ ಕುಟುಂಬದ ಜೊತೆ ನಾವಿದ್ದೇವೆ. ಪ್ರಧಾನಿ ಅವರ ಮೌನವೇ ಅವರ ಹೇಳಿಕೆ. ಅವರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಸದ್ಯ ಚೀನಾದ ಈ ಕುತಂತ್ರಿ ಬುದ್ಧಿ ಇದೇ ಮೊದಲೇನಲ್ಲ. 2020ರಲ್ಲೂ ಅರುಣಾಚಲ ಪ್ರದೇಶದ ಐವರನ್ನು ಚೀನಾ ಅಪಹರಿಸಿತ್ತು. ಭಾರತೀಯ ಸೇನೆ ಮಧ್ಯಪ್ರವೇಶಿದ ಬಳಿಕ ಐವರನ್ನ ಬಿಡುಗಡೆಗೊಳಿಸಿತ್ತು. ಆದ್ರೆ ಈ ಬಾರಿ ಭಾರತ ಚೀನಾಗೆ ಹೇಗೆ ತಿರುಗೇಟು ಕೊಡಲಿದೆ ಅಂತಾ ಕಾದುನೋಡ್ಬೇಕು.