ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ಚಿನ್ನ ನಾಪತ್ತೆ ಕೇಸ್​ಗೆ ಟ್ವಿಸ್ಟ್​.. ಸ್ವಾಮೀಜಿಗಳ ನಡೆ ಮೇಲೆ ಅನುಮಾನ?

ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ಚಿನ್ನ ನಾಪತ್ತೆ ಕೇಸ್​ಗೆ ಟ್ವಿಸ್ಟ್​.. ಸ್ವಾಮೀಜಿಗಳ ನಡೆ ಮೇಲೆ ಅನುಮಾನ?

ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಾಣೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಂದು ಚಿನ್ನ ಕಾಣೆಯಾದ ಪ್ರಸಂಗದ ಕುರಿತು ತೇಲಿಸಿ ಮಾತನಾಡಿದ್ದ ಆಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರೇ ಆಶ್ರಮದಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಶಿಷ್ಯರ ಸಭೆಯಲ್ಲಿ ಮಾತನಾಡಿರುವ ವಿಡಿಯೋ ನ್ಯೂಸ್ ಫಸ್ಟ್​ಗೆ ಲಭ್ಯವಾಗಿದೆ.

ಹೌದು.. ಗದಗ ವೀರೇಶ್ವರ ಪುಣ್ಯಾಶ್ರಮ. ನಡೆದಾಡುವ ದೇವರು ವಿಭಿನ್ನ ಚೇತನರ ಬಾಳಿನ ಆಶಾಕಿರಣ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳು ನೆಲೆಸಿದ್ದ ಪುಣ್ಯ ಸ್ಥಳ. ಆ ನಡೆದಾಡುವ ದೇವರಿಗೆ ನಾಡಿನ ಜನ ಮನತುಂಬಿ ದಾನ ಮಾಡಿದ್ದರು. ಭಕ್ತರ ದಾನದಿಂದಲೇ ಈ ಆಶ್ರಮ ಬೆಳೆದು ವಿಶೇಷ ಆಶ್ರಯ ತಾಣವಾಗಿದೆ. ಶಿಕ್ಷಣ ಕೇಂದ್ರವಾಗಿದೆ. ಬೀದಿಗೆ ಬಿದ್ದವರನ್ನು ತಬ್ಬಿ ಜೀವನಕ್ಕೆ ದಾರಿ ದೀಪವಾಗಿದೆ. ಆದರೆ ಇದೇ ಪುಣ್ಯಾಶ್ರಮದಲ್ಲಿ ಕಳ್ಳರು ಸುಳ್ಳರು ಭ್ರಷ್ಠರು ಸದ್ದಿಲ್ಲದೇ ಬೀಡು ಬಿಟ್ಟು ಇಡೀ ಆಶ್ರಮವನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ. ಬರೋಬ್ಬರಿ 2.25 ಕೆಜಿ ಚಿನ್ನ ಸದ್ದಿಲ್ಲದೇ ಮಾಯವಾಗಿದೆ. ಲಕ್ಷಾಂತರ ರೂಪಾಯಿ ಬೆಳ್ಳಿ ಪರಿಕರಗಳು ನಾಪತ್ತೆಯಾಗಿವೆ. ಇದೆಲ್ಲವನ್ನೂ ನ್ಯೂಸ್ ಫಸ್ಟ್ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿತ್ತು. 2020 ರ ಅಕ್ಟೋಬರ್ 24 ರಂದು ಪುಣ್ಯಾಶ್ರಮದ ಅಕ್ರಮದ ಕುರಿತು ನ್ಯೂಸ್ ಫಸ್ಟ್ ವಿಸ್ತ್ರತ ವರದಿ ಮಾಡಿತ್ತು.

