ಗದಗ ತಾಲ್ಲೂಕಿನಲ್ಲಿ ಮಕ್ಕಳು ಶಾಲೆಗೆ ಹೋಗಬೇಕಾದರೆ, ಜೀವದ ಹಂಗು ತೊರೆದು ಪ್ರಯಾಣಿಸಬೇಕು! | Primary school students in Gadag taluk have to play with their lives to reach school!


ಸರ್ಕಾರೀ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದು ಸುಲಭ ಅಲ್ಲ ಮಾರಾಯ್ರೇ. ಈ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಶೂಸ್, ಬಿಸಿಯೂಟ ಮತ್ತು ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಹಾಗೂ ಹಾಲು ಸಿಗುತ್ತಿರಬಹುದು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಹ ಸಿಗುತ್ತದೆ. ಆದರೆ, ಗ್ರಾಮ ಮತ್ತು ತಾಂಡಾಗಳಲ್ಲಿ ವಾಸವಾಗಿರುವ ಕುಟುಂಬಗಳ ಮಕ್ಕಳು ಪರವೂರಿನಲ್ಲಿರುವ ಶಾಲೆಗಳಿಗೆ ಹೋಗಲು ಎಷ್ಟು ತಾಪತ್ರಯ ಪಡಬೇಕಾಗುತ್ತದೆ ಅಂತ ಸರ್ಕಾರಕ್ಕೆ ಅದರಲ್ಲೂ ವಿಶೇಷವಾಗಿ ಸಾರಿಗೆ ಇಲಾಖೆ ಗೊತ್ತಿದ್ದಂತಿಲ್ಲ.

ಅವರ ಪಡಿಪಾಟಿಲಿನ ಒಂದು ಜ್ವಲಂತ ಉದಾಹರಣೆ ಇಲ್ಲಿದೆ. ಈ ವಿಡಿಯೋ ನೋಡಿ, ಗದಗ ತಾಲ್ಲೂಕಿನ ಕೆಲ ಹಳ್ಳಿ ಮತ್ತು ತಾಂಡಾಗಳಲ್ಲಿ ಪ್ರತಿದಿನ ಕಂಡುಬರುವ ದೃಶ್ಯವಿದು. ಈಗಿನ್ನೂ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಜೋತಾಡುತ್ತಿರುವ ದೃಶ್ಯ ಭಯಾನಕವಾಗಿದೆ. ಏನಾದರೂ ಹೆಚ್ಚು ಕಡಿಮೆಯಾದರೆ ಏನು ಗತಿ ಮತ್ತು ಯಾರು ಹೊಣೆ?

ಬಸ್ಸಿನ ಚಾಲಕ ಮತ್ತು ನಿರ್ವಾಹಕ ನಾವೆಷ್ಟು ಹೇಳಿದರೂ ಕೇಳುವುದಿಲ್ಲ, ಬಸ್ ಕಂಡ ತಕ್ಷಣ ಕುರಿಗಳಂತೆ ನುಗ್ಗಿ ಬಿಡುತ್ತಾರೆ ಅಂತ ಹೇಳಿ ಬಚಾವಾಗಬಹುದು. ಆದರೆ, ಮಕ್ಕಳನ್ನು ಹೆತ್ತ ತಂದೆ-ತಾಯಿಗಳ ಪಾಡೇನು?

ಈ ಸಮಸ್ಯೆಗೆ ಸರಳವಾದ ಪರಿಹಾರವೆಂದರೆ, ಶಾಲೆಗಳು ಆರಂಭವಾಗುವ ಮತ್ತು ಬಿಡುವ ಸಮಯಗಳಲ್ಲಿ ಸಂಬಂಧಪಟ್ಟ ಡಿಪೋ ಹೆಚ್ಚುವರಿ ಬಸ್ಗಳನ್ನು ಓಡಿಸುವುದು. ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿರುವ ಬಿ ಶ್ರೀರಾಮುಲು ಇದೇ ಭಾಗದವರು. ಅವರಿಗೆ ಈ ಸಮಸ್ಯೆಯ ಬಗ್ಗೆ ಅರಿವಿದ್ದಂತಿಲ್ಲ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗದಗ ತಾಲ್ಲೂಕಿನ ದೊಡ್ಡೂರ, ಸೂರಣಗಿ ಮತ್ತು ದೊಡ್ಡೂರ ತಾಂಡಾದ ಮಕ್ಕಳು ಶಿಗ್ಗಿ ಗ್ರಾಮಲ್ಲಿರುವ ಶಾಲೆಗೆ ಹೋಗಬೇಕಾದರೆ ಹೀಗೆ ಜೀವದ ಹಂಗು ತೊರೆದು ಪ್ರಯಾಣಿಸ ಬೇಕಾಗುತ್ತದೆ. ತಾಲ್ಲೂಕು ಆಡಳಿತವೂ ಕಣ್ಣುಮುಚ್ಚಿ ಕುಳಿತಂತಿದೆ.

TV9 Kannada


Leave a Reply

Your email address will not be published. Required fields are marked *