ಗದಗ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ | Hubli Hindu Muslim Communal Harmony Mooru Savira Mutt Dingaleshwara Swamiji


ಗದಗ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ

ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ

ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದ ಮಠ ಇದು. ಅಂತಹ ಖ್ಯಾತ ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಶ್ರೀಗಳಿಗೆ ಹಿಂದೂ ಮುಸ್ಲಿಂ ಏಕ್ ಹೈ ಎನ್ನುವ ಘೋಷವಾಕ್ಯದೊಂದಿಗೆ ಶ್ರೀಮಠ ಮುನ್ನಡೆಸುವ ಜವಾಬ್ದಾರಿ ಲಭಿಸಿದೆ. ಕೋಮು ಸೌಹಾರ್ತತೆಗೆ ಹೆಸರುವಾಸಿಯಾದ ಐತಿಹಾಸಿಕ ಮಠಕ್ಕೆ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಕಾರ್ಯ ನಡೆಸಲಾಗಿದೆ. ಪ್ರಸಿದ್ಧ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿಗಳು, ಜಗದ್ಗುರು ಫಕ್ಕೀರೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅಪಾರ ಭಕ್ತರು, ಹಾಗೂ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಸಂಪ್ರದಾಯ ಬದ್ಧವಾಗಿ ಉತ್ತರಾಧಿಕಾರಿ ನೇಮಕ ಮಾಡಲಾಯಿತು.

ಗದಗ ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಮಠ ಅಂದ್ರೆ ಅದು ಉತ್ತರ ಕರ್ನಾಟಕದ ಪ್ರಸಿದ್ಧ ಮಠ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರುವಾಸಿಯಾದ ಮಠ. ಐತಿಹಾಸಿಕ ಮಠದಲ್ಲಿ ಈಗ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಶ್ರೀಮಠಕ್ಕೆ ಇಂದು ನೂತನ ಉತ್ತರಾಧಿಕಾರಿಯನ್ನಾಗಿ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸರು ಮಠದ ಶ್ರೀಗಳಾದ ದಿಂಗಾಲೇಶ್ವರ ಸ್ವಾಮೀಜಿಗಳನ್ನು ನೇಮಕ ಮಾಡಲಾಯಿತು.

ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಐತಿಹಾಸಿಕ ಶ್ರೀ ಜಗದ್ಗುರು ಫಕ್ಕೀರೇಶ್ವರ ಸಂಸ್ಥಾನ ಮಠಕ್ಕೆ ತನ್ನದೆ ಆದ ಇತಿಹಾಸವಿದೆ. ಇಂದು ಮಠಾಧೀಶರು ಹಾಗೂ ಸಾವಿರಾರು ಭಕ್ತ ಸಮೂಹದ ನಡುವೆ ದಿಂಗಾಲೇಶ್ವರ ಶ್ರೀಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಶಿರಹಟ್ಟಿ ಫಕ್ಕೀರೇಶ್ವರ ಮಠದ ಪಟ್ಟಾಧ್ಯಕ್ಷರಾದ ಫಕೀರ ಸಿದ್ದರಾಮ ಮಹಾಸ್ವಾಮಿಗಳ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಶ್ರೀಗಳನ್ನು ನೇಮಕ ಮಾಡಲಾಗಿದೆ.

ಪಟ್ಟಾಧ್ಯಕ್ಷರಾದ ಶ್ರೀ ಫಕ್ಕೀರೇಶ್ವರ ಸಿದ್ದರಾಮ ಮಹಾಸ್ವಾಮಿಗಳು, ಮೂಲ ಕರ್ತೃಗದ್ದುಗೆ ಪ್ರೇರಣೆಯಂತೆ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಎರಡು ತಿಂಗಳಿಂದ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಶ್ರೀಗಳನ್ನು ಮಾಡುವಂತೆ ಕರ್ತೃಗದ್ದುಗೆ ಪ್ರೇರಣೆ ಆಗುತ್ತಿತ್ತು. ಹಾಗಾಗಿ ಬಾಲೆಹೊಸರು ಗ್ರಾಮದ ಭಕ್ತರು ಹಾಗೂ ಶಿರಹಟ್ಟಿ ಫಕ್ಕೀರೇಶ್ವರ ಮಠದ ಭಕ್ತರ ಸಮ್ಮುಖದಲ್ಲಿ ಇಂದು ಉತ್ತರಾಧಿಕಾರಿಯಾಗಿ ನೇಮಕ ಮಾಡಿ ಫಕ್ಕೀರೇಶ್ವರ ಮಠದ ಹಿರಿಯ ಶ್ರೀ ಫಕ್ಕೀರೇಶ್ವರ ಸಿದ್ದರಾಮ ಮಹಾಸ್ವಾಮಿಗಳು ಘೋಷಣೆ ಮಾಡಿದ್ದಾರೆ.