ಆಶ್ರಮದಲ್ಲಿ ಕೊಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಶ್ರಮದ ಸೇವಾ ಸಮಿತಿಯ 105 ಸದಸ್ಯರು ಸಹಿ ಮಾಡಿ ಪೀಠಾಧಿಪತಿ ಕಲ್ಲಯ್ಯಜ್ಜನವಿಗೆ ಪತ್ರ ಬರೆದಿದ್ದರು. ಇದೇ ಪತ್ರದ ಆಧಾರದ ಮೇಲೆ ನ್ಯೂಸ್ ಫಸ್ಟ್ ರಹಸ್ಯ ಕಾರ್ಯಾಚರಣೆ ನಡೆಸಿ ಅಕ್ರಮ ಬಯಲಿಗೆಳೆದಿತ್ತು. ಆದ್ರೆ ಆಗಲೂ ಕೂಡಾ ಪೀಠಾಧಿಪತಿ ಅಕ್ರಮವೇ ನಡೆದಿಲ್ಲ ಎಂದು ನಂಬಿಸಲು ಪ್ರಯತ್ನಿಸಿದ್ದರು. ಆದ್ರೀಗ ಇದೇ ಕಲ್ಲಯ್ಯಜ್ಜನವರು ಭಕ್ತರ ಸಭೆಯಲ್ಲಿ ಮಾತನಾಡಿರುವ ವಿಡಿಯೋ ತುಣುಕೊಂದು ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ.

ಭಕ್ತರ ಸಭೆಯಲ್ಲಿ ನಡೆದ ಚರ್ಚೆಯ ವಿವರ

ಕಲ್ಲಯ್ಯಜ್ಜನವರು: ಅವರು ನಿಮನ್ನ ಪಟ್ಟಕ್ಕ ಮಾಡ್ಯಾರ ಹೋರಾಟ ಮಾಡಿ ಅವರಿಗೆ ವಿರೋಧ ಮಾಡಬ್ಯಾಡ್ದು ನೀವು ಅಂದರು ನನಗ, ಅವಾಗ ನಾನು ಹೇಳಿದೆ, ಅಲ್ಲದಕ್ಕ ಹೌದು ಅನ್ನಕ್ಕಾಗಲ್ಲ ನನಗೆ ಅಂತ ಹೇಳಿದಾಗ ಅವಾಗ ಏನಂದ್ರು ಅವರು ತಿರಿಗಿ ಮರುದಿವಸ ನಾಲ್ಕೈದು ದಿನ ಭೇಟ್ಯಾಗ್​ ಹೇಳಿದರು, ಮನಸ್ಸಿಗೆ ನೋವಾಯ್ತನು ಅಂದರು. ನೋವಾಗೈತಿ ನಿಮ್ಮಿಂದನ ಮನಸ್ಸಿಗೆ ನೋವಾಗೈತಿ ಇದ್ದಿದ್ದು ಹೇಳಬೇಕಾಗಿತ್ತು ನೀವು ಅಂತ ಹೇಳಿದಾಗ ಆದ್ರ ಯಾವಾಗಾದರೂ ನಾನು ಅವರಿಗೆ ಹೇಳಕೊಂತ ಬರ್ತಿದ್ದೆ, ಏನಂದ್ರ 2.5 ಕೆ.ಜಿ ನೀವು ತೂಕ ಮಾಡಿರಿ ನಾ ಯಾವ ಸಂದರ್ಭದಾಗ ಕೇಳಿದರೂ ಇದಕ್ಕ ನೀವು ಉತ್ತರ ಕೊಡಬೇಕು ನೆನಪಿಟಗೋರಿ ಅಂತ ಆಗಾಗಾಗ ಅವರಿಗೆ ನೆನಪಿಸೋಂತನ ಬಂದೀನಿ.. ಯಾರಿಗೆ ಪಿ ಸಿ ಹಿರೇಮಠ ಅವರಿಗೆ ಮತ್ತು ಇಟಗಿ ಶಿವರುದ್ರಪ್ಪರಿಗೆ ಇದನ್ನ ನೀವು ತೂಕ ಮಾಡಿದ್ದು ನನಗೆ ಗೊತ್ತೈತಿ, ಯಾಕಂದರ ನಮ್ಮ ಶಿರೋಳಮಠ ಮಲ್ಲಯ್ಯಸರ್ ಅಂದ್ರು 3.5 ಕೆಜಿ ಅಂದ್ರ ಅದು ಇದ್ದಟಗಿ ಬಂದು ಅತೈತಿ ಅಂತೇಳಿ ಬರದಿದ್ರೂ ಅವರು ಅದಕ್ಕ ಅದಷ್ಟು ಹೊರಗ ಬಂತದು ಆ 3.5 ಕೆಜಿ ಬಂಗಾರ ಅಂತ ಅವರು ಬರದರಲ್ಲ ಅಂದಲ್ಲೇ ಅದು 2 ಕೆಜಿ ಪಾವಕೆಜಿ ಐತೆಂತೇಳಿ ಹೊರಗ ಬಂತದು, ಇದಕ್ಕ ಅವರು ಮಾಡಿದ್ದು ತಪ್ಪಂತಲ್ಲ ಆದ್ರೆ ಬಂಗಾರ ನಮ್ಮ ಗುರುಗಳದು ಇಷ್ಟೈತೆಂತರ ನಮಗೆಲ್ಲರಿಗೂ ಗೊತ್ತಾಯ್ತು. ಈಗ ತಾವೆಲ್ಲ ಎಲೈತಿ ಪೇಪರ್

