ಮೈಸೂರು: ರಾಜ್ಯದಲ್ಲಿ ಲಾಕ್​​ಡೌನ್ ಜಾರಿಯಾದ ಬಳಿಕ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದೆ. ಇದರ ನಡುವೆ ಮೈಸೂರು ಮಹಾನಗರ ಪಾಲಿಗೆ ಮಹತ್ವದ ಆದೇಶ ಹೊರಡಿಸಿದ್ದು, ಬಡವರಿಗೆ ಉಚಿತವಾಗಿ ಆಹಾರ ವಿತರಣೆ ಮಾಡಬೇಕಾದರೆ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದೆ.

ಲಾಕ್​​ಡೌನ್​ ಕಾರಣದಿಂದ ಬೀದಿ ಬದಿ ವ್ಯಾಪಾರಿಗಳು, ಬಡವರು ಸೇರಿದಂತೆ ಹಲವು ಒಪ್ಪೊತ್ತಿನ ಊಟವನ್ನು ಪಡೆಯುವುದು ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ಸ್ವಯಂ ಪ್ರೇರಿತವಾಗಿ ಹಸಿದವರಿಗೆ ಉಚಿತವಾಗಿ ಆಹಾರ ಪೊಟ್ಟಣಗಳನ್ನು ಹಂಚಿಕೆ ಮಾಡುತ್ತಿದ್ದಾರೆ.

ಆದರೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ಉಚಿತ ಆಹಾರ ನೀಡಬೇಕಿದ್ರೆ ಪಾಲಿಕೆ ಅನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ. ಯಾರೇ ಉಚಿತವಾಗಿ ಆಹಾರ ವಿತರಿಸಬೇಕಾದರೆ ವಲಯ ಕಚೇರಿಯ ಅಧಿಕಾರಿಗಳ ಪೂರ್ವಾನುಮತಿ ಕಡ್ಡಾಯ ಮಾಡಲಾಗಿದೆ.

ಎಲ್ಲೆಂದರಲ್ಲಿ ಆಹಾರ ವಿತರಣೆಗೆ ಬ್ರೇಕ್​ ಹಾಕಿರುವ ಪಾಲಿಕೆ, ನಿಗದಿತ ಸ್ಥಳದಲ್ಲಿ ಮಾತ್ರ ಆಹಾರ ವಿತರಣೆಗೆ ಅವಕಾಶ ಕಲ್ಪಿಸಿದೆ. ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆ ಪಾಲಿಕೆ ಈ ಕ್ರಮವನ್ನು ಕೈಗೊಂಡಿದ್ದು, ಮೈಸೂರಿನ ವಸ್ತು ಪ್ರದರ್ಶನ ಆವರಣ ಮುಂಭಾಗ, ಜೆ.ಕೆ ಮೈದಾನದಲ್ಲಿ ಬೆಳಗ್ಗೆ 8 ರಿಂದ 11ರವರೆಗೂ, ಆ ಬಳಿಕ ಮಧ್ಯಾಹ್ನ 12:30 ರಿಂದ 2:30ರ ವರಗೆ ಹಾಗೂ ಸಂಜೆ 6 ರಿಂದ 8ರ ವರಗೆ ಮಾತ್ರ ವಿತರಿಸಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಇದೇ ವೇಳೆ ಬಡವರ ಪಾಲಿಗೆ ನೆರವಾಗಿದ್ದ ಸಂಘ ಸಂಸ್ಥೆಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಆದೇಶ ಹೊರಡಿಸಿದ್ದಾರೆ.

The post ಗಮನಿಸಿ; ಮೈಸೂರಿನಲ್ಲಿ ಇನ್ಮೂಂದೆ ಉಚಿತ ಆಹಾರ ಹಂಚಿಕೆಗೆ ಅನುಮತಿ ಕಡ್ಡಾಯ appeared first on News First Kannada.

Source: newsfirstlive.com

Source link