ಶಿರಹಟ್ಟಿ ಪಟ್ಟಣದ ಫಕೀರೇಶ್ವರ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿಯಾಗಿ ನೇಮಕವಾದ ಬಳಿಕ ಬಾಲೆಹೊಸರು ದಿಂಗಾಲೇಶ್ವರ ಸ್ವಾಮೀಜಿಗಳು, ಶ್ರೀ ಮಠದ ಪರಂಪರೆಯಂತೆ ಇನ್ನು ಮುಂದೆ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಎಂದು ನಾಮಕರಣ ಮಾಡಲಾಗಿದೆ. ದಿಂಗಾಲೇಶ್ವರ ಶ್ರೀಗಳು ಮೊದಲಿನ ಕಾವಿ ವಸ್ತ್ರಗಳು ತೆಗೆದು ಫಕೀರೇಶ್ವರ ಮಠದ ಸಂಪ್ರದಾಯದಂತೆ ವಸ್ತ್ರವಿನ್ಯಾಸ ತೊಟ್ಟು ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಈಗಿನ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಹಿರಿಯ ಶ್ರೀಗಳಾಗಿ ಹಾಗೂ ಉತ್ತರಾಧಿಕಾರಿಯಾಗಿ ನೇಮಕವಾದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಶ್ರೀಗಳಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ‌. ಶಿರಹಟ್ಟಿ ಫಕೀರೇಶ್ವರ ಮಠದ ಸಂಪ್ರದಾಯ ಕೂಡಾ ಬಹಳ ವಿಭಿನ್ನವಾಗಿವೆ. ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಗತವೈಭವವನ್ನು ಸಾರುವುದರ ಮೂಲಕ ದೇಶದಲ್ಲಿಯೇ ಹಿಂದೂ ಮುಸ್ಲಿಂ ಸಂಪ್ರದಾಯವನ್ನು ಶತ ಶತಮಾನಗಳಿಂದ ಅಳವಡಿಸಿಕೊಂಡು ಇಂದಿಗೂ ಸಹ ಮಠದ ಪ್ರತಿಯೊಂದು ಆಚರಣೆಯೂ ದಿನ ನಿತ್ಯ ಹಿಂದೂ ಮುಸ್ಲಿಂ ಪರಂಪರೆಯದೆ ನಡೆದುಕೊಂಡು ಬರುತ್ತಿವೆ. ಹೀಗಾಗಿ ಫಕೀರೇಶ್ವರ ಮಠದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ನೂತನ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.

ಫಕೀರೇಶ್ವರ ಮಠದ ಸುಮಾರು 60 ಶಾಖಾ ಮಠಗಳು, ಹಾಗೂ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿ ನೂತನವಾಗಿ ಉತ್ತರಾಧಿಕಾರಿಗಳ ಮೇಲೆಯಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಎತ್ತಿ ಹಿಡಿದು ಸಂಪ್ರದಾಯದಂತೆ ಮಠವನ್ನು ಮುನ್ನಡೆಸುತ್ತಾರೆ ಎನ್ನುವ ಅಭಿಲಾಷೆ ಭಕ್ತರಲ್ಲಿದೆ. ಒಟ್ಟಿನಲ್ಲಿ ಫಕೀರೇಶ್ವರ ಕರ್ತೃಗದ್ದುಗೆ ಪ್ರೇರಣೆಯಂತೆ ಉತ್ತರಾಧಿಕಾರಿ ನೇಮಕವಾಗಿದ್ದು, ಭಕ್ತರಲ್ಲಿ ಸಂತಸ ಮೂಡಿಸಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

TV9 Kannada


Leave a Reply

Your email address will not be published.