ಶಿಷ್ಯ: ಕೊಡ್ತೇವಿ ಕೊಡ್ತೇವಿ ಬುದ್ಧಿ.. ಝೆರಾಕ್ಸ್ ಮಾಡಿಸಿ ಕೊಡ್ತೇವಿ

ಕಲ್ಲಯ್ಯಜ್ಜನವರು: ಆ…ಅದಕ್ಕ ಆ ಪೇಪರ್​​ನ್ನ ನೀವೆಲ್ಲಾ ಕೊಟ್ಟೀರಿ, ನಾನು ಅವತ್ತಿಲ್ಲಿ 6ನೇ ತಾರಿಖಿಗೆ ಅಗಸ್ಟ್ 6ನೇ ತಾರೀಖಿಗೆ ಮೀಟಿಂಗ್ ಕೂಡಿದಾಗ ನಾನು ಹೇಳಿದೆ ನೀವು ತನಿಖೆ ನಡೆಸ್ತೇನಂದ್ರ ಅದಕ್ಕೂ ಸಿದ್ಧ ಅದೇನಿ, ಇವತ್ತಿಗೆ ಅದನ್ನ ಮುಗಿಸ್ತೇನಿ ಅಂದ್ರ ಅದಕ್ಕೂ ಸಿದ್ಧ ಅದೇನಿ ಅಂತ ಹೇಳಿದ್ದೆ ಅಂತ ಅವತ್ತೂ ಹೇಳಿದ್ದೆ.. ಇವತ್ತಾದರೂ ಕೂಡ ಅದೇ ಮಾತ ಹೇಳ್ತಿನಿ ನೀವೆಲ್ಲರೂ ಅದಕ್ಕ ನಡೆಸ್ತೇನಿ ಅಂದ್ರ ನಡಸಾಕ ಯಾವ್ಯಾವ ರೀತಿ ದಾರಿ ಐತಿ ಅದನ್ನ ನಡೆಸೇ ತೀರ್ತೇನಿ, ಹಾಗಾಗಿ ಅದನ್ನ ನಮ್ಮ ಗುರುಗಳದು ಏಟುಳದೈತದು ಆಟ ಏಟಾರ ಬರ್ಲೆದು ಬಂದಾಟ ಬರ್ಲೆದು, ಅದನ್ನೇನಿಲ್ಲ ನಮಗ ಅದನ್ನ ಒಂದು ಗದಗಿಯೊಳಗನ ಎಲ್ಲರಿಗೂ ಕಾಣುವಂಗ ಒಂದೇನಾರ ಮೂರ್ತಿ ಮಾಡಿಸಿ ಇಟ್ಟಬಿಡಣ ಗದ್ದಿಗಿ ಒಳಗ ಅದನ್ನ ಎಲ್ಲಿ ಮುಚ್ಚಿ ಇಡದಬ್ಯಾಡದನ್ನ

