ಬಳ್ಳಾರಿ: ಬಿಸಿಲ ನಾಡು ಬಳ್ಳಾರಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದು 6 ತಿಂಗಳಾಗಿತ್ತು. ಆದ್ರೆ ಮೇಯರ್ ನೇಮಕವಾಗದೇ ಪಾಲಿಕೆ ಎಲ್ಲಾ ಕೆಲಸಗಳು ಸ್ಥಗಿತವಾಗಿದ್ವು. ಈ ಬಗ್ಗೆ ನ್ಯೂಸ್ಫಸ್ಟ್ ಸರಣಿ ವರದಿ ಕೂಡ ಮಾಡಿತ್ತು. ಈ ವರದಿಯ ಬಳಿಕ ಎಚ್ಚೆತ್ತಿರುವ ಬಳ್ಳಾರಿ ಜಿಲ್ಲಾಡಳಿತ ಇದೇ ತಿಂಗಳು 18ರಂದು ಮೇಯರ್ ಚುನಾವಣೆ ನಡೆಸಲು ಭರದ ಸಿದ್ಧತೆ ಮಾಡಿಕೊಳ್ತಿದೆ.
ಬಿಸಿಲ ನಾಡಲ್ಲಿ ಕಾವೇರಿದ ‘ಮೇಯರ್’ ಚುನಾವಣೆ
ಗಣಿಧಣಿಗಳ ನಾಡು ಬಳ್ಳಾರಿಯಲ್ಲಿ ಮಿನಿ ರಾಜಕೀಯ ಕಸರತ್ತು ಜೋರಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಮಹಾನಗರ ಪಾಲಿಕೆಯ ಚುಕ್ಕಾಣಿಗಾಗಿ ಕೈ – ಕಮಲ ಪಡೆ ಭಾರೀ ಸಾಹಸ ಮಾಡಿದ್ವು. ಆದ್ರೆ ಕೊರೊನಾ ಸಮಯದಲ್ಲಿ ಈ ಚುನಾವಣೆ ನಡೆದಿದ್ದ ಕಾರಣ, ಬಿಜೆಪಿ ಇದನ್ನೆ ನೆಪವಾಗಿಟ್ಟುಕೊಂಡು ಮೇಯರ್, ಉಪಮೇಯರ್ ನೇಮಕವನ್ನು 6 ತಿಂಗಳು ಮುಂದೂಡಿತ್ತು. ಇದರ ಬಗ್ಗೆ ನ್ಯೂಸ್ಫಸ್ಟ್ ಸರಣಿ ವರದಿ ಮಾಡುವ ಮೂಲಕ ಜಿಲ್ಲಾಡಳಿತ ಗಮನ ಸೆಳೆದಿತ್ತು. ನ್ಯೂಸ್ಫಸ್ಟ್ ವರದಿ ಬಳಿಕೆ ಗಮನಕ್ಕೆ ತೆಗದುಕೊಂಡಿರುವ ಜಿಲ್ಲಾಡಳಿತ ಕೊನೆಗೂ ಮೇಯರ್ ನೇಮಕ ಮಾಡಲು ಮುಂದಾಗಿದ್ದು, ಇದೇ ತಿಂಗಳು 18 ರಂದು ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಕೈ – ಕಮಲ ಪಾಳಯದಲ್ಲಿ ಮೇಯರ್ ಚುನಾವಣಾ ಕಸರತ್ತು ಶುರುವಾಗಿದೆ.
ಗಣಿನಾಡಲ್ಲಿ ‘ಕೈ’ ಹಿಡಿದಿದ್ದ ಮತದಾರ
6 ತಿಂಗಳ ಹಿಂದೆ ಬಳ್ಳಾರಿಯಲ್ಲಿ ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ 39 ವಾರ್ಡ್ಗಳ ಪೈಕಿ 21 ಸ್ಥಾನ ಕೈ ವಶವಾಗಿದ್ರೆ, 13 ವಾರ್ಡ್ಗಳಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಇನ್ನೂ ಕಾಂಗ್ರೆಸ್ನಿಂದ 5 ಮಂದಿ ಬಂಡಾವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ರು. ಚುನಾವಣಾ ಕಣದಲ್ಲಿ ಆ ಐದು ಜನ ಪಕ್ಷೇತರರು ಜಯಭೇರಿ ಗಳಿಸಿದ್ರು. ಬಳಿಕ ಪಕ್ಷೇತರ 5 ಅಭ್ಯರ್ಥಿಗಳ ಪೈಕಿ ಈಗಾಗಲೇ ನಾಲ್ಕು ಜನ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಂಖ್ಯಾಬಲ 25ಕ್ಕೆ ಏರಿಕೆಯಾಗಿದೆ. ಈ ಚುನಾವಣೆ ಬಿಜೆಪಿಗೂ ಪ್ರತಿಷ್ಠೆಯ ಕಣವಾಗಿದ್ದು, ಶಾಸಕ ಸೋಮಶೇಖರ ರೆಡ್ಡಿ, ಸಚಿವ ಶ್ರೀರಾಮುಲು ಪ್ರಚಾರ ನಡೆಸಿದರು ಕೊನೆಗಳಿಗೆಯಲ್ಲಿ ಮತದಾರ ಪ್ರಭು ಮಾತ್ರ ‘ಕೈ’ ಹಿಡಿದಿದ್ರು.
ಇದೀಗ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಎರಡು ಸ್ಥಾನಕ್ಕೂ ಓಬಿಸಿ ಮಹಿಳಾ ಮೀಸಲಾತಿ ಘೋಷಣೆಯಾಗಿದ್ದು, ಈಗ ಮೇಯರ್ ಪಟ್ಟಕ್ಕೇರಲು ಕೈ ಪಾಳಯದಲ್ಲಿ ತೆರೆಮರೆಯ ಲಾಬಿ ಕಸರತ್ತು ಜೋರಾಗಿದೆ. ಇನ್ನೂ 6 ತಿಂಗಳ ಬಳಿಕ ಪಾಲಿಕೆಯ ಮೇಯರ್ – ಉಪಮೇಯರ್ ನೇಮಕಕ್ಕೆ ಆದೇಶ ಬರುತ್ತಿದ್ದಂತೆ ಸಾಕಷ್ಟು ರಾಜಕೀಯ ಕಣದಲ್ಲಿ ಕಾವೇರಿದ್ದು, ಎರಡು ಸ್ಥಾನಗಳಿಗೂ ಕಾಂಗ್ರೆಸ್ ಪಕ್ಷವೇ ಆಯ್ಕೆಯಾಗೋದು ಪಕ್ಕಾ ಎನ್ನಲಾಗಿದೆ.
ವಿಶೇಷ ವರದಿ: ಶಿವಾನಂದ ಮದಿಹಳ್ಳಿ, ನ್ಯೂಸ್ಫಸ್ಟ್, ಬಳ್ಳಾರಿ