ಶಿಷ್ಯ : ಅಷ್ಟಾದರ ಬಂಗಾರ ಕಳಸ ಮಾಡಾಕ ಬರುತ್ತಾ

ಕಲ್ಲಯ್ಯಜ್ಜನವರು : ಏನ್… ಕಳಸ ಆಗುತ್ತೇನು ಗೊತ್ತಿಲ್ಲ, ಕಳಸ ಆಗಬೇಕಾದರ 15 ಕೆಜಿ ಮ್ಯಾಲ ಬೇಕಾಗ್ತದ

ಶಿಷ್ಯ : ಅವನೂರು ಹೊನ್ನಿಗನೂರಲ್ರಿಪಾ ಅದಕ್ಕ

ಶಿಷ್ಯ : ಅದು ದೊಡ್ಡದಲ್ರಿ ಅಜ್ಜರ ದೊಡ್ಡದಲ್ಲ

ಕಲ್ಲಯ್ಯಜ್ಜನವರು : ಅಂದ್ರ ಈಗ ತೇರಿಗೆ, ತೇರಿಗೆ ಬೆಳ್ಳಿ ಕಳಸ ಮಾಡಸಣ

ಶಿಷ್ಯ : ಅದು ಅವನ ಸಂಕಲ್ಪ ಐತೇಂದ್ರ ಅದೂ ಆದ್ರ ಯಾಕಾಗಬಾರದು

ಶಿಷ್ಯ : ಅದು ಬಂದರ ಬರ್ಲ್ಯಾಳ ಆ ಮ್ಯಾಗ ಏನಾರ ಮಾಡಸೋಣಂತ

ಕಲ್ಲಯ್ಯಜ್ಜನವರು : ತೇರಿಗೆ ಐತೆಲ್ಲಾ ಬೆಳ್ಳಿ ಕಳಸ ನಾವು ನೀವೆಲ್ಲಾ ಪ್ರಯತ್ನ ಮಾಡಿ ಅದನ್ನ ಮಾಡಸೋಣ

ಶಿಷ್ಯ : ಆಗಲಿರೀ ಅಜ್ಜಾರ

ಶಿಷ್ಯ : ಅದ ಬಂಗಾರದ್ದು ಪಿ.ಸಿ ಅಜ್ಜಾರು ಒಂದು ಏನೂ ಒಟ್ಟ ಒಪ್ಪಗೊಲಿಲ್ಲರಿ ಅವತ್ತ. ಇಷ್ಟು ಮಂದಿ ಕೂಡಿದ್ರು, ಎಲ್ಲರೂ ಕೇಳಿದ್ವಿ

ಶಿಷ್ಯ : ಎಲ್ಲಾ ಗೊತೈತ್ರಿ ಅವರಿಗೆ

ಶಿಷ್ಯ : ಏ ನನ್ನ ಗೂಡ ಸರಿ ಇಲ್ಲೋ ಮಾರಾಯ, ಅಂದಾನಿ ಬೈದಾನ ನಾ ಬೈದೇನಿ

ಕಲ್ಲಯ್ಯಜ್ಜನವರು : ಹಂಗಲ್ಲ, ನಾವು ನೀವು, ಒಪ್ಪಗೊಳಲಿಲ್ಲ ಬಿಡಲಿಲ್ಲ ಲೆಕ್ಕ ಹತ್ತೋದಿಲ್ಲ, ಯಾರಕಡೆಯಿಂದ ಕೇಳಾಕ ಹಚ್ಚಿದಾಗ ಅದು ಎಳೆ ಎಳೆಯಾಗಿ ಬರ್ತದ

ಶಿಷ್ಯ : ಮುಳ್ಳು ಮುಳ್ಳಿನಿಂದ ತೆಗಿಬೇಕು

ಕಲ್ಲಯ್ಯಜ್ಜನವರು : ಆ ಮೇಲೆ ಇದನ್ನ ಸೋಲ್ ಟ್ರಸ್ಟ್ ಮಾಡೋನ್ರಿ ಅಂತ ಹೇಳಿದ್ರು. ಈಗ ಆಗೇ ಅದು ಕನಿಷ್ಠ ಮೂರನಾಲ್ಕು ವರ್ಷ ಆಗಿತ್ತು

ಶಿಷ್ಯ : ಇದು ಇದು ಇಲ್ ಬಿಡ್ರಿ ಅದು, ಅಡಿಟ್ಟೂ ಇಲ್ಲ ಏನೂ ಇಲ್ಲದು.. ಹೆಸರಿಗೆ ಮಾತ್ರ ಐತಿ

ಕಲ್ಲಯ್ಯಜ್ಜನವರು: ಅಂದ್ರ ಹಿಂಗೈತಿ ಅದು ಕೆಲವೊಂದಕ್ಕ ಅದು ಆಧಾರ ಅಂದ್ರೆ ಹಣಕಾಸು ಯಾವಾರಕ್ಕ ಬೇಕಾಗಿರೋದ್ರಿಂದ ಅಷ್ಟು ನಡೆದಿತ್ತು. ಈಗ ಅದನ್ನ ರಿಸೈನ್ ಮಾಡೋದಕ್ಕಿಂತ ಅದರಲ್ಲಿ ಎಷ್ಟೈತಿ ಅದರಷ್ಟೂ 40% ಅಂತ ಹೇಳಿದರಲ್ಲ ಅದರಷ್ಟೂ ತಾವು ಯಾರನ್ನ ಆಯ್ಕೆ ಮಾಡ್ತಿರಲ್ಲ ಅದರಷ್ಟೂ ಮಂದಿನ ಅದರಲ್ಲಿ ಹಾಕಿ ಹಂತ ಹಂತವಾಗಿ ಯಾರ್ಯಾರು ಮೂರು ಮೂರು ವರ್ಷ ಆಗೇವು ಅವರನ್ನ ತೊಕ್ಕೊಂತ ಹೋಗಿಬಿಡೋದು ನೀವು ಹೇಳಿದಂಗ, ಅದನ್ನ. ರಿನಿವಲ್ ಮಾಡಿಸಿ ಮುಂದುವರಸಣ ಅದರಲ್ಲಿ ಗುರುಬಂಧುಗಳುನೂ ಇರಲಿ ತಾವು ಹೇಳಿದಂಗ ನಾನು ಅದಕ್ಕೂ ಬದ್ಧವಾಗಿದ್ದೀನಿ ಅಂದ್ರ ಅದಕ್ಕೊಂದು ಸಿನಿಯಾರಿಟಿ ಬರ್ತೈತಿ ಕೆಲವೊಂದು ಕಡೆ ಕಾಗದಪತ್ರ ಓದುದರಿಂದ ರದ್ದಾಯ್ತಂದ್ರ

ಶಿಷ್ಯ : ಇಲ್ಲ ಬುದ್ಧ ನಾವಾದರೂ ಆತು ಆಡಳಿತ ಮಂಡಳಿ ಡಿಸಾಲ್ವ್ ಆಗಬೇಕಂದೇವಿ, ಟ್ರಸ್ಟ್ ರದ್ದಾಗಬೇಕಂದಿಲ್ಲ

ಕಲ್ಲಯ್ಯಜ್ಜನವರು : ಅದಕ್ಕ ಅದರಲ್ಲಿ ಅರ್ಧಕ್ಕರ್ಧ ತೆಗೆಯಣ ಅದಕ್ಕೇನೈತಿ ಈಗ 60-40 ಅಂದ್ರೆಲ್ಲ ತಾವೇಳಿದಂಗ ಅದನ್ನ ಮಾಡಿಕೊಂಡು ಮುಂದುವರೆಸಣ

ಶಿಷ್ಯ : ಅದರಾಗ ಕಿರಿಯ ಗುರುಬಾಂಧವರು ಇರಬೇಕ್ರಿ, ಹಿರಿಯ ಗುರುಬಾಂಧವರು ಇರಬೇಕ್ರಿ ಅದರಾಗ

ಕಲ್ಲಯ್ಯಜ್ಜನವರು : ಆಯ್ತು ಈಗ ನಾಲ್ಕು ಮಂದಿ ಹಾಕಕ ಬಂತು ಅಂದ್ರ ಇಬ್ಬರು ಹಿರಿಯರು ಇರಲಿ, ಇಬ್ಬರು ಕಿರಿಯರಿರ್ಲಿ ಹೌದ್ರೆ, ಅದಕ್ಕ ನಾವು ಒಪ್ಗೊಂಡೆಬಿಟ್ಟೇವಿ, ಅದರ ಬಗ್ಗೆ ಎರಡು ಮಾತಿಲ್ಲ ನಾನೇನು ಹೇಳಿಬಿಟ್ಟಿನಿ ನೀವೆಲ್ಲರೂ ಗುರುಬಾಂಧವರು ಹಿರಿಯರು ಕಿರಿಯರು ಹಿಂದೆಂಗಿತ್ತು ಗುರುಗಳು ಇದ್ದಾಗ ಹಂಗ ಮುಂದುವರಿಬೇಕು ಇದರಲ್ಲಿ ಯಾವುದು ಯಾರಿಗೂ ಮನಸ್ತಾಪ ಯಾರ್ಯಾರಿಗೂ ಬ್ಯಾಡ ಆ ಮ್ಯಾಗ ನಿಮಗೇನಾರ ಹೇಳೋದಿದ್ರುನೂ ನೀವು ಏನೂ ಸಂಕೋಚ ಬ್ಯಾಡ, ಒಂದು ಮಾತು ನಮಗ ಸೂಕ್ಷ್ಮಿ ಅಜ್ಜಾರ ಹಿಂಗಾಗಬೇಕು ನೋಡ್ರಿ ಅಭಿವೃದ್ಧಿ ಹಿಂಗಾಗಬೇಕು ಅಂತ ಹೇಳಿದರ, ಹೇಳ್ರಿ ನೀವು ಬಂದ ನಿಂತು ಅದನ್ನ ಕಸ ಹೊಡಸ್ತಿರಾ ಕಸ ಹೊಡಸ್ರಿ, ಏನು ಸ್ವಚ್ಛ ಮಾಡಿಸ್ತಿರಾ ಮಾಡಿಸ್ರಿ ಆ ಮೊನ್ನೆ ಅವತ್ತ ತೊಗೊಳಲೇ ಬೇಕಂತ ಹಟ ಮಾಡಿದಾಗ ನಾ ತೊಗೊಳಕ್ಕೆ ಆಗಲ್ಲ ಅಂತ ಹೇಳಿದೆ ಏ ನಮ್ದೆಲ್ಲ ಇಷ್ಟುಮಂದಿ ಮಮ್ಮಕ್ಕಳದಾರ ನಮಗೆಲ್ಲಾ ಜೀವನ ನಡೆಸೋದು ಕಷ್ಟ ಅಂದ್ರು ಕಷ್ಟ ಅಂದ್ರೆ, ಜುಲೈ 13ನೇ ತಾರಿಖಿನಿಂದ ಜುಲೈ 27ನೇ ತಾರೀಖಿನೊಳಗ 36 ಲಕ್ಷ ರೂಪಾಯಿ ಬಿಡಿಸಿದರು ಬಿಡಿಸಿದರ, 8 ಲಕ್ಷ, 2 ಲಕ್ಷ, ಲಕ್ಷ, 60 ಸಾವಿರ ಈ ತೆರನಾಗಿ ಒಟ್ಟ ಏಳೆಂಟಸಾರಿನ ಎಷ್ಟ ಒಟ್ಟ 36 ಲಕ್ಷ ರೂಪಾಯಿ ಸ್ವಚ್ಛ ಆಗೈತಿ ಅದಕ್ಕ ಕಾರಣ ಏನತಂದ್ರೆ ನನಗೆ ಈ ಸಲ ಅಲ್ದ ಹೋದ ವರ್ಷ ಇವರು ನನಗೆ ಒಂದು ಬಂಗಾರದು ಬ್ರ್ಯಾಸ್ಲೆಟ್ ಮಾಡಿಸಬೇಕು ಅಂತ ಹೇಳಿದರು. ಆಯ್ತು 2 ತೊಲಿದಾ ಮಾಡಿಸಿಕೊಡ್ತೇನಿ ಅಂದ್ಯಾ, ಮತ್ತೆ 3 ತೊಲಿದು ಅಂತಂದ್ರು ಆಯ್ತು ಮಾಡಿಸಿಕೊಡ್ತೀನಿ ಅಂದೆ, ಮತ್ತೊಂದು ಸಲ ಅಳಾಕತ್ತಿದ್ರು ನೀವು ಅಜ್ಜರ ಇನ್ನೊಂದು ನಾಲ್ಕು ತೊಲಿದು, ಯಾಕಾಗ್ವಲ್ತರಿ ಆಯ್ತು ಮಾಡಿಸಿಕೊಡ್ತೇನಿ ತೊಗೊಳ್ರಿ, ಇಲ್ಲ ನನಗ ನೆನಪು ಉಳಿಯುವಂತದ ಮಾಡಿಸ್ರಿ

ಪೀಠಾಧಿಪತಿಗಳೇ ಹೀಗೆ ಇಬ್ಬಗೆಯ ನೀತಿ ತಾಳಿದ್ರೆ ಆಶ್ರಮದ ಅಕ್ರಮ ಬಯಲಿಗೆ ಬೀಳೋದಾದ್ರೂ ಹೇಗೆ. ಭ್ರಷ್ಠರಿಗೆ ಶಿಕ್ಷೆ ಆಗೋದಾದ್ರೂ ಹೇಗೆ. ಅಂದು ಅಬ್ಬರಸಿ ಬೊಬ್ಬಿರಿದು ಅಕ್ರಮದ ಕುರಿತು ಪತ್ರ ಬರೆದವರೆಲ್ಲಾ ಇಂದು ಸೈಲೆಂಟ್ ಆಗಿದ್ದಾರೆ. ಗೌಪ್ಯ ಸಭೆಗಳನ್ನು ನಡೆಸಿ ಅಕ್ರಮಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ. ಆಶ್ರಮದ ಭಕ್ತರಾದ ಮಾಜಿ ಸಚಿವ ಹೆಚ್.ಕೆ.ಪಾಟೀಲ, ಸಚಿವ ಶ್ರೀರಾಮುಲು ಕೂಡಾ ಮೌನಕ್ಕೆ ಶರಣಾಗಿದ್ದಾರೆ. ಅಂದು ಮಠದ ಅಕ್ರಮವನ್ನೆಲ್ಲ ಬಯಲಿಗೆಳೆಯದೇ ಬಿಡಲ್ಲ ಎಂದು ಗುಡುಗಿದ್ದ ಮಠದ ಪ್ರಮುಖ ಮುಖಂಡ ಅನಿಲ ಮೆಣಶಿನಕಾಯಿ ಕೂಡಾ ಈಗ ಗಪ್ ಚುಪ್. ಎಲ್ಲರೂ ಇಲ್ಲಿ ಭ್ರಷ್ಠರ ರಕ್ಷಣೆಗೆ ನಿಂತಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ ಪ್ರಾಮಾಣಿಕ ಭಕ್ತರು ಮಾತ್ರ ಈ ಅಕ್ರಮದ ಬಗ್ಗೆ ಇನ್ನೂ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ

The post ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ಚಿನ್ನ ನಾಪತ್ತೆ ಕೇಸ್​ಗೆ ಟ್ವಿಸ್ಟ್​.. ಸ್ವಾಮೀಜಿಗಳ ನಡೆ ಮೇಲೆ ಅನುಮಾನ? appeared first on News First Kannada.

Source: newsfirstlive.com

Source link